ರಾಜ್ಯ ಮಟ್ಟದ ಚೆಸ್ನಲ್ಲಿ ಮಿಂಚಿದ ಶಿಕ್ಷಕಿ ಸುಜಾತಾರಾಷ್ಟ್ರಮಟ್ಟದ ಸ್ಪರ್ಧೆಗೆ ಐದನೇ ಬಾರಿ ಆಯ್ಕೆ; ಬಳ್ಳಾರಿಗೆ ಕೀರ್ತಿ

ರಾಜ್ಯ ಮಟ್ಟದ ಚೆಸ್ನಲ್ಲಿ ಮಿಂಚಿದ ಶಿಕ್ಷಕಿ ಸುಜಾತಾರಾಷ್ಟ್ರಮಟ್ಟದ ಸ್ಪರ್ಧೆಗೆ ಐದನೇ ಬಾರಿ ಆಯ್ಕೆ; ಬಳ್ಳಾರಿಗೆ ಕೀರ್ತಿ Teacher Sujatha, who excelled in state-level chess, selected for the fifth time for the national-lev

ಬಳ್ಳಾರಿ 26:  ಜಿಲ್ಲೆಯ ಹೊಸಮೋಕಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ವೈ. ಸುಜಾತಾ ಅವರು ರಾಜ್ಯ ಮಟ್ಟದ ಸರ್ಕಾರಿ ನೌಕರರ ಚೆಸ್ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ತೋರಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅವರ ಸಾಧನೆಗೆ ಶಿಕ್ಷಣ ವಲಯ ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮೇ 23ರಿಂದ 25ರವರೆಗೆ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿತ್ತು.

ರಾಜ್ಯಾಧ್ಯಕ್ಷ ಷಡಕ್ಷರಿ ಅವರ ನೇತೃತ್ವದಲ್ಲಿ ನಡೆದ ಈ ಸ್ಪರ್ಧೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ಸರ್ಕಾರಿ ನೌಕರರು ಭಾಗವಹಿಸಿದ್ದರು. ಮಹಿಳಾ ವಿಭಾಗದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವೈ. ಸುಜಾತಾ ಅವರು ಆರಂಭದಿಂದಲೇ ಆತ್ಮವಿಶ್ವಾಸಭರಿತ ಆಟ ಪ್ರದರ್ಶಿಸಿದರು. ಹಲವು ಸುತ್ತುಗಳಲ್ಲಿ ಅನುಭವಿಗಳ ವಿರುದ್ಧ ಸಮರ್ಥ ಹೋರಾಟ ನೀಡಿದ ಅವರು ತಮ್ಮ ಚಾಣಾಕ್ಷ ನಡೆಗಳು ಹಾಗೂ ತಾಳ್ಮೆಯ ಆಟದ ಮೂಲಕ ತೀಪುಗಾರರು ಮತ್ತು ಪ್ರೇಕ್ಷಕರ ಗಮನ ಸೆಳೆದರು. ಅಂತಿಮವಾಗಿ ಉತ್ತಮ ಅಂಕಗಳೊಂದಿಗೆ ರಾಷ್ಟ್ರಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಸುಜಾತಾ ಅವರು ಈ ಹಿಂದೆ ಕೂಡ ಹಲವು ಬಾರಿ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದರು. ಇದೀಗ ಐದನೇ ಬಾರಿ ರಾಷ್ಟ್ರಮಟ್ಟದ ಸರ್ಕಾರಿ ನೌಕರರ ಚೆಸ್ ಸ್ಪರ್ಧೆಗೆ ಆಯ್ಕೆಯಾಗಿರುವುದು ವಿಶೇಷವಾಗಿದೆ. ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದರೂ ಕ್ರೀಡಾ ಕ್ಷೇತ್ರದಲ್ಲೂ ನಿರಂತರ ಸಾಧನೆ ಮಾಡುತ್ತಿರುವುದು ಇತರ ಶಿಕ್ಷಕರಿಗೆ ಪ್ರೇರಣೆಯಾಗಿದೆ ಎಂದು ಶಿಕ್ಷಣ ವಲಯದವರು ಅಭಿಪ್ರಾಯಪಟ್ಟಿದ್ದಾರೆ. ವಿದ್ಯಾರ್ಥಿಗಳಿಗೆ ಪಾಠ ಬೋಧನೆಯ ಜೊತೆಗೆ ಚೆಸ್ ಮೇಲಿನ ಆಸಕ್ತಿಯನ್ನು ನಿರಂತರವಾಗಿ ಬೆಳೆಸಿಕೊಂಡಿರುವ ಸುಜಾತಾ ಅವರು, ಸಮಯ ಸಿಕ್ಕಾಗ ಅಭ್ಯಾಸ ನಡೆಸಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಸಾಧನೆ ಬಳ್ಳಾರಿ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.ಸುಜಾತಾ ಅವರ ಸಾಧನೆಗೆ ಶಾಲೆಯ ಶಿಕ್ಷಕ ವೃಂದ, ಗ್ರಾಮಸ್ಥರು, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿ, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.