ಗ್ಯಾರಂಟಿ ಯೋಜನೆಗಳ ಎಲ್‌ಇಡಿ ಕಲಾಜಾಥಾ ಪ್ರದರ್ಶನ ಸಂಚಾರಿ ವಾಹನಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ

ಗ್ಯಾರಂಟಿ ಯೋಜನೆಗಳ ಎಲ್‌ಇಡಿ ಕಲಾಜಾಥಾ ಪ್ರದರ್ಶನ ಸಂಚಾರಿ ವಾಹನಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ The District Magistrate flagged off the LED Kalajatha exhibition vehicle for guarantee projects

ಧಾರವಾಡ   12:  ಧಾರವಾಡ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆ ಕುರಿತು ಜನಜಾಗೃತಿ ಮೂಡಿಸಲು ಎಲ್‌ಇಡಿ ಕಲಾಜಾಥಾ ಪ್ರದರ್ಶನ ಸಂಚಾರಿ ವಾಹನಕ್ಕೆ ನಿನ್ನೆ (ನ.11) ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಚಾಲನೆ ನೀಡಿದರು.  

ನಂತರ ಅವರು ಮಾತನಾಡಿ, ರಾಜ್ಯ ಸರ್ಕಾರವು ಸಾಮಾನ್ಯ ಜನರ ಜೀವನಮಟ್ಟವನ್ನು ಹೆಚ್ಚಿಸಲು ಹಲವು ಜನಹಿತದ ಯೋಜನೆಗಳನ್ನು ಜಾರಿಗೊಳಿಸಿದೆ. ಪಂಚ ಗ್ಯಾರಂಟಿ ಯೋಜನೆಯು ಗ್ರಾಮೀಣ ಹಾಗೂ ನಗರ ಬಡಜನರ ಆರ್ಥಿಕ ಬಲವರ್ಧನೆಗೆ ಮಹತ್ತರ ಪಾತ್ರವಹಿಸುತ್ತಿದೆ. ಈ ಯೋಜನೆಯ ಮಾಹಿತಿ ಪ್ರತಿಯೊಂದು ಕುಟುಂಬಕ್ಕೂ ತಲುಪುವಂತೆ ವಾರ್ತಾ ಇಲಾಖೆಯ ಈ ಪ್ರಯತ್ನ ಶ್ಲಾಘನೀಯ ಎಂದು ಅವರು ಹೇಳಿದರು.  

ಜನರಿಗೆ ಸರ್ಕಾರದ ಯೋಜನೆಗಳು ನೇರವಾಗಿ ತಲುಪಬೇಕು ಎಂಬ ಉದ್ದೇಶದಿಂದ ತಂತ್ರಜ್ಞಾನವನ್ನು ಬಳಸಿಕೊಂಡು ಎಲ್‌ಇಡಿ ಕಲಾಜಾಥಾ ಪ್ರದರ್ಶನ ಸಂಚಾರಿ ವಾಹನದ ಮೂಲಕ ಸಾರ್ವಜನಿಕರಿಗೆ ಪ್ರಚಾರ ಮಾಡಲಾಗುತ್ತಿದೆ. ಜನರು ಇದರ ಬಗ್ಗೆ ತಿಳಿದು ಸರಿಯಾದ ರೀತಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುವುದು ಅತ್ಯಂತ ಅಗತ್ಯವಿದೆ ಎಂದು ಹೇಳಿದರು.  

ಈ ಕಲಾಜಾಥಾ ಪ್ರದರ್ಶನ ಸಂಚಾರಿ ವಾಹನವು  ಜಿಲ್ಲೆಯ 20 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನವೆಂಬರ್ 12, 2025 ರಿಂದ ನವೆಂಬರ್ 16 ರವರೆಗೆ ಸಂಚರಿಸಿ, ಗ್ಯಾರಂಟಿ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸಲಿದೆ ಎಂದು ಅವರು ಹೇಳಿದರು.  

ನವೆಂಬರ್ 12, 2025 ರಿಂದ ನವೆಂಬರ್ 14, 2025 ರವರೆಗೆ ಕುಂದಗೋಳ ತಾಲೂಕಿನ ಹರ್ಲಾಪೂರ ಗ್ರಾಮದ ಶ್ರೀ ಸ್ವಾಮಿವಿವೇಕಾನಂದ ಜಾನಪದ ಕಲಾತಂಡದ ಕಲಾವಿದರುಗಳಾದ ದಾವಲ್ ಸಾಬ್ ದೊಡಮನಿ, ಪ್ರಕಾಶ ಮಡಿವಾಳರ, ಶಿವು ಡಂಬಳ, ಕಿರಣ ಪಟ್ಟಣಶೆಟ್ಟಿ, ಮೌಲಾಸಾಬ ನದಾಫ್ ಇವರಿಂದ ಧಾರವಾಡ ತಾಲೂಕಿನ ತೇಗೂರು, ಹಳೇ ತೇಗೂರು, ಬೆಲೂರು, ಕೊಟೂರು, ಮಾದನಭಾವಿ, ತಡಕೊಡ, ಕೊಟಬಾಗಿ, ಉಪ್ಪಿನಬೆಟಗೇರಿ, ಪುಡಕಲಕಟ್ಟಿ, ಕರಡಿಗುಡ್ಡ ಗ್ರಾಮಗಳಲ್ಲಿ ಸಂಚರಿಸಿ ಕರ್ನಾಟಕ ಸರ್ಕಾರದ  ಗ್ಯಾರಂಟಿ ಯೋಜನೆಗಳ ಕುರಿತು ಗೀತೆಗಳು ಮತ್ತು ಬಿತ್ತಿ ಚಿತ್ರಗಳ ಮುಖಾಂತರ ಹಾಗೂ ಟಿವಿ ಶೋ ಮತ್ತು ಬೀದಿ ನಾಟಕ ಮೂಲಕ ಗ್ಯಾರಂಟಿ ಯೋಜನೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ನಡೆಸುವರು.   

ಹಾಗೂ ನವೆಂಬರ್ 14, 2025 ರಿಂದ ನವೆಂಬರ್ 16, 2025 ರವರೆಗೆ ಕುಂದಗೋಳ ತಾಲೂಕಿನ ಹರ್ಲಾಪೂರ ಗ್ರಾಮದ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ತಂಡದ ಕಲಾವಿದರಾದ ಈಶ್ವರ ಅರಳಿ, ನಾಗರಾಜ ಗೌಡಣ್ಣನವರ, ಶರಫಿ ದೊಡ್ಡಮನಿ, ಮಲ್ಲೇಶ ಮುಳಗುಂದ, ಎಸ್‌.ಎಸ್‌. ಹಿರೇಮಠ ಇವರಿಂದ ಧಾರವಾಡ ತಾಲೂಕಿನ ಮರೇವಾಡ, ಅಮ್ಮಿನಭಾವಿ, ಕಲಘಟಗಿ ತಾಲೂಕಿನ ಜಿ.ಬಸವನಕೊಪ್ಪ, ದುಮ್ಮವಾಡ, ಹಿರೇಹೊನ್ನಳ್ಳಿ, ಉಗ್ನಿಕೇರಿ ಹಾಗೂ ಹುಬ್ಬಳ್ಳಿ ತಾಲೂಕಿನ ಮಿಶ್ರಿಕೋಟಿ, ಅಂಚಟಗೇರಿ, ಚನ್ನಾಪೂರ, ಕರಡಿಕೊಪ್ಪ ಗ್ರಾಮಗಳಲ್ಲಿ ಸಂಚರಿಸಿ, ಕರ್ನಾಟಕ ಸರ್ಕಾರದ  ಗ್ಯಾರಂಟಿ ಯೋಜನೆಗಳ ಕುರಿತು ಗೀತೆಗಳು ಮತ್ತು ಬಿತ್ತಿ ಚಿತ್ರಗಳ ಮುಖಾಂತರ ಹಾಗೂ ಟಿವಿ ಶೋ ಮತ್ತು ಬೀದಿ ನಾಟಕ ಮೂಲಕ ಗ್ಯಾರಂಟಿ ಯೋಜನೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ನಡೆಸುವರು ಎಂದು ಅವರು ತಿಳಿಸಿದರು.  

ಕಾರ್ಯಕ್ರಮ ಚಾಲನಾ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಕಲಾತಂಡದ ಕಲಾವಿದರು ಗ್ಯಾರಂಟಿ ಯೋಜನೆಗಳ ಕುರಿತು ಗೀತೆಗಳನ್ನು ಮತ್ತು ಬೀದಿನಾಟಕ ಪ್ರದರ್ಶನ ನೀಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುರೇಶ ಹಿರೇಮಠ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸ್ವಾಮಿ ವಿವೇಕಾನಂದ ಕಲಾತಂಡದ ನಾಯಕ ದಾವಲ್ ಸಾಬ್ ದೊಡಮನಿ ಅವರು ವಂದಿಸಿದರು.  

ಈ ಸಂದರ್ಭದಲ್ಲಿ  ಸಾರ್ವಜನಿಕರು, ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ ಮತ್ತು ವಾರ್ತಾ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ಕಲಾತಂಡಗಳ ಸದಸ್ಯರು ಉಪಸ್ಥಿತರಿದ್ದರು.