ವಿಶಾಖಪಟ್ಟಣ, ಅ.4: ಆರಂಭಿಕ ಆಟಗಾರ ಡೀನ್ ಎಲ್ಗರ್ (ಅಜೇಯ 133) ಹಾಗೂ ಭರವಸೆಯ ಕ್ವಿಂಟನ್ ಡಿಕಾಕ್ (ಅಜೇಯ 69) ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ, ಭಾರತದ ವಿರುದ್ಧ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದೆ.
ಮೂರನೇ ದಿನ ಶುಕ್ರವಾರ 3 ವಿಕೆಟ್ ಗೆ 39 ರನ್ ಗಳಿಂದ ಆಟ ಮುಂದುವರಿಸಿದ ದಕ್ಷಿಣ ಆಫ್ರಿಕಾ ಚಹಾ ವಿರಾಮಕ್ಕೆ 5 ವಿಕೆಟ್ ಗೆ 292 ರನ್ ಕಲೆ ಹಾಕಿದ್ದು, ಪುಟಿದೇಳುವ ಭರವಸೆಯನ್ನು ನೀಡಿದೆ.
ಹಂತ ಹಂತವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕಿ, ಭಾರತದ ಬೌಲರ್ ಗಳನ್ನು ದಂಡಿಸಿದರು. ಮೊದಲಾವಧಿಯಲ್ಲಿ ಒಂದು ವಿಕೆಟ್ ಕಳೆದುಕೊಂಡಿದ್ದ, ಪ್ರವಾಸಿ ತಂಡ ಎರಡನೇ ಅವಧಿಯಲ್ಲೂ ಕೇವಲ ಒಂದು ವಿಕೆಟ್ ಮಾತ್ರ ಕಳೆದುಕೊಂಡಿತು.
ಪಂದ್ಯದ ಮೂರನೇ ದಿನವಾದ ಶುಕ್ರವಾರ ಪಿಚ್ ಸ್ಪಿನ್ ಬೌಲರ್ ಗಳಿಗೆ ನೆರವಾಗುತ್ತದೆ ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಆದರೆ, ಸ್ಪಿನ್ ಹಾಗೂ ವೇಗದ ಬೌಲರ್ ಗಳ ವಿರುದ್ಧ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಗಳು ಅಬ್ಬರಿಸಿದರು. ಪರಿಣಾಮ ಪ್ರವಾಸಿ ತಂಡ ಫಾಲೋ ಆನ್ ಭೀತಿಯಿಂದ ಪಾರಾಯಿತು.
ಫಾಫ್ ಡುಪ್ಲೆಸಿಸ್ 103 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ನೆರವಿನಿಂದ 55 ರನ್ ಬಾರಿಸಿ ಅಶ್ವಿನ್ ಗೆ ಔಟ್ ಆದರು.
ಆರನೇ ವಿಕೆಟ್ ಗೆ ಡೀನ್ ಎಲ್ಗರ್ ಹಾಗೂ ಕ್ವಿಂಟನ್ ಡಿಕಾಕ್ ಜೋಡಿ ಸಮಯೋಚಿತ ಬ್ಯಾಟಿಂಗ್ ನಡೆಸಿದ್ದು, ತಂಡಕ್ಕೆ ಅಜೇಯ 114 ರನ್ ಗಳ ಜೊತೆಯಾಟದ ಕಾಣಿಕೆ ನೀಡಿತು. ಡೀನ್ ಎಲ್ಗರ್ ಟೆಸ್ಟ್ ಕ್ರಿಕೆಟ್ ನಲ್ಲಿ ಮತ್ತೊಂದು ಶತಕ ಸಿಡಿಸಿದರು.