ಶಿಕ್ಷಕರ ತರಬೇತಿಗಳು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುತ್ತವೆ: ಡಾ. ಅಜಿತ ಪ್ರಸಾದ

ಶಿಕ್ಷಕರ ತರಬೇತಿಗಳು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುತ್ತವೆ: ಡಾ. ಅಜಿತ ಪ್ರಸಾದ Teacher training enhances the quality of education: Dr. Ajit Prasad

ಲೋಕದರ್ಶನ ವರದಿ 

ಧಾರವಾಡ 22: ಶಿಕ್ಷಕರು ಕೇವಲ ವಿದ್ಯಾರ್ಥಿಗಳಿಗೆ ಶಿಕ್ಷಣ ಮಾತ್ರ ನೀಡುತ್ತಿಲ್ಲ, ಅವರ ಸಾಧನೆಗೆ ದಾರೀದೀಪವಾಗುತ್ತ ಉತ್ತಮ ಸಮಾಜವನ್ನು ರೂಪಿಸುತ್ತಿದ್ದಾರೆ. ಅವರು ಮಕ್ಕಳಲ್ಲಿ ನೈತಿಕ ಮೌಲ್ಯಗಳು, ಶಿಸ್ತು, ಸಮಯಪಾಲನೆ, ಪ್ರಾಮಾಣಿಕತೆ ಮತ್ತು ದೇಶಪ್ರೇಮವನ್ನು ಬೆಳೆಸುತ್ತಾರೆ. ಅತಿ ವೇಗವಾಗಿ ಬೆಳೆಯುತ್ತಿರುವ ಈ ಯುಗದಲ್ಲಿ ಕಾಲಕಾಲಕ್ಕೆ ಶಿಕ್ಷಕರಿಗೆ ತರಬೇತಿ ಅವರನ್ನು ಇನ್ನೂ ಸಕ್ಷಮರನ್ನಾಗಿಸಬೇಕಾದುದು ಶಿಕ್ಷಣ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ ಎಂದು ಜೆ.ಎಸ್‌.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಹೇಳಿದರು. ಅವರು ನಗರದ ವಿದ್ಯಾಗಿರಿಯ ಜೆ.ಎಸ್‌.ಎಸ್ ನ ಎಲ್ಲ ಶಾಲೆಗಳ ಶಿಕ್ಷಕರಿಗೆ ಬೆಂಗಳೂರಿನ ವಿಸ್ತಾರಾ ಗ್ಲೋಬಲ್ ಟೀಚರ್ಸ ಟ್ರೈನಿಂಗ್ ಅಕ್ಯಾಡೆಮಿ ಜೊತೆಗೂಡಿ ಆಯೋಜಿಸಲಾದ 3 ದಿನಗಳ ತರಬೇತಿ ಕಾರ್ಯಾಗಾರವನ್ನು ಸಸಿಗೆ ನಿರೇರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. 

ಈ ತರಬೇತಿಯಿಂದ ಶಿಕ್ಷಕರು ಹೊಸ ಬೋಧನಾ ವಿಧಾನಗಳನ್ನು ಕಲಿತು ವಿದ್ಯಾರ್ಥಿಗಳಿಗೆ ಸುಲಭವಾಗಿ ಪಾಠ ಹೇಳಲು ಸಾಧ್ಯವಾಗುತ್ತದೆ. ಇಂದಿನ ತಂತ್ರಜ್ಞಾನಗಳ ಜೊತೆಗೆ ಶಿಕ್ಷಕರು ಸಹ ಅಪಡೇಟ್ ಆಗಬೇಕು ಇದು ಡಿಜಿಟಲ್ ಯುಗವಾದ್ದರಿಂದ ಸ್ಮಾರ್ಟ್‌ ಕ್ಲಾಸ್, ಪ್ರೊಜೆಕ್ಟರ್, ಆನ್‌ಲೈನ್ ಪಾಠಗಳ ಬಳಕೆ ಮುಖ್ಯವಾಗಿದೆ. ಹೊಸ ವಿಷಯಗಳನ್ನು ತಿಳಿದುಕೊಳ್ಳಲು, ಹೊಸ ಸವಾಲುಗಳನ್ನು ಎದುರಿಸಲು ಹಾಗೂ ವಿದ್ಯಾರ್ಥಿಗಳೊಂದಿಗೆ ಉತ್ತಮ ಸಂಬಂಧ ಬೆಳೆಸಲು ತರಬೇತಿಗಳು ಸಹಕಾರಿಯಾಗಿವೆ. ಜೆ.ಎಸ್‌.ಎಸ್ ಸಂಸ್ಥೆ ಪ್ರತಿ ವರ್ಷ ಈ ರೀತಿ ತರಬೇತಿಗಳನ್ನು ಆಯೋಜಿಸುತ್ತಾ ಬಂದಿದ್ದು, ಈ ಬಾರಿ ವಿಸ್ತಾರ ಗ್ಲೋಬಲ್ ಟೀಚರ್ಸ ಟ್ರೈನಿಂಗ್ ಅಕ್ಯಾಡೆಮಿ ಜೊತೆ ಸೇರಿ ಎಲ್ಲ ಶಾಲೆಗಳ ಒಟ್ಟು 315 ಶಿಕ್ಷಕರನ್ನು ಗುಂಪುಗಳಾಗಿ ವಿಂಗಡಿಸಿ ಶಿಸ್ತುಬದ್ಧವಾಗಿ ಈ ತರಬೇತಿಯನ್ನು ಆಯೋಜಿಸಿದೆ ಎಂದರು. 

ವಿಸ್ತಾರಾ ಗ್ಲೋಬಲ್ ಟೀಚರ್ಸ ಟ್ರೈನಿಂಗ್ ಅಕ್ಯಾಡೆಮಿ ಮಹೇಶ ಮಾಶಾಳ ಮಾತನಾಡಿ ಶಿಕ್ಷರ ತರಬೇತಿ ಶಿಬಿರಗಳು, ಶಿಕ್ಷಕರು ಹಾಗೂ ಮುಂದುವರೆದ ಶಿಕ್ಷಣದ ನಡುವಿನ ಅಂತರವನ್ನು ಸಮನಾಗಿಸುವ ಒಂದು ಪ್ರಯತ್ನ ಎಲ್ಲ ಶಿಕ್ಷಕರಿಗೂ ಸಮಾಜಕ್ಕೆ ಒಳ್ಳೆಯದನ್ನು ನೀಡುವ ಸಾಮರ್ಥ್ಯವಿದೆ. ಆದರೆ, ಮಾರ್ಗದರ್ಶನ, ಮಾಹಿತಿ ಮತ್ತು ಸರಿಯಾದ ಪಠ್ಯಕ್ರಮದ ಕೊರತೆಯಿಂದ ಶಿಕ್ಷಕರ ಸಾಧನೆಯಲ್ಲಿ ಕೊರೆತೆ ಕಾಣುತ್ತಿದೆ. ಆದ್ದರಿಂದ ಈ ಮೂರು ದಿನಗಳ ಕಾರ್ಯಾಗಾರದಲ್ಲಿ ಶಿಕ್ಷಕರು ಸರಿಯಾದ ಸಮಯಕ್ಕೆ ಹಾಜರಿದ್ದು ಎಲ್ಲ ಚಟುವಟಿಯಲ್ಲಿ ಆತ್ಮವಿಶ್ವಾಸದಿಂದ ಪಾಲ್ಗೊಂಡು ನಿಮ್ಮ ಪ್ರತಿಭೆ ಹಾಗೂ ಕಾರ್ಯಕ್ಷಮತೆಯನ್ನು ಜಾಗೃತಗೊಳಿಸಿಕೊಳ್ಳಿ, ಶಿಕ್ಷಕರ ತರಬೇತಿಗೆ ಜೆ.ಎಸ್‌.ಎಸ್ ಸಂಸ್ಥೆ ವಿಸ್ತಾರ ಅಕ್ಯಾಡೆಮಿಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ನಮಗೆ ಸಂತೋಷವೆನಿಸುತ್ತದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನ ಮಾತ್ರವಲ್ಲ, ಉತ್ತಮ ಮೌಲ್ಯಗಳು ಮತ್ತು ನಡವಳಿಕೆಯನ್ನು ಕೂಡ ಕಲಿಸಬೇಕಾಗುತ್ತದೆ ಈ ತರಬೇತಿಗಳು ಶಿಕ್ಷಕರಲ್ಲಿ ಶಿಸ್ತು ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುತ್ತವೆ ಮಕ್ಕಳು ದುಷ್ಚಟಗಳಿಗೆ ಬಲಿಯಾದಂತೆ ಅವರನ್ನು ಸರಿಯಾದ ಕ್ರಮದಲ್ಲಿ ಜೀವನ ನಡೆಸುವಂತೆ ಮಾಡುವ ಶಕ್ತಿ ಶಿಕ್ಷಕರಲ್ಲಿದೆ ಎಂದು ಹೇಳಿದರು. 

ಜೆ.ಎಸ್‌.ಎಸ್ ನ ಆಡಳಿತಾಧಿಕಾರಿಗಳಾದ ಅರಿಹಂತ ಪ್ರಸಾದರವರು ಮಾತನಾಡಿ, ಮಕ್ಕಳು ಪಾಲಕರ ಭವಿಷ್ಯದ ಕನಸುಗಳು, ಆ ಕನಸುಗಳನ್ನು ನೈತಿಕ ನೆಲಗಟ್ಟಿನಲ್ಲಿ ಸರಿಯಾದ ಮಾರ್ಗದರ್ಶನದಿಂದ ಸಾಕಾರಗೊಳಿಸಬೇಕಾದುದು ಶಿಕ್ಷಕರ ಕರ್ತವ್ಯ ಪ್ರತಿ ವಿದ್ಯಾರ್ಥಿಯ ಮನೋಭಾವ ಮತ್ತು ಕಲಿಕೆಯ ಶೈಲಿ ವಿಭಿನ್ನವಾಗಿರುತ್ತದೆ. ಇಂತಹ ತರಬೇತಿಯಿಂದ ಶಿಕ್ಷಕರು ಮಕ್ಕಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಪ್ರಾರಂಭದಲ್ಲಿ ದೀಪಾ ಕುಲಕರ್ಣಿ ಪ್ರಾರ್ಥಿಸಿಸಿದರು, ಜೆ.ಎಸ್‌.ಎಸ್ ಐ.ಟಿ.ಐ ಕಾಲೆಜಿನ ಪ್ರಾಚಾರ್ಯರಾದ ಮಹಾವೀರ ಉಪಾದ್ಯೆ, ಜೆ.ಎಸ್‌.ಎಸ್ ನ ಎಲ್ಲ ಶಾಲೆಯ ಮುಖ್ಯಸ್ಥರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ವಾಣಿಶ್ರೀ ಕಾರ್ಯಕ್ರಮ ನಿರೂಪಿಸಿದರು.