ಕುಸ್ತಿ ತರಬೇತಿ ಯೋಜನೆಗೆ ತಾತ್ಕಾಲಿಕ ತಡೆ: ಗದಗ ಕುಸ್ತಿಪಟುಗಳ ಹೋರಾಟಕ್ಕೆ ಜಯ

ಕುಸ್ತಿ ತರಬೇತಿ ಯೋಜನೆಗೆ ತಾತ್ಕಾಲಿಕ ತಡೆ: ಗದಗ ಕುಸ್ತಿಪಟುಗಳ ಹೋರಾಟಕ್ಕೆ ಜಯ Temporary stay on wrestling training scheme: Victory for Gadag wrestlers' protest

ಗದಗ 19: ಗದಗದ ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣದ ಕ್ರೀಡಾ ವಸತಿ ನಿಲಯದಲ್ಲಿ ಸಾಂಪ್ರದಾಯಿಕ ಕುಸ್ತಿ ತರಬೇತಿಯನ್ನು ಸೀಮಿತಗೊಳಿಸುವ ಕ್ರೀಡಾ ಇಲಾಖೆಯ ‘ಪಿರಮಿಡ್ ಮಾದರಿ’ ಯೋಜನೆಗೆ ರಾಜ್ಯ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ. ಇದರಿಂದ ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಕುಸ್ತಿಪಟುಗಳಿಗೆ ನಿರಾಳತೆ ದೊರೆತಿದೆ.  

ಕಳೆದ 25 ವರ್ಷಗಳಿಂದ 5ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಕುಸ್ತಿ ತರಬೇತಿ ಹಾಗೂ ವಸತಿ ಸೌಲಭ್ಯ ನೀಡಲಾಗುತ್ತಿತ್ತು. ಆದರೆ ಹೊಸ ನಿಯಮದಡಿ ತರಬೇತಿಯನ್ನು 5ರಿಂದ 7ನೇ ತರಗತಿಗೆ ಮಾತ್ರ ಸೀಮಿತಗೊಳಿಸಲು ಇಲಾಖೆ ಮುಂದಾಗಿತ್ತು. ಇದರಿಂದ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ತರಬೇತಿ ಹಾಗೂ ವಸತಿ ಸೌಲಭ್ಯದಿಂದ ವಂಚಿತರಾಗುವ ಆತಂಕ ವ್ಯಕ್ತವಾಗಿತ್ತು. ಕಳೆದ ಒಂದು ವರ್ಷದಿಂದ ತರಬೇತುದಾರರ ಕೊರತೆಯೂ ಕಾಡುತ್ತಿತ್ತು.  

ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಕೃಷ್ಣ ಎಚ್‌. ಹಡಪದ, ಗದಗ ಜಿಲ್ಲಾ ಕುಸ್ತಿಪಟುಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಸಂತ ಪರಸಪ್ಪ ಸಿದ್ದಮ್ಮನಹಳ್ಳಿ ಹಾಗೂ ಹಿರಿಯ ಕುಸ್ತಿ ಅಭಿಮಾನಿಗಳು ಸರ್ಕಾರದ ಗಮನ ಸೆಳೆದಿದ್ದರು. ಗದಗದ ಕುಸ್ತಿ ಪರಂಪರೆಯನ್ನು ಉಳಿಸಬೇಕೆಂದು ಮನವಿ ಸಲ್ಲಿಸಿದ್ದರು.  

ಮನವಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಹಾಗೂ ಕ್ರೀಡಾ ಇಲಾಖೆ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ಮಟ್ಟದಲ್ಲಿ ಚರ್ಚೆ ನಡೆಸಿ, ಯೋಜನೆ ಜಾರಿಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿರುವ ಆದೇಶದಂತೆ, ಕ್ರೀಡಾ ವಸತಿ ನಿಲಯಗಳನ್ನು ‘ಪಿರಮಿಡ್ ಮಾದರಿ’ಯಲ್ಲಿ ಪುನರ್ರಚಿಸುವ ಪ್ರಕ್ರಿಯೆಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ.  

ಈ ನಿರ್ಧಾರವನ್ನು ಕುಸ್ತಿಪಟುಗಳು ಹಾಗೂ ಪಾಲಕರು ಸ್ವಾಗತಿಸಿದ್ದು, ಹೋರಾಟಕ್ಕೆ ಬೆಂಬಲ ನೀಡಿದ ಸಚಿವ ಎಚ್‌.ಕೆ. ಪಾಟೀಲ, ಕ್ರೀಡಾ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಿತ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ, ಗದಗ ಕ್ರೀಡಾಂಗಣಕ್ಕೆ ಶೀಘ್ರದಲ್ಲೇ ಕುಸ್ತಿ ತರಬೇತುದಾರರನ್ನು ನೇಮಕ ಮಾಡಬೇಕು ಎಂದು ಮತ್ತೊಮ್ಮೆ ಆಗ್ರಹಿಸಿದ್ದಾರೆ.