ಸಂವಿಧಾನ ನಮ್ಮ ಜೀವನಕ್ಕೆ ಮಾರ್ಗದರ್ಶಕ: ಕೋರಿಶೆಟ್ಟಿ

ಸಂವಿಧಾನ ನಮ್ಮ ಜೀವನಕ್ಕೆ ಮಾರ್ಗದರ್ಶಕ: ಕೋರಿಶೆಟ್ಟಿ  The Constitution is a guide for our lives: Korishetty

ವಿಜಯಪುರ 27: ಸಂವಿಧಾನವು ಕೇವಲ ಪುಸ್ತಕವಾಗಿರದೆ, ನಮ್ಮ ದಿನನಿತ್ಯದ ಜೀವನಕ್ಕೆ ದಾರಿ ತೋರಿಸುವ ಮಾರ್ಗದರ್ಶಕವಾಗಿದೆ ಎಂದು ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪೊ.ವಿಜಯಾ ಕೋರಿಶೆಟ್ಟಿ ಹೇಳಿದರು. 

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ಸಹಯೋಗದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್ ಅವರ 135ನೇ ಜಯಂತಿಯ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಪ್ರತಿಯೊಂದು ಕಾರ್ಯಕ್ರಮದಲ್ಲೂ ಸಂವಿಧಾನದ ಪೀಠಿಕೆಯನ್ನು ಓದುವ ಪದ್ಧತಿಯನ್ನು ಕಡ್ಡಾಯವಾಗಿ ಅನುಸರಿಸಲಾಗುತ್ತಿದೆ. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.  

ವಿಶೇಷ ಉಪನ್ಯಾಸ ನೀಡಿದ ಹುಲಕೋಟಿಯ ಗದಗ ಸಹಕಾರಿ ಜವಳಿ ಗಿರಣಿಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಅರ್ಜುನ ಗೊಳಸಂಗಿ ಮಾತನಾಡಿ, “ಸರ್ವರಿಗೂ ಸಮಪಾಲು ಮತ್ತು ಸಮಬಾಳು ನೀಡಿದ ಮಹಾನ್ ವ್ಯಕ್ತಿ ಬಾಬಾಸಾಹೇಬ್ ಅಂಬೇಡ್ಕರ್‌. ಯಾವುದೇ ಜಯಂತಿಗಳು ಜಾತಿಗೆ ಸೀಮಿತವಾಗಬಾರದು, ಸಂವಿಧಾನವೇ ನಮ್ಮ ಉಸಿರು, ನಮ್ಮ ಹೆಸರು ಆಗಬೇಕು. ಅದು ನಮ್ಮ ಪವಿತ್ರ ಗ್ರಂಥವಾಗಿದ್ದು, ಅದರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಷ್ಟೇ ಅಲ್ಲದೇ ಹಳ್ಳಿಗಳ ಅಭಿವೃದ್ಧಿ ದೇಶದ ಅಭಿವೃದ್ಧಿಗೆ ಮೂಲವಾಗಿದ್ದು, ಅಂಬೇಡ್ಕರ್ ಅವರ ತತ್ವ-ಆದರ್ಶಗಳನ್ನು ಅನುಸರಿಸುವುದು ಅವಶ್ಯಕ ಎಂದರು. 

ಇದೇ ಸಂದರ್ಭದಲ್ಲಿ ಸಿಂಡಿಕೇಟ್ ಸದಸ್ಯ ಶಿವಯೋಗಪ್ಪ ಮಾಡ್ಯಾಳ ಮಾತನಾಡಿ, ಡಾ.ಬಿ.ಆರ್‌.ಅಂಬೇಡ್ಕರ್ ಮಹಿಳೆಯರ ಹಕ್ಕುಗಳ ಪರ ಹೋರಾಟ ನಡೆಸಿ, ಹಿಂದೂ ಕೋಡ್ ಬಿಲ್ ಮೂಲಕ ಮಹಿಳಾ ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಮಹಿಳೆಯರ ಪ್ರಗತಿಯನ್ನು ದೇಶದ ಪ್ರಗತಿಯಿಂದಲೇ ಅಳೆಯಬೇಕು ಎಂಬುದು ಅವರ ಆಶಯವಾಗಿತ್ತು ಎಂದರು. 

ಕುಲಸಚಿವ ಶಂಕರಗೌಡ ಸೊಮನಾಳ ಮಾತನಾಡಿ, ಪ್ರತಿಯೊಬ್ಬರೂ ಕಾನೂನುಗಳ ಕುರಿತು ಅರಿವು ಹೊಂದುವುದು ಅಗತ್ಯ ಎಂದು ಹೇಳಿದರು. 

ಜಯಂತಿ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರನ್ನು ಸನ್ಮಾನಿಸಲಾಯಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ಅಶ್ವಿನಿ ಅನಶಟ್ಟಿ ಪ್ರಥಮ (?5000), ಅಂಕಿತಾ ಹಾವಿನಾಳ ದ್ವಿತೀಯ (?3000) ಹಾಗೂ ನಾಗಮ್ಮ ಗುಬ್ಯಾಡ ತೃತೀಯ (?2000) ಸ್ಥಾನ ಪಡೆದರು. 

ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ.ಬಸವರಾಜ ಲಕ್ಕಣ್ಣವರ, ಸಹಾಯಕ ಕುಲಸಚಿವೆ ರಾಜೇಶ್ವರಿ ಬದನೂರ, ಡಾ. ಸುರೇಖಾ ರಾಠೋಡ ಹಾಗೂ ಬೋಧಕ-ಬೋಧಕೆತರ ಸಿಬ್ಬಂದಿ ಉಪಸ್ಥಿತರಿದ್ದರು. 

ಡಾ. ಬಿ.ಆರ್‌. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಸಂಜೀವಕುಮಾರ ಗಿರಿ ಸ್ವಾಗತಿಸಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ಉಪ ನಿರ್ದೇಶಕ ಡಾ.ಬಾಬು ಲಮಾಣಿ ವಂದಿಸಿದರು. ಡಾ.ಕಲಾವತಿ ಕಾಂಬಳೆ ನಿರೂಪಿಸಿದರು.