ರಾಷ್ಟ್ರದ ಮೂಲಭೂತ ಶಾಸನವೇ ಸಂವಿಧಾನ: ಡಾ. ಪಾಟೀಲ

ರಾಷ್ಟ್ರದ ಮೂಲಭೂತ ಶಾಸನವೇ ಸಂವಿಧಾನ: ಡಾ. ಪಾಟೀಲ The Constitution is the fundamental law of the nation: Dr. Patil

ಬಾಗಲಕೋಟೆ 26: ಸಂವಿಧಾನವು ವಿಕಸನ ಪ್ರಕ್ರಿಯೆಯ ಫಲವಾಗಿದ್ದು ಒಂದು ರಾಷ್ಟ್ರದ ಜನತೆ, ಸರಕಾರ ಮತ್ತು ದೇಶದ ಸ್ವರೂಪವನ್ನು ನಿರ್ಧರಿಸುವ ಮೂಲಭೂತ ಶಾಸನವಾಗಿದೆ ಎಂದು ವಿದ್ಯಾಗಿರಿಯ ಬಸವೇಶ್ವರ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಆರ್‌. ಪಾಟೀಲ್ ಹೇಳಿದರು.    

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗ ಹಾಗೂ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸಂವಿಧಾನ ದಿನಾಚರಣೆಯನ್ನು ಸಂವಿಧಾನದ ಪ್ರತಿಜ್ಞಾವಿಧಿ ಹೇಳುವ ಮೂಲಕ ಉದ್ಘಾಟಿಸಿ ಮಾತನಾಡಿದರು. ದೇಶದ ಪ್ರತಿಯೊಬ್ಬರು ಒಪ್ಪುವ ಸಂವಿಧಾನವನ್ನು ರಚನೆ ಮಾಡಿದರೆ ನಿಮಗೆ ಸ್ವಾತಂತ್ರ ಕೊಡುತ್ತೇವೆ ಎಂದು ಹೇಳಿದ ಬ್ರಿಟಿಷರ ಮಾತಿಗೆ ಪ್ರತ್ಯುತ್ತರವಾಗಿ  ಯಾವುದೇ ದ್ವಂದ್ವವಿಲ್ಲದ ಮತ್ತು ವಿಸ್ತೃತವಾದ ಸಂವಿಧಾನ ರಚಿಸುವಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಅವರ ಸಮಿತಿಯ ಪರಿಶ್ರಮ ಅದ್ವಿತೀಯ ಎಂದರು. 

ಜಗತ್ತಿನ ಆಧುನಿಕ ದೇಶಗಳ ಸಂವಿಧಾನದಲ್ಲಿರುವ ಪ್ರಮುಖ ವಿಷಯವನ್ನು ಹೆಕ್ಕಿ ತಂದು ನಮ್ಮ ಸಂವಿಧಾನದಲ್ಲಿ ಅಳವಡಿಸಲಾಗಿದೆ. ನಾಗರಿಕ ಸರ್ಕಾರಗಳು ಎಲ್ಲಿ ಜೀವಂತವಾಗಿರುತ್ತವೆಯೋ ಅಲ್ಲಿ ನಾಗರಿಕರು ಸಂವಿಧಾನವನ್ನು ಗೌರವಿಸುತ್ತಾರೆ. ಜಾಗತಿಕವಾಗಿ ಹಲವಾರು ದೇಶಗಳ ಸರಕಾರಗಳು ಮತ್ತು ಸಂವಿಧಾನಗಳು ಪತನಗೊಂಡು ಮರುರಚನೆಗೊಂಡಿರುವ ಸಂದರ್ಭಗಳು ನಮ್ಮೆದುರು ಇವೆ. ಆದರೆ ಭಾರತದ ಸಂವಿಧಾನ ಸುಭದ್ರ ಮತ್ತು ವ್ಯವಸ್ಥಿತವಾಗಿದ್ದು ಎಲ್ಲರೂ ಒಪ್ಪುವ ಗೊಂದಲ ರಹಿತ ಸಂವಿಧಾನವಾಗಿದೆ. ಸಂವಿಧಾನದ ಮೂಲ ಆಶಯವನ್ನು ಪೂರ್ವ ಪೀಠಿಕೆಯು ಸಾರುವ ಕೆಲಸ ಮಾಡುತ್ತಿದ್ದು ಅದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದರು. 

 ಅಧ್ಯಕ್ಷ ಸ್ಥಾನ ವಹಿಸಿದ ಪ್ರಾಚಾರ್ಯಎಸ್‌. ಆರ್‌. ಮೂಗನೂರಮಠ ಅವರು ಮಾತನಾಡಿ ವೇದ, ಉಪನಿಷತ್ತುಗಳು ಜೀವನ ಕ್ರಮವನ್ನು ಹೇಳುತ್ತವೆ. ಸಂವಿಧಾನವು ಜೀವನದ ಜೊತೆಗೆ ಮಾನವೀಯ ಮೌಲ್ಯಗಳನ್ನು ತಿಳಿಸುತ್ತದೆ. ಪ್ರಸ್ತುತ ದಿನಗಳಲ್ಲಿ ಅಂತರ್ಜಾಲದಲ್ಲಿ ಮಾಹಿತಿಯು ರಾಶಿಯಾಗಿ ಸಿಗುತ್ತಿದ್ದು ಅದರಲ್ಲಿ ಬೇಕಾದ್ದನ್ನು ಆಯ್ಕೆ ಮಾಡುವುದು ಸವಾಲಿನ ಕೆಲಸವಾಗಿದೆ. ಸರಿಯಾದ ಆಯ್ಕೆ ಮಾಡದಿದ್ದರೆ ಮಾಹಿತಿಯಲ್ಲಿ ಮನುಷ್ಯನೇ ಕಳೆದುಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.  

ಸಂವಿಧಾನ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಯಮುನಾ ಆನೆಗುಂದಿ, ದ್ವಿತೀಯ ಸ್ಥಾನ ಆನಂದ್ ಆನೆಗುಂದಿ, ತೃತೀಯ ಸ್ಥಾನ ತಾಣಜಿ ವಿಭೂತಿ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಯಮುನಾ ಆನೆಗುಂದಿ, ದ್ವಿತೀಯ ಸ್ಥಾನ ಪರಶುರಾಮ ದಂಡಿ, ತೃತೀಯ ಸ್ಥಾನ ಸೃಷ್ಟಿ ಸಾವಕಾರ, ಸಮಾಧಾನಕರ ಬಹುಮಾನ ಶ್ರೀದೇವಿ ಹಿರೇಮಠ ಪಡೆದುಕೊಂಡರು. 

ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಎಮ್‌.ಎಚ್‌.ವಡ್ಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಯು. ರಾಠೋಡ ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಿದರು, ಎನ್‌ಎಸ್‌ಎಸ್ ಘಟಕಾಧಿಕಾರಿ ಡಾ. ವಿರೂಪಾಕ್ಷಿ. ಎನ್‌.ಬಿ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.