ಶಿಕ್ಷಕರ ದಿನಾಚರಣೆ: ಶೈಕ್ಷಣಿಕ ಪ್ರಗತಿಗೆ ಒಗ್ಗಟ್ಟಾಗಿ ಶ್ರಮಿಸೋಣ

ಶಿಕ್ಷಕರ ದಿನಾಚರಣೆ: ಶೈಕ್ಷಣಿಕ ಪ್ರಗತಿಗೆ ಒಗ್ಗಟ್ಟಾಗಿ ಶ್ರಮಿಸೋಣ  Teachers' Day: Let us strive unitedly for educational progress


ವಿಜಯನಗರ (ಹೊಸಪೇಟೆ), ಸೆ. 29: ಜಿಲ್ಲೆ ಈಗಾಗಲೇ ಶೇ.96ರಷ್ಟು ಉತ್ತಮ ಶೈಕ್ಷಣಿಕ ಫಲಿತಾಂಶದೊಂದಿಗೆ ರಾಜ್ಯದಲ್ಲಿ 10ನೇ ಸ್ಥಾನದಲ್ಲಿದೆ. ಇನ್ನೂ ಶೇ.4ರಿಂದ 5ರಷ್ಟು ಸುಧಾರಣೆ ಸಾಧಿಸುವ ಮೂಲಕ ಜಿಲ್ಲೆಯನ್ನು ರಾಜ್ಯದಲ್ಲೇ ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗರಿಮಾ ಪನ್ವಾರ್ ಕರೆ ನೀಡಿದರು.  

ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಮನ್ವಯಾಧಿಕಾರಿಗಳ ಸಹಯೋಗದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಜಿಲ್ಲೆಗೆ ವರ್ಗಾವಣೆಯಾಗಿ ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ದೊರೆತಿರುವುದು ಸಂತಸದ ಸಂಗತಿ. ‘ಅಕ್ಷರ ಆವಿಷ್ಕಾರ’ದ ನಂತರ ಆರಂಭವಾದ ‘ಕಲಿಕಾ ಆಸರೆ’ಯಂತಹ ಯೋಜನೆಗಳು ಹಲವು ವರ್ಷಗಳಿಂದ ವಿದ್ಯಾರ್ಥಿಗಳ ಕಲಿಕೆಗೆ ನಿರಂತರವಾಗಿ ನೆರವಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.  

ಶಿಕ್ಷಕರು ತಾವು ನಿರ್ವಹಿಸುವ ಕರ್ತವ್ಯದಲ್ಲಿ ಸಂತೃಪ್ತಿ ಕಾಣುವುದರ ಜೊತೆಗೆ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು. ಶಿಕ್ಷಕರ ಪರಿಶ್ರಮದ ಫಲ ತಕ್ಷಣಕ್ಕೆ ದೊರೆಯದಿದ್ದರೂ, ಹಲವು ವರ್ಷಗಳ ನಂತರ ಅದೇ ಮಕ್ಕಳು ಉನ್ನತ ಹುದ್ದೆಗೇರಿ ತಮ್ಮ ಬದುಕು ರೂಪಿಸಿಕೊಳ್ಳುವಾಗ ಶಿಕ್ಷಕರ ಸೇವೆಯ ಸಾರ್ಥಕತೆ ಅರಿವಾಗುತ್ತದೆ ಎಂದು ಹೇಳಿದರು.  

ಮಕ್ಕಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಅವರಲ್ಲಿ ಸನ್ಮಾರ್ಗ, ಧನಾತ್ಮಕ ಚಿಂತನೆ ಹಾಗೂ ಜವಾಬ್ದಾರಿಯುತ ನಾಗರಿಕತ್ವದ ಗುಣಗಳನ್ನು ಬೆಳೆಸುವ ಜವಾಬ್ದಾರಿಯೂ ಶಿಕ್ಷಕರ ಮೇಲಿದೆ. ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಜಿಲ್ಲೆಯ ಶ್ರೇಯೋಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ವಿಶೇಷವಾಗಿ ಶೈಕ್ಷಣಿಕ ಪ್ರಗತಿಗೆ ಸದಾ ಬೆಂಬಲವಾಗಿ ನಿಲ್ಲುವುದಾಗಿ ಗರಿಮಾ ಪನ್ವಾರ್ ಭರವಸೆ ನೀಡಿದರು.  

ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಉಮಾಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮಟ್ಟದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.  

ಡಿಡಿಪಿಐ ವೆಂಕಟೇಶ್ ರಾಮಚಂದ್ರ​‍್ಪ ಸ್ವಾಗತಿಸಿದರು. ಕೂಡ್ಲಿಗಿ ಹಿರೇಮಠ ಸಂಸ್ಥಾನದ ಷ.ಬ್ರ.ಶ್ರೀ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಚಂದ್ರ​‍್ಪ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.