ದೇಶವನ್ನು ಸಾಲದ ಕೂಪಕ್ಕೆ ತಳ್ಳಿದ ಇಮ್ರಾನ್ ಸರ್ಕಾರ

ಇಸ್ಲಾಮಾಬಾದ್, ಅ 10:   ಪಾಕಿಸ್ತಾನದ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ದೇಶವನ್ನು ಸಾಲದ  ಕೂಪಕ್ಕೆ ತಳ್ಳಿದೆ ಎಂಬ ಮಾಹಿತಿ ಸರಕಾರಿ  ಮೂಲಗಳಿಂದಲೇ  ಬಹಿರಂಗವಾಗಿದೆ . ಕೇವಲ ಒಂದು ವರ್ಷದ ಆಡಳಿತ ಅವಧಿಯಲ್ಲಿ ಸಾಲ ಪಡೆಯುವುದರಲ್ಲಿ ಈ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿಸಿದೆ.  ಈ ಒಂದು ವರ್ಷದಲ್ಲಿ ಪಾಕ್ 7.5 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ನೀಡಿರುವ ವರದಿಯಲ್ಲಿ ಇದು  ಬಹಿರಂಗವಾಗಿದೆ . ಬ್ಯಾಂಕ್  ಈ ವರದಿಯನ್ನು ಪ್ರಧಾನಮಂತ್ರಿ ಕಚೇರಿಗೆ ಕಳುಹಿಸಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. 2018 ರಿಂದ 2019ರ ಅವಧಿಯಲ್ಲಿ ಪಾಕ್ ಸರ್ಕಾರ 2.8 ಲಕ್ಷ ಕೋಟಿ ರೂ.ಗಳನ್ನು ವಿದೇಶಿ ಮೂಲಗಳಿಂದ ಹಾಗೂ 4.7 ಲಕ್ಷ ಕೋಟಿ ರೂ.ವನ್ನು ಆಂತರಿಕ ಮೂಲಗಳಿಂದ ಸಾಲ ಪಡೆದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.  ಜತೆಗೆ ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿ ಪಾಕಿಸ್ತಾನದ ಸಾರ್ವಜನಿಕ ಸಾಲದಲ್ಲಿ ಶೇಕಡಾ 1.43 ಏರಿಕೆಯಾಗಿದೆ.  ಹೀಗಾಗಿ ಪಾತಾಳಕ್ಕೆ ಇಳಿದಿರುವ ಪಾಕ್ ಆರ್ಥಿಕತೆಯನ್ನು ಸರಿದಾರಿಗೆ ತರಲು  ಪ್ರಧಾನಿ ಇಮ್ರಾನ್ ಖಾನ್ ವಿವಿಧ ದೇಶಗಳಿಗೆ ಭೇಟಿ ನೀಡಿ ಹಣಕಾಸಿನ ನೆರವು ನೀಡುವಂತೆ ಮನವಿ ಮಾಡುತ್ತಿದ್ದಾರೆ.