ಅಥಣಿಗೆ ಅತೀ ಶೀಘ್ರದಲ್ಲಿಯೇ ತಾಂತ್ರಿಕ ಮಹಾವಿದ್ಯಾಲಯ ಮಂಜೂರು: ಶಾಸಕ ಲಕ್ಷ್ಮಣ ಸವದಿ
Technical college will be sanctioned for Athani very soon: MLA Lakshman Savadi
ಅಥಣಿ 21: ಅಥಣಿಯಲ್ಲಿ ತಾಂತ್ರಿಕ ಮಹಾವಿದ್ಯಾಲಯದ ಸ್ಥಾಪನೆಗಾಗಿ ಸುಮಾರು 50 ಎಕರೆ ಸ್ಥಳವನ್ನು ಮೀಸಲಿಟ್ಟಿದ್ದು, ಅಥಣಿ ಜನತೆಯ ಈ ಬೇಡಿಕೆಯನ್ನೂ ಕೂಡ ಅತೀ ಶೀಘ್ರದಲ್ಲಿಯೇ ಈಡೇರಿಸುವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅವರು ಸರ್ ಎಮ್.ವಿಶ್ವೇಶ್ವರಯ್ಯ ಜನ್ಮ ದಿನದ ಅಂಗವಾಗಿ ಅಥಣಿ ತಾಲೂಕಾ ಇಂಜನೀಯರ್ಸ ಮತ್ತು ಗುತ್ತಿಗೆದಾರರ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಇಂಜನೀಯರ್ಸ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಅನೇಕ ವರ್ಷಗಳಿಂದ ಅಥಣಿ ತಾಲೂಕಿನ ಅಭಿಯಂತರರು ಮತ್ತು ಗುತ್ತಿಗೆದಾರರು ಇಂಜನೀಯರ್ಸ ಭವನ ನಿರ್ಮಾಣಕ್ಕಾಗಿ ಬೇಡಿಕೆ ಇಟ್ಟಿದ್ದು, ಇದಕ್ಕಾಗಿ ತನು, ಮನ, ಧನದಿಂದ ಸಹಕಾರ ನೀಡುವುದಾಗಿ ಶಾಸಕ ಸವದಿ ಭರವಸೆ ನೀಡಿದರು. ಅಥಣಿ ಪೂರ್ವ ಭಾಗಕ್ಕೆ ನೀರಾವರಿ ಒದಗಿಸುವ ಕರಿ ಮಸೂತಿ ಏತ ನೀರಾವರಿ ಯೋಜನೆ ಹಿಡಿದು ಇಲ್ಲಿಯವರೆಗಿನ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ವರೆಗೂ ನೂರಾರು ಅಭಿಯಂತರರು ಅತ್ಯಂತ ಅಚ್ಚು ಕಟ್ಟಾಗಿ ಕಾರ್ಯನಿರ್ವಹಿಸಿದ್ದಾರೆ ಮತ್ತು ಇಂದಿಗೂ ಅನೇಕ ಯೋಜನೆಗಳ ಅನುಷ್ಢಾನದಲ್ಲಿಯೂ ಕಾರ್ಯನಿರ್ವಹಿಸುತ್ತಿರುವುದು ಅಭಿನಂದನಾರ್ಹ ಸಂಗತಿಯಾಗಿದೆ ಎಂದರು.
ಭಾರತ ರತ್ನ ಸರ್.ಎಮ್.ವಿಶ್ವೇಶ್ವರಯ್ಯ ಇಂದಿನ ಮತ್ತು ಮುಂದಿನ ಪಿಳಿಗೆಯ ಎಲ್ಲ ಅಭಿಯಂತರರಿಗೆ ಮಾರ್ಗದರ್ಶಕರಾಗಿದ್ದು, ಅವರ ಆದರ್ಶ, ಸಾಧನೆ, ನಿಷ್ಠೆಯನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದ ಅವರು ವಿಶ್ವೇಶ್ವರಯ್ಯನವರು ಅಂದಿನ ದಿನದ ತಾಂತ್ರಿಕತೆಯನ್ನು ಬಳಸಿಕೊಂಡು ಕನ್ನಂಬಾಡಿಯಲ್ಲಿ ಕೆ.ಆರ್.ಎಸ್ ಡ್ಯಾಮ್ ಕಟ್ಟಿದರು. ಈ ಡ್ಯಾಮ ನಿರ್ಮಾಣದಿಂದಲೇ ಮೈಸೂರು, ಮಂಡ್ಯ ಜಿಲ್ಲೆಗಳ ರೈತರ ಜಮೀನುಗಳಿಗಷ್ಟೇ ಅಲ್ಲ ಅನೇಕ ಲಕ್ಷಾಂತರ ಜನರ ಕುಡಿಯುವ ನೀರಿಗೂ ಅನಕೂಲವಾಗಿದೆ ಎಂದ ಅವರು ಸಾರ್ವಜನಿಕರ ಅನಕೂಲಕ್ಕಾಗಿ ತಾಂತ್ರಿಕತೆಯನ್ನು ಬಳಕೆ ಮಾಡುವ ಏಕೈಕ ವರ್ಗ ಅದುವೇ ಅಭಿಯಂತರರ ವರ್ಗ ಎಂದು ಹೇಳಿದರು.
ಹೊಸ ಹೊಸ ತಾಂತ್ರಿಕತೆಗಾಗಿ ಅಭಿಯಂತರರು ದಿನ ನಿತ್ಯವೂ ಅಧ್ಯಯನ ಮಾಡಬೇಕು ಆಗ ಮಾತ್ರ ತಮ್ಮ ಕಾರ್ಯದಲ್ಲಿ ಬದ್ಧತೆ ಕಂಡುಕೊಳ್ಳಲು ಸಹಕಾರಿಯಾಗುತ್ತದೆ ಎಂದ ಅವರು ಇಂಜನೀಯರ್ಸ ದಿನದ ಅಂಗವಾಗಿ ಮೋಜು, ಮಜಾ, ಮಸ್ತಿ ಮಾಡದೇ ಉಪನ್ಯಾಸ, ರಚನಾತ್ಮಕ ಕಾರ್ಯಕ್ರಮಗಳಿಗೆ ಮೀಸಲಿಟ್ಟ ಅಥಣಿ ಅಭಿಯಂತರರನ್ನು ಮತ್ತು ಗುತ್ತಿಗೆದಾರರನ್ನು ಲಕ್ಷ್ಮಣ ಸವದಿ ಅಭಿನಂದಿಸಿದರು. ದೇಶ ಕಟ್ಟುವಲ್ಲಿ ಅಭಿಯಂತರರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಪ್ರಾಚೀನ ಕಾಲದಿಂದಲ್ಲಿ ತಾಂತ್ರಿಕತೆ, ಯಂತ್ರಗಳ ಬಳಕೆ ಇರಲಿಲ್ಲ ಆದರೆ ನಮ್ಮ ದೇಶದಲ್ಲಿ ಅನೇಕ ಅದ್ಭುತಗಳನ್ನು ನಿರ್ಮಿಸಿ ಆ ಕಟ್ಟಡಗಳು ಇಂದಿನ ಪಿಳಿಗೆಗೆ ಪರಿಚಯಿಸಿದ ಕೀರ್ತಿ ಅಂದಿನ ಅಭಿಯಂತರರಿಗೆ ಸಲ್ಲುತ್ತದೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಧಾರವಾಡ ಐಐಟಿ ಉಪನ್ಯಾಸಕ ಅನಿಕೇತ ಕಟವರೆ ಮಾತನಾಡಿ, ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಲಕ್ಷಾಂತರ ಅಭಿಯಂತರರ ನಿರಂತರ ಪರಿಶ್ರಮದ ಫಲದಿಂದಲೇ 2024 ರ ಅಂತ್ಯಕ್ಕೆ 6.7 ಮಿಲಿಯನ್ ಕಿಲೋ ಮೀಟರ್ ಅಥವಾ 67 ಲಕ್ಷ ಕಿಲೋ ಮೀಟರ್ ಉದ್ದದ ರಸ್ತೆಯನ್ನು ನಿರ್ಮಿಸಲಾಗಿದೆ ಎಂದ ಅವರು ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಪ್ಪು ಮಣ್ಣಿನ ಪ್ರಮಾಣ ಹೆಚ್ಚಾಗಿದೆ ಹೀಗಾಗಿ ರಸ್ತೆಗಳು ಅವಧಿಗೆ ಮೊದಲೇ ಕೆಡುವ ಸಾಧ್ಯತೆ ಹೆಚ್ಚಾಗಿದ್ದರಿಂದ ಅಭಿಯಂತರರು ಹೊಸ ಹೊಸ ತಂತ್ರಜ್ಞಾನ ಬಳಸಿಕೊಂಡು ರಸ್ತೆ ನಿರ್ಮಿಸಬೇಕು ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಕಿವಿ ಮಾತು ಹೇಳಿದರು.
ಇತ್ತೀಚಿಗೆ ರಸ್ತೆಗಳ ನಿರ್ಮಾಣಕ್ಕೆ ಪ್ಲಾಸ್ಟಿಕ್ ಬಳಕೆ ಮಾಡುವ ತಾಂತ್ರಿಕತೆ ಬಂದಿದ್ದು, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು. ನಿರ್ಮಾಣ ಕಾರ್ಯದಲ್ಲಿ ಇತ್ತೀಚಿಗೆ ಎ.ಐ. ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ನೀರು ನಿರ್ವಹಣೆಯಲ್ಲಿಯೂ ಅಭಿಯಂತರರು ಸಾಧಿಸಿದ ಸಾಧನೆ ಮೆಚ್ಚುವಂತಹದ್ದಾಗಿದೆ ಎಂದರು.
ಪ್ರಸ್ತಾವಿಕವಾಗಿ ಜಿಲ್ಲಾ ಪಂಚಾಯತ ಉಪ ವಿಭಾಗದ ಅಧಿಕಾರಿ ವ್ಹಿ.ಎ.ವಾಲಿ ಮಾತನಾಡಿ ಪುರಸಭೆಯಿಂದ ಪಡೆದುಕೊಂಡ ನಿವೇಶನದಲ್ಲಿ ಕಟ್ಟಡ ನಿರ್ಮಿಸಲು ಸಹಾಯ, ಸಹಕಾರ ನೀಡಬೇಕು ಎಂದ ಅವರು ಅಥಣಿ ಪಟ್ಟಣಕ್ಕೆ ತಾಂತ್ರಿಕ ಮಹಾವಿದ್ಯಾಲಯ ಮಂಜೂರು ಮಾಡಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿಯವರಲ್ಲಿ ಮನವಿ ಮಾಡಿದರು. ಗ್ರಾಮೀಣ ಕುಡಿಯುವ ನೀರು ಇಲಾಖೆಯ ರವೀಂದ್ರ ಮೂರ್ಗಾಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತನ ವೀರಣ್ಣಾ ವಾಲಿ, ನೀರಾವರಿ ನಿಗಮದ ಪ್ರವೀಣ ಹುಣಸಿಕಟ್ಟಿ, ಹೆಸ್ಕಾಂ ಅಥಣಿ ವಿಭಾಗದ ಗುರುರಾಜ ಸಂಪಣ್ಣವರ, ಗುತ್ತಿಗೆದಾರರಾದ ಶಿವಲಿಂಗ ಗಲಗಲಿ, ಬಿ.ಎಮ್.ಪಾಟೀಲ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೀರಾವರಿ ನಿಗಮದ ನಾಗರಾಜ ಬಿ.ಎ. ವಹಿಸಿದ್ದರು, ವೇದಿಕೆಯಲ್ಲಿ ಅಸೋಸಿಯೇಷನ್ ನ ರಾಜು ಆಲಬಾಳ, ರಾಜಶೇಖರ ಟೊಪಗಿ, ಸಂಜೀವ ಕುಲಕರ್ಣಿ, ಶ್ರೀಧರ ಚವ್ಹಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕ ಸಂಗಮೇಶ ಹಚಡದ ನಿರೂಪಿಸಿ, ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 