ಯುವಕರಲ್ಲಿರುವ ಪ್ರತಿಭೆ ಕಾರ್ಯಕ್ರಮಗಳ ಮೂಲಕ ಹೊರಬರಲಿವೆ: ಅಮ್ಜದ್ ಪಟೇಲ್

ಯುವಕರಲ್ಲಿರುವ ಪ್ರತಿಭೆ ಕಾರ್ಯಕ್ರಮಗಳ ಮೂಲಕ ಹೊರಬರಲಿವೆ: ಅಮ್ಜದ್ ಪಟೇಲ್ Talent in youth will come out through programs: Amjad Patel

ಕೊಪ್ಪಳ 28: ಯುವಕರಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಲು ಯುವ ಸೌರಭದಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದ್ದು, ಯುವಕರಲ್ಲಿ ಅಡಗಿರುವ ಪ್ರತಿಭೆಗಳು ಇಂತಹ ಕಾರ್ಯಕ್ರಮಗಳ ಮೂಲಕ ಹೊರಬರಲಿವೆ  ಎಂದು ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್ ಹೇಳಿದರು.  

ಅವರು ಮಂಗಳವಾರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣ ಕೊಪ್ಪಳದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೊಪ್ಪಳ ಸಾಂಸ್ಕೃತಿಕ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಯುವ ಸೌರಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಕಲೆ, ಸಂಸ್ಕೃತಿ ಹಾಗೂ ತಂತ್ರಜ್ಞಾನದಲ್ಲಿ ನಮ್ಮ ದೇಶದ ಯುವಕರು ಮುಂಚುಣಿಯಲ್ಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶವಾಗಿದ್ದು ಇಲ್ಲಿ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬಾಳುತ್ತಿದ್ದೆವೆ. ಸರ್ಕಾರ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳು ದೇಶದ ಭವಿಷ್ಯ ನಿರ್ಮಿಸುವ ನಮ್ಮ ಸಮಾಜದ ಶಕ್ತಿ ಆಗಿದ್ದಾರೆ. ಹೆಣ್ಣು ಕಲಿತರೆ ಕುಟುಂಬ ಹಾಗೂ ಸಮಾಜ ಕಲಿತ ಹಾಗೆ ಎಂದು ಹೇಳಿದರು.  

ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಮಾತನಾಡಿ, ಯುವಕರ ಮೇಲೆ ಸರಕಾರ ಬಹಳಷ್ಟು ಭರವಸೆಗಳನ್ನು ಇಟ್ಟುಕೊಂಡು ಅವರ ಕಲಿಕೆಗೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಯುವ ಪ್ರತಿಭೆ ಹಾಗೂ ಅವರ ಕೌಶಲ್ಯಗಳನ್ನು ಹೊರ ತರಲು ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಈ ನಿಟ್ಟಿನಲ್ಲಿ  ಮಹಿಳಾ ಕಾಲೇಜಿನಲ್ಲಿ ಯುವ ಸೌರಭದಂತಹ ಕಾರ್ಯಕ್ರಮ ಆಯೋಜನೆ ಮಾಡಿರುವುದು ವಿಶೇಷವಾಗಿದೆ ಎಲ್ಲರೂ ತಮ್ಮ ಕಲಿಕೆಯ ಜೊತೆಗೆ ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಗಳ ಪ್ರದರ್ಶನ ನೀಡಬೇಕೆಂದು ಹೇಳಿದರು. 

ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಚಾಂದಪಾಷಾ ಕಿಲ್ಲೆದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಕರ್ಣಕುಮಾರ, ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣಪತಿ ಕೆ. ಲಮಾಣಿ, ನಿವೃತ್ತ ಪಾಂಶುಪಾಲರಾದ ಬಿ.ಜಿ. ಕರಿಗಾರ, ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಹುಲಿಗೆಮ್ಮ ಸೇರಿದಂತೆ ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.