ಶಿಕ್ಷಕರು ಸಮಾಜದ ನಿರ್ಮಾತೃಗಳು: ಸಚಿವೆ ಲಕ್ಷ್ಮಿ ಹೆಬ್ಬಾಳಕರ್

ಶಿಕ್ಷಕರು ಸಮಾಜದ ನಿರ್ಮಾತೃಗಳು: ಸಚಿವೆ ಲಕ್ಷ್ಮಿ ಹೆಬ್ಬಾಳಕರ್  Teachers are the builders of society: Minister Lakshmi Hebbalkar

ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ 2025  

ಬೆಳಗಾವಿ 09: ಕಳೆದ 79 ವರ್ಷಗಳಲ್ಲಿ ಜಗತ್ತಿನ ನಾಲ್ಕನೇ ಅತ್ಯದ್ಭುತವಾದ ಶಕ್ತಿಯಾಗಿ ಭಾರತವು ಹೊರಹೊಮ್ಮಲು ಶಿಕ್ಷಕರ ಪರಿಶ್ರಮವೇ ಕಾರಣ. ಶಿಕ್ಷಕರು ಜೀವನದ ಪಾಠ ಕಲಿಸುವುದರ ಜೊತೆಗೆ ಸಮಾಜದ ನಿರ್ಮಾತೃ ಆಗಿದ್ದಾರೆ. ಶಿಕ್ಷಕರ ಮಾರ್ಗದರ್ಶನ ಎಂದಿಗೂ ಮರೆಯಲಾರದ್ದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಹೇಳಿದರು. 

ಇಲ್ಲಿನ ಗಾಂಧಿ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ ಹಾಗೂ ಜಿಪಂ,  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ತಾಲೂಕ ವಯಲದ ವತಿಯಿಂದ ಆಯೋಜಿಸಲಾದ ತಾಲೂಕ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಶಿಕ್ಷಣದ ಪ್ರಗತಿಗಾಗಿ ಸರ್ಕಾರಗಳು ಸೌಲಭ್ಯಗಳನ್ನು ನಿರಂತರವಾಗಿ ನೀಡುತ್ತಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಶಿಕ್ಷಣದ ಪ್ರಗತಿಗಾಗಿ ಎಲ್ಲರೂ ಶ್ರಮಿಸಬೇಕು ಎಂದರು. 

ಶಾಲಾ ಶಿಕ್ಷಕರ ಬಹುದಿನಗಳ ಬೇಡಿಕೆಯಾಗಿದ್ದ ಸಿ ಮತ್ತು ಆರ್ ನಿಯಮಾವಳಿಗಳ ತಿದ್ದುಪಡಿ ಮತ್ತು ಬೆಳಗಾವಿ ಜಿಲ್ಲೆಯ ಶಿಕ್ಷಕರಿಗೆ ಅತ್ಯವಶ್ಯಕವಾಗಿದ್ದ ಗುರುಭವನ ನಿರ್ಮಾಣಕ್ಕಾಗಿ ನಿವೇಶನವನ್ನು ಸರ್ಕಾರದ ವತಿಯಿಂದ ಕೊಡುವ ಪ್ರಯತ್ನ ಮಾಡಲಾಗಿದೆ. ಶಿಕ್ಷಕರು ಇದರ ಸದುಪಯೋಗ  ಪಡೆದುಕೊಂಡು, ಮಕ್ಕಳ ಭವಿಷ್ಯಕ್ಕಾಗಿ ಕಲಿಕೆಯಲ್ಲಿ ಹೊಸ ಬದಲಾವಣೆ ತರಬೇಕು ಎಂದು ಸೂಚಿಸಿದರು. 

ಸಾನಿಧ್ಯ ವಹಿಸಿ ರಾಮಕೃಷ್ಣ ಆಶ್ರಮದ ಮೋಕ್ಷಿತಾನಂದ ಸ್ವಾಮೀಜಿ ಅವರು ಮಾತನಾಡಿ,  ಇಂದಿನ ಪ್ರಸ್ತುತ ಶಿಕ್ಷಣದಲ್ಲಿ ದೇಹಕ್ಕೆ ಶಿಕ್ಷಣ  ಇದೆ,  ವೈಚಾರಿಕತೆಗೆ ಆದ್ಯತೆ ಇದೆ ಆದರೆ ಇಚ್ಛಾಶಕ್ತಿಗೆ ತರಬೇತಿ ಬೇಕಾಗಿದೆ. ಆ ನಿಟ್ಟಿನಲ್ಲಿ ಜ್ಞಾನ, ವ್ಯಕ್ತಿತ್ವವಿಕಸನದ ಶಿಕ್ಷಣ ಜೊತೆಗೆ ಸಮಾಜಕ್ಕೆ ಕೊಡುಗೆ ಕೊಡುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿದಾಗ ಮಾತ್ರ ಶಿಕ್ಷಣದ ಗುರಿ ಈಡೇರುತ್ತೆ ಎಂದರು. 

ವಿಧಾನಪರಿಷತ್ ಸದಸ್ಯ ಸಾಬಣ್ಣ ತಳವಾರ ಅವರು ಮಾತನಾಡಿ,  ಶಿಕ್ಷಕರು ಮತ್ತು ಶಿಕ್ಷಣದ ಸ್ಥಿತಿಗತಿಗಳ ಕುರಿತು ಮತ್ತು ಮಕ್ಕಳಲ್ಲಿ ಉದ್ಯೋಗ ಪೂರಕವಾದ ಕೌಶಲ್ಯ ಆಧಾರಿತ ಶಿಕ್ಷಣವನ್ನು ನೀಡುವಲ್ಲಿ ಶಿಕ್ಷಕರು ಶ್ರಮಿಸಿ ಮತ್ತು ಬದಲಾದ ತಂತ್ರಜ್ಞಾನಕ್ಕೆ ಅನುಗುಣವಾಗಿ ಶಿಕ್ಷಕರು ಸಹ ಹೊಂದಿಕೊಂಡು ಮುಂದೆ ಸಾಗಬೇಕು ಎಂದರು. 

ಡಾ. ರಾಮಕೃಷ್ಣ ಮರಾಠೆ ಅವರು ಮಾತನಾಡಿ, ಶಿಕ್ಷಕರ ದಿನ ಚೇತನದ ಸಮಾವೇಶವಾಗಿದೆ. ಈ ಚಿಂತನ ಸಮಾವೇಶದಲ್ಲಿ ನಮ್ಮ ಬೇಕು ಬೇಡಿಕೆಗಳ ಕುರಿತು ಚಿಂತನೆ ಮಾಡುವುದರ ಜೊತೆಗೆ ಸೇವೆಯನ್ನು ನೆನೆಯುವ ದಿನ ಇದಾಗಬೇಕು. ಬೆಳಗಾವಿ ಜಿಲ್ಲೆ ತನ್ನದೇ ಆದ ವಿಶೇಷ ಶಿಕ್ಷಕರ ಪರಂಪರೆಯನ್ನೇ ಹೊಂದಿದೆ ಆ ಪರಂಪರೆಯನ್ನು ಮುಂದುವರಿಸುತ್ತಾ ಈಗಿನ ಶಿಕ್ಷಕರು ಸಾಗಿ ಎಂದರು. 

ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಸೇವಾನಿವೃತ್ತಿ ಹೊಂದಿದ ಪ್ರಾಥಮಿಕ ಶಾಲೆಯ 56 ಮತ್ತು ಪ್ರೌಢಶಾಲೆಯ 29 ಜನರನ್ನು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಕ್ಕೂ ಹೆಚ್ಚು ಜನ ಸಾಧಕ ಶಿಕ್ಷಕರನ್ನು ಇಲಾಖೆ ವತಿಯಿಂದ  ಸನ್ಮಾನಿಸಲಾಯಿತು. 

 2025 ನೇ ಸಾಲಿನ ಎಸ್ ಎಸ್‌. ಎಲ್‌. ಸಿ ಪರೀಕ್ಷೆಯಲ್ಲಿ ಪ್ರಥಮ ಮೂರು ಕ್ರಮಾಂಕ ಗಳಿಸಿದ ಬೆಳಗಾವಿ ತಾಲೂಕಿನ ಸರಕಾರಿ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಇಲಾಖೆ ವತಿಯಿಂದ ಲ್ಯಾಪಟಾಪ್ ನೀಡಿ ಗೌರವಿಸಲಾಯಿತು.  

ವೇದಿಕೆಯಲ್ಲಿ ಈ ಸಾಲಿನ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮಗಳಿಗೆ ಶಾಲಾ ಮಕ್ಕಳಿಂದ ಸಾಮೂಹಿಕ ನೃತ್ಯ ಮತ್ತು ಗಾಯನದ ಮೂಲಕ ಚಾಲನೆ ನೀಡಲಾಯಿತು.  

ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕರ ಸಿ ಮತ್ತು ಆರ್ ನಿಯಮಾವಳಿ ತಿದ್ದುಪಡಿ ಮತ್ತು ಗುರುಭವನಕ್ಕೆ ಸರ್ಕಾರದ ವತಿಯಿಂದ ನಿವೇಶನ ನೀಡುವಲ್ಲಿ ಶ್ರಮಿಸಿದ  ಸಚಿವೆ ಲಕ್ಷ್ಮಿ ಹೆಬ್ಬಾಳಕರ  ರವರನ್ನು ಜಿಲ್ಲೆಯ ವಿವಿಧ ಶಿಕ್ಷಕರ ಸಂಘಟನೆಯ ಪರವಾಗಿ ಜಿಲ್ಲಾಧ್ಯಕ್ಷ ಜಯಕುಮಾರ  ಹೆಬಳಿ ಮತ್ತು ತಂಡದವರು ಸಚಿವರನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಡಿ ಡಿ ಪಿ ಐ ಲೀಲಾವತಿ ಹಿರೇಮಠ, ಬಸವರಾಜ ನಾಲತವಾಡ, ಆರ್‌. ಎಂ.ಮುದುಕನಗೌಡ್ರ, ಸಾಧನಾ ಬದ್ರಿ, ಜಂಗಲಿಸಾಬ ನಾಯಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾಯವ್ವಗೊಳ, ರಾಮು ಗುಗವಾಡ, ಅಶೋಕ ಖೋತ,ಅನ್ವರ ಲಂಗೋಟಿ,ಎಂ. ಎ. ಕೋರಿಶೆಟ್ಟಿ, ಐ ಜಿ ಗೂಳಪ್ಪನವರ, ರಮೇಶ್ ಗೋಣಿ, ಸಿದ್ದಪ್ಪ ಗಾನಗಿ, ವಿ ಎಂ ಮುಳ್ಳೂರ, ಚಂದ್ರು ಕೋಲಕಾರ, ಪಿ ಎಂ ಹೊಟ್ಟಿನವರ, ಮೈಲಾರ ಹೊರಕೇರಿ ಬೆಳಗಾವಿ ತಾಲೂಕಿನ ವಿವಿಧ ಶಿಕ್ಷಕರ ಸಂಘಟನೆಗಳ, ಸಹಕಾರಿ ಪತ್ತಿನ ಸಂಘಗಳ ಪ್ರಮುಖರು, ಸದಸ್ಯರು ಸೇರಿದಂತೆ ಗ್ರಾಮೀಣ ವಲಯದ ಹದಿನೈದು ನೂರಕ್ಕೂ ಹೆಚ್ಚು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮ ಆರಂಭದಲ್ಲಿ ಗ್ರಾಮೀಣ ವಲಯದ ಬಿ ಇ ಓ ಆಂಜನೇಯ  ಆರ್ ಕೆ ಸ್ವಾಗತಿಸಿದರು ಎ. ಜಿ. ಮುಲ್ಲಾ ಮತ್ತು ಶೀಲಾ ಪಾಟೀಲ್ ನಿರೂಪಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ ಎಸ್ ಮೇದಾರ  ವಂದಿಸಿದರು .