ಕೃಷ್ಣಾ ಮೇಲ್ದಂಡೆ ಸಂತ್ರಸ್ತರ ಅಹವಾಲು ಆಲಿಸಲು ನಿರ್ಲಕ್ಷ್ಯ: ಕರವೇ

ಕೃಷ್ಣಾ ಮೇಲ್ದಂಡೆ ಸಂತ್ರಸ್ತರ ಅಹವಾಲು ಆಲಿಸಲು ನಿರ್ಲಕ್ಷ್ಯ: ಕರವೇ Negligence in listening to the grievances of Upper Krishna Project displacees: KaRaVe

                                         ತೀವ್ರ ಆಕ್ರೋಶ ಅಧಿಕಾರಿಗಳ ಏಕಾಏಕಿ ಭೇಟಿಗೆ ಕೊಲ್ಹಾರ ತಾಲೂಕು ಅಧ್ಯಕ್ಷ ರವಿ ಗೊಳಸಂಗಿ ಖಂಡನೆ

ಕೊಲ್ಹಾರ: ಕೃಷ್ಣಾ ಮೇಲ್ದಂಡೆ ಯೋಜನೆಯಿಂದಾಗಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳು ತೀವ್ರವಾಗಿ ಬಾಧಿತವಾಗಿದ್ದು, ಸಂತ್ರಸ್ತರು ಹಲವು ವರ್ಷಗಳಿಂದ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಕೊಲ್ಹಾರ ತಾಲೂಕು ಘಟಕದ ಅಧ್ಯಕ್ಷ ರವಿ ಗೊಳಸಂಗಿ ತಿಳಿಸಿದ್ದಾರೆ. ಜಲ ಸಂಪನ್ಮೂಲ ಸಚಿವರು ಹಾಗೂ ಇಲಾಖೆಯ ಉನ್ನತಾಧಿಕಾರಿಗಳು ಜಿಲ್ಲೆಗೆ ಭೇಟಿ ನೀಡುವ ವೇಳೆ ಮುಂಚಿತವಾಗಿ ಯಾವುದೇ ಮಾಹಿತಿ ನೀಡದೆ, ಏಕಾಏಕಿ ಆಗಮಿಸಿ ತೆರಳುತ್ತಿರುವ ಕ್ರಮ ಸೂಕ್ತವಲ್ಲ. ಸರ್ಕಾರ ಮತ್ತು ಇಲಾಖೆಯು ಜನರ ಅಹವಾಲುಗಳನ್ನು ಆಲಿಸಿ, ಸೂಕ್ತ ಪರಿಹಾರ
ಕಲ್ಪಿಸುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿ ಬಾಗಲಕೋಟೆ ಹಾಗೂ ಆಲಮಟ್ಟಿಯಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಮತ್ತು ಪುನರ್‌ನಿರ್ಮಾಣ ಕಚೇರಿಗಳಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲು ನಿಗದಿತ ಸಮಯ ನಿಗದಿಪಡಿಸಬೇಕು. ಅಲ್ಲದೆ, ಅದನ್ನು ಮುಂಚಿತವಾಗಿ ಪತ್ರಿಕಾ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ತಿಳಿಸಬೇಕು. ಇದರಿಂದ ಸಂತ್ರಸ್ತರು ಹಾಗೂ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲು ಅನುಕೂಲವಾಗಲಿದೆ ಎಂದು ಅವರು ಸಲಹೆ ನೀಡಿದ್ದಾರೆ.
ಮುಂಚಿತ ಮಾಹಿತಿ ನೀಡದೆ ಅಧಿಕಾರಿಗಳು ರಹಸ್ಯವಾಗಿ ಭೇಟಿ ನೀಡಿ ಹಿಂದಿರುಗುವುದರಿಂದ ಸಂತ್ರಸ್ತರ ದಶಕಗಳ ಸಮಸ್ಯೆಗಳು ಅಲಕ್ಷ್ಯಕ್ಕೆ ಒಳಗಾಗುತ್ತಿವೆ. ಅಧಿಕಾರಿಗಳ ಹಾಗೂ ಸರ್ಕಾರದ ಈ ನಿರ್ಲಕ್ಷ್ಯ ಧೋರಣೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದು ರವಿ ಗೊಳಸಂಗಿ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.