ಸಿಎನ್ಜಿ ಇಂಧನ ಪೂರೈಸುವಂತೆ ಟ್ಯಾಕ್ಸಿ, ಆಟೋ ಮಾಲಕರ ಹಾಗೂ ಚಾಲಕರ ಸಂಘದಿಂದ ತಹಶೀಲ್ದಾರ ಕಚೇರಿಗೆ ಮನವಿ

ಸಿಎನ್ಜಿ ಇಂಧನ ಪೂರೈಸುವಂತೆ ಟ್ಯಾಕ್ಸಿ, ಆಟೋ ಮಾಲಕರ ಹಾಗೂ ಚಾಲಕರ ಸಂಘದಿಂದ ತಹಶೀಲ್ದಾರ ಕಚೇರಿಗೆ ಮನವಿ Taxi, Auto Owners and Drivers Association appeals to Tahsildar's office to supply CNG fuel

            ಮುಂಡಗೋಡ 21 : ಇಲ್ಲಿಯ ಯಲ್ಲಾಪುರ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ನಲ್ಲಿ ಕಂಪ್ರೆಸ್ಡ್‌ ನ್ಯಾಚುರಲ್ ಗ್ಯಾಸ್ (ಸಿಎನ್ಜಿ) ಪೂರೈಕೆ ಮಾಡುವ ಬದಲು ಯಾವುದೇ ಪೂರ್ವಾನುಮತಿ ಇಲ್ಲದೆ ಕಂಪ್ರೆಸ್ಡ್‌ ಬಯೋ ಗ್ಯಾಸ್ (ಸಿಬಿಜಿ) ಮಾರಾಟ ಮಾಡುತ್ತಿರುವ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಕೂಡಲೇ ಸಿಎನ್ಜಿ ಇಂಧನ ಪೂರೈಕೆಗೆ ವ್ಯವಸ್ಥೆ ಮಾಡಬೇಕೆಂದು ತಾಲೂಕಿನ ಟ್ಯಾಕ್ಸಿ ಹಾಗೂ ಆಟೋ ಮಾಲಕರ ಮತ್ತು ಚಾಲಕರ ಸಂಘವು ಶನಿವಾರ ತಹಶೀಲ್ದಾರ ಕಚೇರಿಯ ಆಹಾರ ನೀರೀಕ್ಷಕರಿಗೆ ಹಾಗೂ ಪೊಲೀಸ್ ಠಾಣೆಗೆ ಮನವಿ ನೀಡಿದ್ದಾರೆ. ಮುಂಡಗೋಡ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ನಲ್ಲಿ ಸಿಎನ್ಜಿ ವಾಹನಗಳಿಗೆ ಇಂಧನ ಪೂರೈಸಬೇಕಾದ ಸ್ಥಳದಲ್ಲಿ ಯಾವುದೇ ಪೂರ್ವ ಮಾಹಿತಿ ಅಥವಾ ಕಾನೂನುಬದ್ಧ ಅನುಮತಿ ಇಲ್ಲದೆ ಸಿಬಿಜಿ ಇಂಧನವನ್ನು ಮಾರಾಟ ಮಾಡಲಾಗುತ್ತಿದೆ.

              ಪಂಪ್ನಲ್ಲಿ ಸಿಬಿಜಿಯನ್ನು ಸಿಎನ್ಜಿ ಎಂದು ತೋರಿಸಿ ಅಥವಾ ಸ್ಪಷ್ಟ ಮಾಹಿತಿ ನೀಡದೆ ಮಾರಾಟ ಮಾಡುತ್ತಿರುವುದರಿಂದ ಟ್ಯಾಕ್ಸಿ ಹಾಗೂ ಆಟೋ ಚಾಲಕರಿಗೆ ಗಂಭೀರ ತೊಂದರೆ ಉಂಟಾಗುತ್ತಿದೆ ಎಂದು ಸಂಘ ಆರೋಪಿಸಿದೆ. ತಾಂತ್ರಿಕ ಸಮಸ್ಯೆಗಳು: ಸಿಬಿಜಿ ಮತ್ತು ಸಿಎನ್ಜಿ ಎರಡೂ ಮೇಥೇನ್ ಆಧಾರಿತವಾಗಿದ್ದರೂ, ವಾಹನ ನಿರ್ಮಾಣ ಕಂಪನಿಗಳು ಸಿಎನ್ಜಿ ಬಳಕೆಗೆ ಮಾತ್ರ ಅನುಮತಿ ನೀಡಿವೆ. ಮಾನದಂಡಗಳಿಗೆ ಅನುಗುಣವಾಗಿರದ ಇಂಧನ ಬಳಕೆಯಿಂದ ವಾಹನಗಳ ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತಿದೆ. ಎಂಜಿನ್ ಮಿಸ್ಫೈರಿಂಗ್, ಪವರ್ ಲಾಸ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಇಂಜೆಕ್ಟರ್, ವಾಲ್ವ್‌ ಹಾಗೂ ಸೆನ್ಸರ್ಗಳಿಗೆ ಹಾನಿಯಾಗುತ್ತಿರುವ ಅನುಮಾನವಿದೆ. ದೀರ್ಘಾವಧಿಯಲ್ಲಿ ಎಂಜಿನ್ ಸಂಪೂರ್ಣ ಹಾನಿಗೊಳಗಾಗುವ ಸಾಧ್ಯತೆಯೂ ಇದೆ.

                 ಬಹುತೇಕ ವಾಹನಗಳು ಬಾಡಿಗೆ ಆಧಾರಿತವಾಗಿರುವುದರಿಂದ ಚಾಲಕರ ದಿನನಿತ್ಯದ ಆದಾಯದ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ಸಂಘ ತಿಳಿಸಿದೆ. ಕಾನೂನು ಮತ್ತು ನಿಯಮ ಉಲ್ಲಂಘನೆ:ಸಿಎನ್ಜಿ ಮಾರಾಟಕ್ಕೆ ನೀಡಿರುವ ಲೈಸನ್ಸ್‌ ಇದ್ದಲ್ಲಿ, ಅದೇ ಸ್ಥಳದಲ್ಲಿ ಸಿಬಿಜಿ ಮಾರಾಟ ಮಾಡಲು ಪ್ರತ್ಯೇಕ ಅನುಮತಿ ಕಡ್ಡಾಯವಾಗಿದೆ. ಪಿಎನ್ಜಿಆರ್ಬಿ ಹಾಗೂ ಸಂಬಂಧಿತ ಸುರಕ್ಷತಾ ನಿಯಮಗಳ ಪ್ರಕಾರ, ಇಂಧನ ಪ್ರಕಾರ ಬದಲಾವಣೆ ಅಥವಾ ಬೇರೆ ಇಂಧನ ಮಾರಾಟಕ್ಕೆ ಸಂಬಂಧಿತ ಪ್ರಾಧಿಕಾರಗಳ ಪೂರ್ವಾನುಮತಿ ಅಗತ್ಯವಿದೆ. ಗ್ರಾಹಕರಿಗೆ ಯಾವ ಇಂಧನ ಮಾರಾಟ ಮಾಡಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸದೆ ಮಾರಾಟ ಮಾಡುವುದು ಗ್ರಾಹಕ ಹಕ್ಕುಗಳ ಉಲ್ಲಂಘನೆಯಾಗಿದೆ. ಸಂಘದ ಕೋರಿಕೆ : ಸಿಎನ್ಜಿ ಇಂಧನ ಬೇಕೆಂದು ಬಂದಿರುವ ವಾಹನಗಳಿಗೆ ಯಾವುದೇ ಸ್ಪಷ್ಟ ಮಾಹಿತಿ ಮತ್ತು ಕಾನೂನು ಅನುಮತಿ ಇಲ್ಲದೆ ಸಿಬಿಜಿ ಮಾರಾಟ ಮಾಡುತ್ತಿರುವುದು ಸಾರ್ವಜನಿಕ ಹಿತಾಸಕ್ತಿ ಹಾಗೂ ವಾಹನ ಸುರಕ್ಷತೆಗೆ ಅಪಾಯಕಾರಿಯಾಗಿದೆ.

               ವಾಹನ ನಿರ್ಮಾಣ ಕಂಪನಿಗಳು ಸಿಬಿಜಿ ಬಳಕೆಗೆ ಯಾವುದೇ ಜವಾಬ್ದಾರಿ ಹೊರುವುದಿಲ್ಲ. ಇಡೀ ಮುಂಡಗೋಡ ತಾಲೂಕಿನಲ್ಲಿ ಒಂದೇ ಒಂದು ಸಿಎನ್ಜಿ ಪಂಪ್ ಇರುವುದರಿಂದ ಚಾಲಕರು ದಿಕ್ಕು ತೋಚದ ಸ್ಥಿತಿಗೆ ತಲುಪಿದ್ದಾರೆ. ಆದ್ದರಿಂದ ಅನುಮತಿ ಇಲ್ಲದೆ ಮಾರಾಟ ಮಾಡುತ್ತಿರುವ ಸಿಬಿಜಿ ಇಂಧನವನ್ನು ತಕ್ಷಣ ನಿಲ್ಲಿಸಿ, ಸಿಎನ್ಜಿ ಇಂಧನ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಸಂಘ ಮನವಿ ಮಾಡಿದೆ. ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಂಜುನಾಥ, ಉದಯ ಗೊಂದಳೆ, ಶೇಖರ್ಖಾನ್ ಪಠಾಣ (ಬಾಬಾ), ಪ್ರಕಾಶ, ರಿಜಾಜ್, ಆಲಂ ಪಿಲ್ಲು, ಲಿಂಗರಾಜ್, ಇಮ್ತಿಯಾಜ್, ಅಲ್ಲಾಭಕ್ಷ ಹಿರಳ್ಳಿ, ಇಕ್ಬಾಲ್ ನಾಕೆವಾಲೆ, ನಜೀರ್ ನೇರ್ತಿ, ಮಕ್ಬೂಲ್ ಅಹ್ಮದ್ ಯಳ್ಳೂರು, ನವೀದ್ ಅಹ್ಮದ್ ಸರೋವರ ಸೇರಿದಂತೆ ಹಲವಾರು ಟ್ಯಾಕ್ಸಿ ಹಾಗೂ ಆಟೋ ಮಾಲಕರ ಮತ್ತು ಚಾಲಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.

           ಮನವಿ ನೀಡುವ ಮೊದಲು, ಸಂಘದ ಸದಸ್ಯರು ಸಿಬಿಜಿ ಗ್ಯಾಸ್ ಹೊತ್ತುಕೊಂಡು ಬಂದ ವಾಹನವನ್ನು ಮರಳಿ ಕಳುಹಿಸುವಂತೆ ಪೆಟ್ರೋಲ್ ಪಂಪ್ ಮಾಲಕರೊಂದಿಗೆ ಕೆಲಕಾಲ ವಾಗ್ವಾದ ನಡೆಸಿದರು. ಸ್ಥಳಕ್ಕೆ ಸಿಪಿಐ ರಂಗನಾಥ ನಿಲಮ್ಮನವರ, ಆಹಾರ ನೀರೀಕ್ಷಕ ಸಂಜು ಲಮಾಣಿ ಹಾಗೂ ಸಹಾಯಕ ಶಂಕರ ಹುಲಿಯಾರ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಈ ವೇಳೆ ಚಾಲಕರು ತಮಗೆ ಆಗುತ್ತಿರುವ ಅನ್ಯಾಯವನ್ನು ವಿವರಿಸಿ, ತಕ್ಷಣ ಸಿಬಿಜಿ ಗ್ಯಾಸ್ ಪೂರೈಕೆಯನ್ನು ನಿಲ್ಲಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.