ನಿಗದಿತ ಸಮಯಕ್ಕೆ ಕಚೇರಿಯಲ್ಲಿರಲು ಜಿಲ್ಲಾಧಿಕಾರಿ ಖಡಕ್ ಸೂಚನೆ

ನಿಗದಿತ ಸಮಯಕ್ಕೆ ಕಚೇರಿಯಲ್ಲಿರಲು ಜಿಲ್ಲಾಧಿಕಾರಿ ಖಡಕ್ ಸೂಚನೆ Temperature background in the district: Changed government office hours

ಲೋಕದರ್ಶನ ವರದಿ 

ಜಿಲ್ಲೆಯಲ್ಲಿ ತಾಪಮಾನ ಹಿನ್ನೆಲೆ: ಬದಲಾದ ಸರ್ಕಾರಿ ಕಚೇರಿ ಸಮಯ 

ವಿಜಯಪುರ,ಏ.1:  2026ನೇ ಸಾಲಿನ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚಿನ ಬಿಸಿಲಿನ ತಾಪಮಾನ ಹಿನ್ನೆಲೆಯಲ್ಲಿ ಏಪ್ರಿಲ್‌.1ರಿಂದ ಜಿಲ್ಲೆಯಲ್ಲಿ ಸರಕಾರಿ ಕಚೇರಿ ಸಮಯ               ಬದಲಾವಣೆಯಾಗುತ್ತಿದ್ದಂತೆಯೇ, ಬುಧವಾರ ಬೆಳಗ್ಗೆಯೇ ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ನಗರದ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಸೇರಿದಂತೆ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಪರೀಶೀಲಿಸಿ,ಅಧಿಕಾರಿ, ಸಿಬ್ಬಂದಿ ಹಾಜರಾತಿ ಪರೀಶೀಲಿಸಿದರು. 

ಕಚೇರಿ ಸಮಯ ಬದಲಾವಣೆ ಹಿನ್ನೆಲೆಯಲ್ಲಿ ಬುಧವಾರ ನಗರದ ವಿವಿಧ ಇಲಾಖೆಗಳ ಕಚೇರಿಗೆ ದಿಢೀರ್ ಭೇಟಿ ನೀಡಿ, ಸಿಬ್ಬಂದಿ ಹಾಜರಾತಿ ಪರೀಶೀಲನೆ ನಡೆಸಿದರು. ಎಲ್ಲ ಅಧಿಕಾರಿ,ಸಿಬ್ಬಂದಿ ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗಬೇಕು. ದೈನಂದಿನ ಕಚೇರಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. 

ಯಾವುದೇ ಸಿಬ್ಬಂದಿ ಯಾವುದೇ ಕಡತ:ವಹಿ ಬಾಕಿ ಉಳಿಸಿಕೊಳ್ಳದೇ ಕಾರ್ಯ ನಿರ್ವಹಿಸುವ ಮೂಲಕ ಕಡತಗಳನ್ನು ವಿಲೇವಾರಿಯಲ್ಲಿ ಪ್ರಗತಿ ಸಾಧಿಸಬೇಕು ಎಂದು ಸೂಚಿಸಿದರು.  

ಸಾರ್ವಜನಿಕರಿಗೆ ಸ್ಪಂದಿಸಿ: ತಮ್ಮ ಎಂದಿನ ಕೆಲಸ ಕಾರ್ಯಗಳಿಗೆ ಆಯಾ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಸ್ಪಂದನೆ ನೀಡಬೇಕು.ಅವರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಆಲಿಸಿ ಎಂದರು. ಯಾವುದೇ ಲೋಪ-ದೋಷ ಉಂಟಾಗದಂತೆ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.  

ನಿಗದಿತ ಸಮಯಕ್ಕೆ ಕಚೇರಿಯಲ್ಲಿರಲೇಕು: ಇದೇ ವೇಳೆ ಕಚೇರಿಯಲ್ಲಿ ಅಗತ್ಯ ಮೂಲಭೂತ ಸೌಲಭ್ಯ ವ್ಯವಸ್ಥೆ ಇರಬೇಕು. ಜೊತೆಗೆ ಕಚೇರಿ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಿರಬೇಕಾದುದು ಕಡ್ಡಾಯ. ಯಾವುದೇ ಕಚೇರಿಗೆ ಹಠಾತ್ ಭೇಟಿ ನೀಡಲಾಗುವುದು.ಕಚೇರಿಯ ವೇಳೆಯಲ್ಲಿ ಕಚೇರಿಯಲ್ಲಿದ್ದು ಕಡತಗಳನ್ನು ತಕ್ಷಣಕ್ಕೆ ವಿಲೇವಾರಿ ಮಾಡಬೇಕು ಎಂದು ಇದೇ ವೇಳೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೂ ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ.ಅವರು ಸೂಚಿಸಿದರು.  

ಇಡೀ ಜಿಲ್ಲೆಯಾದ್ಯಂತ ಎಲ್ಲ ಸರ್ಕಾರಿ ಕಚೇರಿಗಳ ಸಿಬ್ಬಂದಿ ಬದಲಾದ ಸಮಯದಲ್ಲಿ ಕಚೇರಿಯಲ್ಲಿದ್ದುಕೊಂಡು ಯಾವುದೇ ಅಡೆತಡೆಯಿಲ್ಲದ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದರು. 

ಸರ್ಕಾರಿ ಕಚೇರಿ ಕೆಲಸಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಅನಾನುಕೂಲವಾಗದಂತೆ ಹಾಗೂ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತುರ್ತು ಸಂದರ್ಭಗಳಲ್ಲಿ ಯಾವುದೇ ಕಾರ್ಯವನ್ನು ನಿರ್ವಹಿಸಲು ನಿರ್ದೇಶನ ನೀಡಿದರೆ ಸಮಯದ ಮಿತಿಯಿಲ್ಲದೇ ಕೆಲಸ ನಿರ್ವಹಿಸಬೇಕೆಂದು ಇದೇ ವೇಳೆ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗೆ ಸೂಚಿಸಿದರು.