ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವಕ್ಷೇತ್ರದಲ್ಲಿ ಸ್ವಚ್ಛತೆ ಮತ್ತು ನದಿಗೆ ನೀರು ಹರಿಸಲು ಕ್ರಮ ಕೈಗೊಳ್ಳಿ: ಡಾ. ಸುರೇಶ ಇಟ್ನಾಳ

ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವಕ್ಷೇತ್ರದಲ್ಲಿ ಸ್ವಚ್ಛತೆ ಮತ್ತು ನದಿಗೆ ನೀರು ಹರಿಸಲು ಕ್ರಮ ಕೈಗೊಳ್ಳಿ: ಡಾ. ಸುರೇಶ ಇಟ್ನಾಳ Take steps to ensure cleanliness at the fairgrounds of Sri Huligemma Devi Temple and discharge water

ಕೊಪ್ಪಳ  23:  ಕೊಪ್ಪಳ ಜಿಲ್ಲೆ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ 2026ರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಕ್ಷೇತ್ರಕ್ಕೆ ಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡಲು ಮತ್ತು ತುಂಗಭದ್ರ ಆಣೆಕಟ್ಟೆಯಿಂದ ನದಿಗೆ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಶ್ರೀಕ್ಷೇತ್ರದ ಸ್ವಚ್ಚತೆಗಾಗಿ ದೇವಸ್ಥಾನದ ವತಿಯಿಂದ ಹೆಚ್ಚುವರಿಯಾಗಿ 50 ಜನ ಸ್ವಚ್ಛತಾ ಸಿಬ್ಬಂದಿಗಳನ್ನು ತೆಗೆದುಕೊಳ್ಳಬೇಕು. ದೇವಸ್ಥಾನ ಗೋಪುರದಿಂದ ಮುದ್ದಮ್ಮನ ಕಟ್ಟೆಯವರೆಗೆ, ಮುದ್ದಮ್ಮನ ಕಟ್ಟೆಯಿಂದ ನಂದಿ ಸರ್ಕಲ್, ಟ್ಯಾಂಕ್ ಏರಿಯಾ,

ನದಿ ತೀರದ ಹತ್ತಿರ, ದೇವಸ್ಥಾನದ ಒಳ ಆವರಣ ಮತ್ತು ಪಾಕಿಂರ್ಗ್ ಪ್ರದೇಶ ಹೀಗೆ ಒಂದೊಂದು ಏರಿಯಾಗಳನ್ನು ಹಂಚಿಕೆ ಮಾಡಿ ಸದರಿ ಏರಿಯಾಗಳ ಸ್ವಚ್ಛತೆಯ ಸಂಪೂರ್ಣ ಜವಾಬ್ದಾರಿಯನ್ನು ಪ್ರತಿಯೊಂದು ತಂಡಕ್ಕೆ ನೀಡಿ, ಹಸಿಕಸ ಮತ್ತು ಒಣಕಸವನ್ನು ಹೊಸಹಳ್ಳಿ ಕಸವಿಲೇವಾರಿ ಘಟಕಕ್ಕೆ ಕಳುಹಿಸಬೇಕು. ಯಾವುದೇ ರೀತಿಯ ರೋಗ ರುಜಿನಗಳು ಬರದಂತೆ ಮುಂಜಾಗ್ರತೆ ವಹಿಸಲು ಪ್ರತಿ ವರ್ಷದಂತೆ ಬ್ಲೀಚಿಂಗ ಪೌಡರ್, ಫಿನಾಯಿಲ್‌ಗಳನ್ನು ಖರೀದಿಸಿ, ಸಿಂಪಡಿಸಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ಕೊಡಿ. ಜಾತ್ರೆಯ ನಂತರ ಹುಲಿಗಿ ಗ್ರಾಮದ ಪ್ರಮುಖ ರಸ್ತೆಗಳು, ಶಾಲೆಗಳು, ಬಸ್ ನಿಲ್ದಾಣ ಮುಂತಾದ ಕಡೆ ಸ್ವಚ್ಚತೆಗೂ ಅಗತ್ಯ ಕ್ರಮ ಕೈಗೊಳ್ಳಲು ಕೊಪ್ಪಳ ನಗರಸಭೆ ವತಿಯಿಂದ ಸಕ್ಕಿಂಗ್ ಮಷಿನ್‌-1 ಸ್ವಚ್ಛತೆ ಮಾಡಲು ನಗರಸಭೆ ಅಧಿಕಾರಿಗಳು, ಮತ್ತು ಗ್ರಾಮ ಪಂಚಾಯತ ಅಧಿಕಾರಿಗಳು ಮೇಲ್ವಿಚಾರಣೆ ಮಾಡುವಂತೆ ಸೂಚಿಸಿದರು. 

ಜಾತ್ರೆಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜಾತ್ರೆ ಪ್ರಾರಂಭವಾಗುವ ಪೂರ್ವದಲ್ಲಿ ಹಾಗೂ ಜಾತ್ರಾ ನಂತರ ಗ್ರಾಮದ ವ್ಯಾಪ್ತಿಗೆ ಬರುವ ಎಲ್ಲಾ ಚರಂಡಿಗಳನ್ನು ಗ್ರಾಮ ಪಂಚಾಯಿತಿ ಮತ್ತು ಮತ್ತು ದೇವಸ್ಥಾನದ ವ್ಯಾಪ್ತಿಗೆ ಬರುವ ಎಲ್ಲಾ ಚರಂಡಿಗಳನ್ನು ದೇವಸ್ಥಾನದ ವತಿಯಿಂದ ಸ್ವಚ್ಚಗೊಳಿಸಿ ಬ್ಲೀಚಿಂಗ್ ಪೌಡರ್ ಹಾಕಬೇಕು. ನೀರಿನ ಟ್ಯಾಂಕ್‌ಗಳಿಗೆ ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಚಗೊಳಿಸಲು ಮತ್ತು ಗ್ರಾಮದಲ್ಲಿ ಜಾತ್ರಾ ವೇಳೆ ಸೊಳ್ಳೆಗಳ ನಿಯಂತ್ರಣಕ್ಕಾಗಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು, ಪ್ರಾ.ಅ.ಕೇ,ಹುಲಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಹಾಗೂ ಹುಲಿಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಇತ್ತೀಚೆಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. 

ಜಾತ್ರಾ ಸಮಯದಲ್ಲಿ ತುಂಗಭದ್ರ ಆಣೆಕಟ್ಟೆಯಿಂದ ನದಿಗೆ ನೀರು: ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೇ 10 ರಿಂದ ಮೇ 14ರ ವರೆಗೆ, ಈ ಅವಧಿಯಲ್ಲಿ ಜಾತ್ರೆಗೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಕುಡಿಯುವ ನೀರಿನ ಅವಶ್ಯಕತೆ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಭಕ್ತರಿಗೆ ಅನಾನುಕೂಲವಾಗದಂತೆ ಪ್ರತಿ ವರ್ಷ ಕ್ರಮ ಕೈಗೊಳ್ಳುವಂತೆ, ಈ ವರ್ಷವು ಅದೇ ರೀತಿ ತುಂಗಭದ್ರ ಆಣೆಕಟ್ಟೆಯಿಂದ ನದಿಗೆ ನೀರು ಬಿಡಲು ನೀರಾವರಿ ಇಲಾಖೆ ಟಿ.ಬಿ.ಬೋರ್ಡ ಟಿ.ಬಿಡ್ಯಾಂ ್ಘ ಮುನಿರಾಬಾದ್ ಡ್ಯಾಂನ ಮುಖ್ಯ ಕಾರ್ಯಪಾಲಕ ಅಭಿಯಂತರರು ಹಾಗೂ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಸೂಕ್ತ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.   ಹವಾಮಾನ ಮುನ್ಸೂಚನೆ: ರೈತರಿಗೆ ಕೃಷಿ ಇಲಾಖೆಯಿಂದ ಪ್ರಮುಖ ಸಲಹೆ ಕೊಪ್ಪಳ  23: ಹವಾಮಾನ ಮುನ್ಸೂಚನೆ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ರೈತರಿಗೆ ಕೃಷಿ ಇಲಾಖೆಯಿಂದ ಪ್ರಮುಖ ಸಲಹೆಗಳನ್ನು ನೀಡಲಾಗಿದೆ.  

ಭಾರತೀಯ ಹವಾಮಾನ ಇಲಾಖೆ, ಬೆಂಗಳೂರು ಇವರ ಮುನ್ಸೂಚನೆಯ ಪ್ರಕಾರ ಕೊಪ್ಪಳ ಜಿಲ್ಲೆಯಲ್ಲಿ ಮುಂದಿನ ಐದು ದಿನಗಳವರೆಗೆ ಭಾಗಶಃ ಮೋಡಕವಿದ ವಾತಾವರಣ ಇರಲಿದೆ. ಈ ಅವಧಿಯಲ್ಲಿ ಗರಿಷ್ಠ ಉಷ್ಣಾಂಶ 39 ರಿಂದ 40'ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 24 ರಿಂದ 25'ಸೆಲ್ಸಿಯಸ್ ಇರುವ ಸಾಧ್ಯತೆ ಇದೆ. ಗರಿಷ್ಠ ಆರ್ದ್ರತೆ 61ಹಿ63ಅ ಮತ್ತು ಕನಿಷ್ಠ ಆರ್ದ್ರತೆ 27 ರಿಂದ 29ಅ ಇರಬಹುದು. ಗಾಳಿಯ ವೇಗವು ಗಂಟೆಗೆ 4.0 ರಿಂದ 6.0 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಈ ಮುನ್ಸೂಚನೆಯ ಪ್ರಕಾರ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜಿಲ್ಲೆಯ ರೈತರು ಮತ್ತು ಸಾರ್ವಜನಿಕರು ಶಾಖ ಅಲೆ ವಿರುದ್ಧ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ತಾಪಮಾನ ಏರಿಕೆಯಿಂದ ಕೀಟಬಾಧೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ರೈತರು ಬೆಳಗಿನ ಜಾವದಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ. 

 ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಮೊದಲ ಮಳೆ ಬಿದ್ದ ತಕ್ಷಣ ಉಳುಮೆ ಮಾಡಲು ಹದ ಸಿಗುತ್ತದೆ. ಜಮೀನನ್ನು ಸಮತಟ್ಟಾಗಿಸಿ, ಹದ ಸಿಕ್ಕಾಗ ಉಳುಮೆ ಮಾಡಿದರೆ ಮಣ್ಣು ಸಡಿಲವಾಗಿ ಮಳೆ ನೀರು ಭೂಮಿಯಲ್ಲೇ ಇಂಗುತ್ತದೆ. ಇದರಿಂದ ಹೆಚ್ಚುವರಿ ಮಳೆಯ ಸಮಯದಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಾಗುತ್ತದೆ. ಹಿಂಗಾರು ಹಂಗಾಮಿನ ಬೆಳೆಗಳನ್ನು ಕಟಾವು ಮಾಡಿದ ನಂತರ ಭೂಮಿಯಲ್ಲಿ ತೇವಾಂಶ ಕಡಿಮೆ ಇರುತ್ತದೆ. ಬೇಸಿಗೆಯಲ್ಲಿ ಮಳೆ ಬಂದರೆ, ಹಸಿಯಾದ ಮಣ್ಣನ್ನು ಟ್ರ್ಯಾಕ್ಟರ್ ಅಥವಾ ನೇಗಿಲಿನಿಂದ ಇಳಿಜಾರಿಗೆ ಅಡ್ಡವಾಗಿ ಉಳುಮೆ ಮಾಡಬೇಕು.  

ಮಾಗಿ ಉಳುಮೆಯ ಪ್ರಯೋಜನಗಳು: ಮಣ್ಣು ಸಡಿಲವಾಗುವುದರಿಂದ ಮಳೆ ನೀರು ಭೂಮಿಯಲ್ಲಿ ಹೆಚ್ಚು ಇಂಗುತ್ತದೆ. ಬೆಳೆ ಅವಶೇಷಗಳು ಮಣ್ಣಿನಲ್ಲಿ ಬೆರೆತು ಸಾವಯವ ಗೊಬ್ಬರವಾಗುತ್ತವೆ. ಕೀಟಗಳು ಮತ್ತು ರೋಗಕಾರಕ ಜೀವಿಗಳು ಸೂರ್ಯನ ತಾಪಕ್ಕೆ ನಾಶವಾಗುತ್ತವೆ. ಮಣ್ಣು ಕೊಚ್ಚಿಹೋಗುವುದನ್ನು ತಡೆಯಬಹುದು ಹಾಗೂ ನೀರು ಜಮೀನಿನಲ್ಲೇ ಉಳಿಯುತ್ತದೆ. ಕರಕೆ ಮತ್ತು ಜೇಕೆ ಮೊದಲಾದ ಬಹುವಾರ್ಷಿಕ ಕಳೆಗಳನ್ನು ನಿಯಂತ್ರಿಸಬಹುದು.  ಈ ಪ್ರಯೋಜನಗಳನ್ನು ಪಡೆಯಲು ಮಧ್ಯಮದಿಂದ ಆಳವಾದ ಕಪ್ಪು ಮಣ್ಣಿನಲ್ಲಿ ಪ್ರತಿ 2 ರಿಂದ 3 ವರ್ಷಕ್ಕೊಮ್ಮೆ ಹಾಗೂ ಕೆಂಪು ಅಥವಾ ಮಿಶ್ರಿತ ಕಪ್ಪು ಮಣ್ಣಿನಲ್ಲಿ ಪ್ರತಿ ವರ್ಷ ಆಳವಾದ ಮಾಗಿ ಉಳುಮೆ ಮಾಡುವುದು ಸೂಕ್ತ.  

 ಉಷ್ಣಾಂಶ ಹೆಚ್ಚುತ್ತಿರುವುದರಿಂದ ಮತ್ತು ಮಳೆಯ ಕೊರತೆಯಿಂದ, ಬೆಳೆಗಳ ಸುತ್ತ ಮಲ್ಚಿಂಗ್ ಮಾಡಿ ಮಣ್ಣಿನ ತೇವಾಂಶವನ್ನು ಉಳಿಸಿಕೊಳ್ಳಬೇಕು. ಹಿಂಗಾರು ಬೆಳೆ ಕಟಾವಿನ ನಂತರ ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು   ಅಗತ್ಯ. ಮಣ್ಣಿನ ಮಾದರಿಯನ್ನು ಸಂಗ್ರಹಿಸುವಾಗ ಬದುವಿನ ಮಣ್ಣು, ಅತಿಯಾಗಿ ಹಸಿ ಮಣ್ಣು ಅಥವಾ ಮಳೆಯಾದ ತಕ್ಷಣದ ಮಣ್ಣು ಬಳಸಬಾರದು. ಬೆಳೆ ಅವಶೇಷಗಳನ್ನು ಸುಡದೇ, ಅವನ್ನು ಸಾವಯವ ಗೊಬ್ಬರ ಅಥವಾ ಕೊಟ್ಟಿಗೆ ಗೊಬ್ಬರ ತಯಾರಿಸಲು ಬಳಸಬೇಕು. ಉಗ್ರಾಣ ಕೀಟಗಳ ಹಾನಿ ತಪ್ಪಿಸಲು ಧಾನ್ಯಗಳಲ್ಲಿ 11 ರಿಂದ 12ಅ ತೇವಾಂಶ, ದ್ವಿದಳ ಧಾನ್ಯಗಳಲ್ಲಿ 8ಅ ಮತ್ತು ಎಣ್ಣೆ ಬೀಜಗಳಲ್ಲಿ 9ಅ ತೇವಾಂಶವನ್ನು ಕಾಯ್ದುಕೊಳ್ಳಬೇಕು.

ಭತ್ತದ ಬೆಳೆಗೆ ಸಂಬಂಧಿಸಿದಂತೆ, ಕೊಯ್ಲಿಗೆ ಮುನ್ನ ಹೊಲದಿಂದ ನೀರನ್ನು ಹೊರಹಾಕಬೇಕು. ಕೊಯ್ಲು ಹಂತದಲ್ಲಿದ್ದರೆ ಸಂಯೋಜಿತ ಕೊಯ್ಲು ಯಂತ್ರಗಳನ್ನು ಬಳಸುವುದು ಉತ್ತಮ. ಭತ್ತದ ಒಣ ಹುಲ್ಲಿನ ನಿರ್ವಹಣೆಗೆ ಬೇಲರ್ ಉಪಕರಣ ಬಳಸಬೇಕು. ಯಾವುದೇ ಕಾರಣಕ್ಕೂ ಭತ್ತದ ಒಣ ಹುಲ್ಲನ್ನು ಬೆಂಕಿ ಹಚ್ಚಿ ಸುಡಬಾರದೆಂದು ಜಂಟಿ ಕೃಷಿ ನಿರ್ದೇಶಕರು ರೈತರಲ್ಲಿ ಮನವಿ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಕೃಷಿ ವಿಸ್ತರಣ ಘಟಕ ಅಥವಾ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಲು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರಾದ ಜಿ.ಟಿ ಕೃಷ್ಣಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.