ಕಾಣೆಯಾದ ಮಕ್ಕಳ ಪತ್ತೆಗೆ ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ರಚನೆ

ಕಾಣೆಯಾದ ಮಕ್ಕಳ ಪತ್ತೆಗೆ ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ರಚನೆ Task force formed at district level to locate missing children

ಧಾರವಾಡ 21: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ವಿವಿಧ ಕಾರಣಗಳಿಂದ ಮಕ್ಕಳ ಅಪಹರಣ, ನಾಪತ್ತೆ ಪ್ರಕರಣಗಳು ಮತ್ತು ಮಕ್ಕಳು ಪತ್ತೆಯಾಗದೆ ಬಾಕಿ ಇರುವ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಆದ್ದರಿಂದ ಈ ವಿಷಯವನ್ನು ಆಳವಾಗಿ ಪರೀಶೀಲಿಸುವುದು ಅತ್ಯಗತ್ಯವಾಗಿರುತ್ತದೆ ಮತ್ತು ಮಕ್ಕಳ ಹಕ್ಕುಗಳನ್ನು  ರಕ್ಷಿಸಲು ಮತ್ತು ಉತ್ತೇಜಿಸಲು ಮಕ್ಕಳ ಅಪಹರಣ ಮತ್ತು ನಾಪತ್ತೆಯಾದಂತಹ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಮತ್ತು ಅರ್ಥಪೂರ್ಣವಾಗಿ ನಿಭಾಯಿಸಲು ಮತ್ತು ಈ ನಿಟ್ಟಿನಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದಂತೆ ಕ್ರಮವಹಿಸುವುದು ಆದ್ಯತೆಯಾಗಿತ್ತದೆ. 

ಈ ನಿಟ್ಟಿನಲ್ಲಿ ಜಲ್ಲೆಯಲ್ಲಿ ಅಪಹರಣ, ಕಾಣೆಯಾದ ಮಕ್ಕಳ ಬಗ್ಗೆ ವಿವಿಧ ಇಲಾಖೆಗಳೊಂದಿಗೆ ಪರೀಶೀಲನೆ ನಡೆಸುತ್ತಿದ್ದು ಇತ್ಯರ್ಥವಾಗದೇ ಬಾಕಿ ಇರುವ ಪ್ರಕರಣಗಳ ಮಾಹಿತಿಯನ್ನು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗಿರುತ್ತದೆ ಆದ್ದರಿಂದ ಶೀಘ್ರವಾಗಿ ಕಾಣೆಯಾದ  ಮಕ್ಕಳ ಪತ್ತೆ ಹಚ್ಚಲು ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ರಚನೆಯಾಗಿದ್ದು ಸಮಿತಿಯ ಮೂಲಕ ಮಕ್ಕಳನ್ನು ಪತ್ತೆಹಚ್ಚಲು ಎಲ್ಲರು ಕಾರ್ಯಪ್ರವೃತ್ತರಾಗಬೇಕೆಂದು ಶ್ರೀ ಪರಶುರಾಮ ದೊಡ್ಡಮನಿ,  ಗೌರವಾನ್ವಿತ ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ  ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರು ತಿಳಿಸಿದರು.  

ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರದಲ್ಲಿ ಸಭೆಯನ್ನು ಆಯೋಜಿಸಿದ್ದು ಶ್ರೀ ಗುಂಜನ ಆರ್ಯಾ, ಐಪಿಎಸ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ಧಾರವಾಡ ಇವರು ಮಾತನಾಡಿ ಕಾಣೆಯಾದ ಮಕ್ಕಳನ್ನು ಪತ್ತೆ ಹಚ್ಚಲು ಎಲ್ಲ ರೀತಿಯ ಕಾರ್ಯತಂತ್ರಗಳನ್ನು ರೂಪಿಸಿದ್ದು, ಪೋಲಿಸ್ ಇಲಾಖೆಯ ಜೊತೆಗೆ ಇತರೆ ವಿವಿಧ ಇಲಾಖೆಗಳು ಕೈಜೋಡಿಸಬೇಕು. ಆದಷ್ಟು ಮಕ್ಕಳು ಕಾಣೆಯಾಗದ ಹಾಗೆ  ಪಾಲಕರಿಗೆ ಮತ್ತು ಮಕ್ಕಳಿಗೆ ಮೇಲಿಂದ ಮೇಲೆ ಆಪ್ತ ಸಮಾಲೋಚನೆ ಮಾಡಿ ತಿಳುವಳಿಕೆ ನೀಡಬೇಕು ಎಂದು ಹೇಳಿದರು. ಪೋಲಿಸ್ ಇಲಾಖೆಯಿಂದ ಹೆಚ್ಚು ಹೆಚ್ಚು ತೆರೆದ ಮನೆ ಕಾರ್ಯಕ್ರಮಗಳ ಜರೂಗಬೇಕು ಎಂದು ತಿಳಿಸಿದರು 

ಜಿಲ್ಲೆಯಲ್ಲಿ ಈಗಾಗಲೇ ಶಾಲಾ ಕಾಲೇಜುಗಳಲ್ಲಿ, ವಸತಿ ನಿಲಯಗಳಲ್ಲಿ ಮಕ್ಕಳ ಕುರಿತು ಜಿಲ್ಲಾ ಮಕ್ಕಳ ರಕ್ಷಣಾಘಟದ ವತಿಯಿಂದ ಅರಿವು, ಜಾಗೃತಿ ಮತ್ತು ತರಬೇತಿ ಹಮ್ಮಿಕೊಳ್ಳುತ್ತಿದ್ದು, ಮಕ್ಕಳು ಕಾಣೆಯಾದ ತಕ್ಷಣ ಮಕ್ಕಳ ಸಹಾಯವಾಣಿ 1098 ಅಥವಾ 112 ಗೆ ಕರೆ ಮಾಡಬೇಕು ಎಂದು ಶ್ರೀಮತಿ ದೀಪಾ ಜಾವೂರ,  ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದರು.  

ಸದರಿ ಸಭೆಗೆ ಕಾಣೆಯಾಗಿ ಪತ್ತೆಯಾಗದೆ ಇರುವ ಮಕ್ಕಳ ಪಾಲಕರು ಆಗಮಿಸಿದ್ದು, ಪಾಲಕರು ತಮಗೆ ಗೊತ್ತಿರುವ ಮಾಹಿತಿಯನ್ನು ಸಮಿತಿಯ ಮುಂದೆ ತಿಳಿಸಿ ಮಕ್ಕಳನ್ನು ಪತ್ತೆಹಚ್ಚಲು ಸಹಕರಿಸಿದರು. 

ಸಭೆಯಲ್ಲಿ ಭಾಗವಹಿಸಿದ ಶ್ರೀ ವಿನೋದ ಮುಕ್ತೆದಾರ, ಹಿರಿಯ ಮಕ್ಕಳ ಕಲ್ಯಾಣಾಧಿಕಾರಿಗಳು ಪೋಲಿಸ್ ವರಿಷ್ಠಾಧಿಕಾರಿಗಳ ಕಛೇರಿ ಇವರು ಮಾತನಾಡಿ ಪೋಲಿಸ್ ವರಿಷ್ಠಾಧಿಕಾರಿಗಳು ವ್ಯಾಪ್ತಿಯಿಂದ 2 ಮಕ್ಕಳು ಪತ್ತೆಯಾಗದೆ ಬಾಕಿ ಇದ್ದು ಹಾಗೂ ಶ್ರೀ ಎಮ್‌. ಬಿ. ದೊಡ್ಡಮನಿ, ಪೋಲಿಸ್ ಸಬ್ ಇನ್ಸಪೆಕ್ಟರ, ಇವರು ಮಾತನಾಡಿ  ಪೋಲಿಸ್ ಆಯುಕ್ತರ ಕಛೇರಿಯ ವ್ಯಾಪ್ತಿಯಿಂದ 5 ಮಕ್ಕಳು ಪತ್ತೆಯಾಗದೆ ಬಾಕಿ ಇದ್ದು,   ಒಟ್ಟು 7 ಮಕ್ಕಳು  ಕಾಣೆಯಾಗಿದ್ದು ಸದರಿ ಮಕ್ಕಳನ್ನು ಪತ್ತೆಹಚ್ಚಲು ಎಲ್ಲ ರೀತಿಯ ತಂತ್ರಗಳನ್ನು ಬಳಸಲಾಗತ್ತಿದೆ. ಆದಷ್ಠು ಬೇಗನೆ ಎಲ್ಲ ಮಕ್ಕಳನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದರು.  

ಸಭೆಯಲ್ಲಿ  ಡಾ. ಎಚ್‌. ಎಚ್‌. ಕುಕನೂರ, ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಧಾರವಾಡ, ಎಸ್‌. ಎಸ್‌. ಕೆಳದಿಮಠ, ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಆಡಳಿತ) ಧಾರವಾಡ, ಬಿ. ವಾಯ್‌. ಪಾಟೀಲ, ಅಧ್ಯಕ್ಷರು ಮಕ್ಕಳ ಕಲ್ಯಾಣ ಸಮಿತಿ ಧಾರವಾಡ ಹಾಗೂ ಶ್ರೀಮತಿ ನೂರಜಹಾನ್ ಕಿಲ್ಲೇದಾರ, ಸದಸ್ಯರು ಮಕ್ಕಳ ಕಲ್ಯಾಣ ಸಮಿತಿ,  ಗೀತಾ ಪಾಸ್ತೆ, ಸದಸ್ಯರು ಬಾಲನ್ಯಾಯ ಮಂಡಳಿ, ಬಸವರಾಜ ಕಾಮನಬೈಲ, ಪೋಲಿಸ್ ಇನ್ಸಪೇಕ್ಟರ, ಮಾನವ ಕಳ್ಳಸಾಗಾಣಿಕೆ ವಿರೋಧಿ ಘಟಕ ಧಾರವಾಡ, ನಾಗರತ್ನಾ  ಹಾಗೂ ಗಂಗಾದರ ಸ್ವಯಂ ಸೇವಾ ಮುಖ್ಯಸ್ಥರು,  ವಿಶಾಲ ಕಾನಪೇಟ ಹಾಗೂ ಶ್ರೀ ಕೆರೆಪ್ಪ ಕೌಜಲಗಿ ಪ್ಯಾರಾ ಲೀಗಲ್‌ವಾಲೆಂಟಿಯರ‌್ಸ ಇವರು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ತಿಳಿಸಿದರು.  

ಸಭೆಗೆ ಆಗಮಿಸಿದ ಎಲ್ಲರನ್ನು  ಮಹಮದ್ ಅಲಿ ತಹಶಿಲ್ದಾರ, ಕ್ಷೇತ್ರ ಕಾರ್ಯಕರ್ತರು ಇವರು ಸ್ವಾಗತಿಸಿದರು, ಅಶ್ವಿನಿ ಉಳ್ಳಿಗೇರಿ, ಸಾಂಸ್ಥಿಕ ರಕ್ಷಣಾಧಿಕಾರಿಗಳು ಇವರು ಸಭೆಯ ಪ್ರಾಸ್ತಾವಿಕ ನುಡಿ ಮಾತನಾಡಿದರು. ಶ್ವೇತಾ ಕಿಲ್ಲೆದಾರ, ಸಮಾಜ ಕಾರ್ಯಕರ್ತರು ಇವರು ವಂದಿಸಿದರು. ಸಭೆಯಲ್ಲಿ ಎಲ್ಲ ಪೋಲಿಸ್ ಠಾಣೆಯ ವಿಶೇಷ ಮಕ್ಕಳ ಪೋಲಿಸ್ ಅಧಿಕಾರಿಗಳು, ಪಾಲಕರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಭಾಗವಹಿಸಿದರು.   

ಸದರಿ ಮಾಹಿತಿಯನ್ನು ತಮ್ಮ ಪತ್ರಿಕೆಯಲ್ಲಿ ಉಚಿತವಾಗಿ ಪ್ರಕಟಿಸಿ ಸಾರ್ವಜನಿಕರಲ್ಲಿ  ಸಾರ್ವಜನಿಕರಲ್ಲಿ ಅರಿವನ್ನು ನೀಡಬೇಕಾಗಿ ಈ ಮೂಲಕ ವಿನಂತಿಸಿದೆ.