ಸಿಡ್ನಿ: ಸಿಡ್ನಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಮಳೆಯ ಕಾರಣದಿಂದ ಡ್ರಾನಲ್ಲಿ ಅಂತ್ಯವಾಯಿತು. ಈ ಮೂಲಕ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿತು.
1947ರಿಂದ ಭಾರತ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಆಡುತ್ತಿದೆ. ಆದರೆ, ಅವರ ನೆಲದಲ್ಲಿ ಸರಣಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ, ಈಗ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡ ಗೆಲುವಿನ ನಗೆ ಬೀರಿದೆ. 2-1 ಅಂತರದಿಂದ ಸರಣಿಯನ್ನು ತನ್ನದಾಗಿಸಿಕೊಂಡಿತು.
ಮೊದಲ ಹಾಗೂ ಮೂರನೇ ಪಂದ್ಯವನ್ನು ಭಾರತ ಗೆದ್ದು ಬೀಗಿದರೆ, ಎರಡನೇ ಮ್ಯಾಚ್ಅನ್ನು ಆಸ್ಟ್ರೇಲಿಯಾ ಗೆದ್ದಿತ್ತು. ಈಗ ನಾಲ್ಕನೇ ಟೆಸ್ಟ್ ಮಳೆಯ ಕಾರಣ ರದ್ದಾದ ಹಿನ್ನೆಲೆಯಲ್ಲಿ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ.
ಅಂತಿಮ ಟೆಸ್ಟ್ನಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಕೊಹ್ಲಿ ಪಡೆ, 626ರನ್ಗಳ ಬೃಹತ್ ಮೊತ್ತ ಪೇರಿಸಿತ್ತು. ನಂತರ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 300 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಒಪ್ಪಿಸಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ಭಾರತ 6ರನ್ ಗಳಿಸಿ ಆಡುತ್ತಿತ್ತು. ಆದರೆ, ಭಾನುವಾರ ಬ್ಯಾಡ್ಲೈಟ್ ಎನ್ನುವ ಕಾರಣಕ್ಕೆ ಪಂದ್ಯ ಮುಂದೂಡಲಾಗಿತ್ತು. ಇಂದು ಮಳೆ ಕಾರಣ ಪಂದ್ಯ ರದ್ದು ಮಾಡಲಾಯಿತು.
'ನನ್ನ ಜೀವನದ ಅತ್ಯಂತ ಅವಿಸ್ಮರಣೀಯ ಕ್ಷಣ'
ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಅದರ ನೆಲದಲ್ಲೇ ಬಗ್ಗು ಬಡಿದು ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಆಸಿಸ್ ವಿರುದ್ಧ ಅದರ ನೆಲದಲ್ಲೇ ಸರಣಿ ಜಯ ದಾಖಲಿಸಿದ ಟೀಂ ಇಂಡಿಯಾ ನಾಯಕ ಫುಲ್ ಖುಷ್ ಆಗಿದ್ದಾರೆ.
ಸಿಡ್ನಿಯಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯ ಮಳೆ ಕಾಟದಿಂದಾಗಿ ನೀರಸ ಡ್ರಾದಲ್ಲಿ ಅಂತ್ಯವಾದರೂ ಸರಣಿಯಲ್ಲಿ ಭಾರತ ತಂಡ 2-1ರ ಅಂತರದಲ್ಲಿ ಜಯ ಸಾಧಿಸಿ ಐತಿಹಾಸಿ ಟೆಸ್ಟ್ ಸರಣಿ ಜಯ ದಾಖಲಿಸಿದೆ. ಈ ಬಗ್ಗೆ ವಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನನ್ನ ಜೀವನದ ಅತ್ಯಂತ ಅವಿಸರಣೀಯ ಕ್ಷಣ, ಇದಕ್ಕಿಂತ ದೊಡ್ಡ ಗೌರವ ಸಂಗತಿ ಮತ್ತೊಂದಿಲ್ಲ ಎಂದು ಹೇಳಿದ್ದಾರೆ.
ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಣಿ ಜಯ ಶ್ರೇಯಸ್ಸು ಇಡೀ ತಂಡದ ಎಲ್ಲ ಸದಸ್ಯರಿಗೂ ಸಲ್ಲುತ್ತದೆ. ಪ್ರತಿಯೊಂದು ವಿಭಾಗದಲ್ಲೂ ನಮ್ಮನ್ನು ನಾವು ಪಂದ್ಯದಿಂದ ಪಂದ್ಯಕ್ಕೆ ಉತ್ತಮ ಪಡಿಸಿಕೊಂಡೆವು. ಬಹುಶಃ ಇದೇ ನಮ್ಮ ಯಶಸ್ಸಿನ ಕಾರಣವಾಗಿರಬಹುದು. ನನ್ನ ಪ್ರಕಾರ ವಿಶ್ವಕಪ್ ಗೆಲುವಿಗಿಂತಲೂ ಈ ಟೆಸ್ಟ್ ಸರಣಿ ಜಯದ ಖುಷಿ ದೊಡ್ಡದು . ನನ್ನ ಕ್ರಿಕೆಟ್ ಜೀವನದಲ್ಲೇ ಇದು ಅತ್ಯಂತ ಗೌರವದ ಕ್ಷಣವಾಗಿದೆ. ಕಳೆದ 12 ತಿಂಗಳ ಹಿಂದೆ ನನ್ನ ನಾಯಕನ ಜವಾಬ್ದಾರಿಯ ಜನರ್ಿ ಇಲ್ಲಿಂದಲೇ ಆರಂಭವಾಗಿತ್ತು. ಇದೇ ಕ್ರೀಡಾಂಗಣದಲ್ಲಿ ಆಸಿಸ್ ವಿರುದ್ಧ ಟೆಸ್ಟ್ ಸರಣಿ ಜಯಿಸಿರುವುದು ಅತ್ಯಂತ ಖುಷಿಗೆ ಕಾರಣವಾಗಿದೆ.
ಇದೇ ವೇಳೆ ತಂಡದ ಸಹ ಆಟಗಾರರ ಪ್ರದರ್ಶನದ ಕುರಿತು ಸಂತಸ ವ್ಯಕ್ತಪಡಿಸಿದ ಕೊಹ್ಲಿ, ಇಂತಹ ಅದ್ಭುತ ಆಟಗಾರರನ್ನು ಮುನ್ನಡೆಸಲು ನಿಜಕ್ಕೂ ನಾನು ಹೆಮ್ಮೆ ಪಡುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.