ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪ್ರತಿಭಾ ಪುರಸ್ಕಾರ

ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪ್ರತಿಭಾ ಪುರಸ್ಕಾರ Talent Award at Basaveshwara Arts College

ಲೋಕದರ್ಶನ ವರದಿ 

 ಬಾಗಲಕೋಟೆ 16: ಗೆಲುವು ಪ್ರಮಾಣ ಪತ್ರಗಳಿಂದ ದಕ್ಕುವುದಿಲ್ಲ ಅದು ಶಿಸ್ತು, ನಿರಂತರ ಪ್ರಯತ್ನ ಮತ್ತು ಅಧ್ಯಯನದಿಂದ ಸಿದ್ಧಿಸುತ್ತದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಅಧ್ಯಯನದ ಒಂದು ಭಾಗವಾಗಿದ್ದು ಗೆಲವು ಮತ್ತು ಸೋಲುಗಳನ್ನು ಸಮನಾಗಿ ಸ್ವೀಕರಿಸುವ ಗುಣ ಬೆಳಸಿಕೊಳ್ಳಿ ಎಂದು ಪ್ರಾಚಾರ್ಯರಾದ ಎಸ್‌.ಆರ್ ಮೂಗನೂರಮಠ ಹೇಳಿದರು. ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ವಾರ್ಷಿಕ ಸಂಚಿಕೆ ಹಾಗೂ ಪತ್ರಿಕೋದ್ಯಮ ವಿಭಾಗದ ಕಲಾವಾಣಿ ಪತ್ರಿಕೆ ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿ ಮಾತಾನಾಡಿದ ಅವರು ಬೀಳ್ಕೊಡುಗೆ ಎಂದರೆ ಅಗಲಿಕೆಯಲ್ಲ ಅತ್ಯುನ್ನತ ಸಾಧನೆಗೆ ಮೆಟ್ಟಿಲಿದ್ದಂತೆ. ಸಮ್ಮಿಶ್ರ ಭಾವಗಳ ಸಮಾರಂಭ ಇದಾಗಿದ್ದು ಉತ್ಸವದ ಜೊತೆಗೆ ಸಾಧನೆ, ಯಶಸ್ಸುಗಳ ಸ್ಮರಣೆ ಮತ್ತು ಕಳೆದ ಕ್ಷಣಗಳನ್ನು ನೆನಪಿಸಿಕೊಳ್ಳುವ ಕ್ಷಣವಾಗಿದೆ.  

ನಿರಂತರ ಶ್ರಮ ಮತ್ತು ಪ್ರಯತ್ನದಿಂದ ಯಶಸ್ಸು ಬರುತ್ತದೆ. ಪದವಿ ಮುಗಿಸಿ ಹೊರಹೋಗುತ್ತಿರುವ ವಿದ್ಯಾರ್ಥಿಗಳು ಮಹಾವಿದ್ಯಾಲಯದಿಂದ ಪ್ರಶಸ್ತಿಗಳ ಜೊತೆಗೆ ಮೌಲ್ಯಗಳನ್ನು ರೂಡಿಸಿಕೊಂಡು ಹೊರಹೋಗಬೇಕು. ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬೆಳೆಯಬೇಕು. ಉನ್ನತ ಅಧ್ಯಯನಕ್ಕಾಗಿ ಮುಂದೆ ಹೋದರು. ಜ್ಞಾನದ ಬೆಂಬಲ ನೀಡಲು ಯಾವಾಗಲೂ ಮಹಾವಿದ್ಯಾಲಯ ಸನ್ನದ್ದವಾಗಿದೆ.  ವಿದ್ಯಾರ್ಥಿಗಳ ಸಾಧನೆಗೆ ಪ್ರೊತ್ಸಾಹ ನೀಡುತ್ತಿರುವ ದತ್ತುನಿಧಿ ಹಣ ಹೂಡಿಕೆ ಮಾಡಿದ ಗಣ್ಯರ ಕೊಡುಗೆಯೂ ಸ್ಮರಣಾದಾಯಕ ಎಂದರು. 

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ್ ಶೆಲ್ಲಿಕೇರಿ ಮಾತನಾಡಿ ಉತ್ತರ ಕರ್ನಾಟಕದಲ್ಲಿ ಬಸವೇಶ್ವರ ಶಿಕ್ಷಣ ಸಂಸ್ಥೆ ಧರ್ಮದ ಗುಡಿಯಂತೆ ಸೇವೆ ಸಲ್ಲಿಸುತ್ತಿದೆ. ಸಮಾಜದಲ್ಲಿ  ಬಿವಿವಿ ಸಂಘವು ಕನ್ನಡವನ್ನು ಕಟ್ಟುವುದರ ಜೊತೆಗೆ ವಿದ್ಯಾರ್ಥಿಗಳನ್ನು ಸಂಸ್ಕಾರವಂತರನ್ನಾಗಿಸುವ ಕೆಲಸ ಮಾಡುತ್ತಿದ್ದು ಬೀಳೂರು ಮಹಾಸ್ವಾಮಿಗಳ ತತ್ವಗಳನ್ನು ಮುನ್ನಡಿಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿ ಜೀವನದಲ್ಲಿ ಸಾಕಷ್ಟು ಅವಕಾಶಗಳಿದ್ದು ಅವುಗಳನ್ನು ಸಮರ​‍್ಕವಾಗಿ ಬಳಸಿಕೊಳ್ಳಿ. ಹಿರಿಯರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಿ  ಮುಂದಿನ ಜೀವನದಲ್ಲಿ ಉತ್ತರೋತ್ತರವಾಗಿ ಬೆಳೆದು ಕನಸನ್ನು ನನಸು ಮಾಡಿಕೊಂಡು ಉತ್ತಮ ವಾಗ್ಮಿಗಳಾಗಿ ಎಂದು ವಿದ್ಯಾರ್ಥಿಗಳಿಗೆ ಶ್ಲಾಘೀಸಿದರು.  

ಕಾರ್ಯಕ್ರಮದಲ್ಲಿ ವಾರ್ಷಿಕ ವರದಿಯನ್ನು ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ಎಸ್‌.ಡಿ. ಕೆಂಗಲಗುತ್ತಿ ಪ್ರಸ್ತುತ ಪಡಿಸಿದರು. ಸಾಂಸ್ಕೃತಿಕ ಚಟುವಟಿಕೆ ಸಂಯೋಜಕರಾದ ಡಾ. ಕೆ.ವಿ. ಮಠ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ಐಕ್ಯೂಎಸಿ ಘಟಕದ ಸಂಯೋಜಕ ಡಾ.ಎ.ಯು. ರಾಠೋಡ್, ದೈಹಿಕ ಶಿಕ್ಷಣ ನಿರ್ದೇಶಕರಾದ ಎಮ್‌.ಎಮ್‌.ದೇವನಾಳ, ವಿದ್ಯಾರ್ಥಿ ಪ್ರತಿನಿಧಿಗಳಾದ ತಾನಾಜಿ ವಿಭೂತಿ, ಗಾಯತ್ರಿ ರಾಠೋಡ್, ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  

ಸಾಧಕರಿಗೆ ಸನ್ಮಾನ: 

ಬಿವಿವಿ ಸಂಶೋಧನಾ ಕೇಂದ್ರಕ್ಕೆ ಹಂಪಿ ವಿವಿ ಅಡಿಯಲ್ಲಿ ಕನ್ನಡ ವಿಭಾಗದಲ್ಲಿ ಮಾರ್ಗದರ್ಶಕರಾಗಿ ನೇಮಕರಾದ ಡಾ.ವೀರುಪಾಕ್ಷ ಎನ್‌.ಬಿ, ಅರ್ಥಶಾಸ್ತ್ರ ವಿಭಾಗದ ಡಾ. ಎ.ಯು ರಾಠೋಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ರಾಚವಿವಿ ಇಂದ ಪಿ.ಎಚ್‌.ಡಿ ಪಡೆದ ಇಂಗ್ಲಿಷ್ ವಿಭಾಗದ ಆರ್‌.ಸುರೇಶ ಅವರಿಗೂ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪ್ರತಿಭಾ ಪುರಸ್ಕಾರ ಮಾಡಿ ಸನ್ಮಾನಿಸಲಾಯಿತು. ಪ್ರಬಂಧ, ಚರ್ಚಾ, ಭಾಷಣ, ನೃತ್ಯ, ಸಂಗೀತ ಹಾಗೂ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕಬ್ಬಡಿ, ಕ್ರೀಕೆಟ್, ಖೋ ಖೋ, ಮಲ್ಲಕಂಬ ಸ್ಪರ್ಧೆಯಲ್ಲಿನ ವಿಜೇತರಿಗೆ ಅಥಿತಿಗಳು ಪ್ರಶಸ್ತಿ ಪ್ರಧಾನ ಮಾಡಿದರು.  ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರ ಮೂಲಕ ಸಾಧನೆಗೈದ ಪದವಿ ಮತ್ತು ಪಿಯುಸಿ ಮಟ್ಟದ ವಿದ್ಯಾರ್ಥಿಗಳಿಗೆ ದತ್ತಿನಿಧಿ ನಗದು ಬಹುಮಾನ ವಿತರಿಸಿ ಗೌರವಿಸಲಾಯಿತು. ಬಳಿಕ  ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ವಿದ್ಯಾರ್ಥಿ ವಿದ್ಯಾರ್ಥಿನಿಯರು ನೃತ್ಯಗಳಿಗೆ ಹೆಜ್ಜೆ ಹಾಕಿ ಸಂಗೀತ ಹಾಡಿ ಸಂಭ್ರಮಿಸಿದರು.