ಭೂ ಗ್ಯಾರಂಟಿ ಯೋಜನೆಯ ಲಾಭ ಪಡೆದುಕೊಳ್ಳಿ

ಭೂ ಗ್ಯಾರಂಟಿ ಯೋಜನೆಯ ಲಾಭ ಪಡೆದುಕೊಳ್ಳಿ Take advantage of the land guarantee scheme

ಬ್ಯಾಡಗಿ 13 : ತಾಲೂಕಿನ ಜನತೆ ಭೂ ಗ್ಯಾರಂಟಿ ಯೋಜನೆಯ ಲಾಭ ಪಡೆದುಕೊಂಡು ಮನೆಯೋಡೆಯರಾಗುವಂತೆ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಶುಕ್ರವಾರ ಅವರು ತಾಲೂಕಿನ ಛತ್ರ ಗ್ರಾಮದಲ್ಲಿ ಭೂ ಗ್ಯಾರಂಟಿ ಯೋಜನೆಯಡಿ ಬನ್ನಿ ಹಟ್ಟಿ, ಬಿಸಲಹಳ್ಳಿ, ಕಲ್ಲೇ ದೇವರ ಹಾಗೂ ಬುಡಪನಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಫಲಾನುಭವಿಗಳಿಗೆ ವಸತಿ ಹಕ್ಕು ಪತ್ರಗಳನ್ನು ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದಶಕಗಳಿಂದ ಕಂದಾಯ ವ್ಯಾಪ್ತಿಗೆ ಬಾರದ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಅದರಲ್ಲಿನ ಕುಟುಂಬಗಳಿಗೆ ಉಳುವವನೇ ಭೂಮಿಯ ಒಡೆಯ ಮಾದರಿಯಲ್ಲಿ ವಾಸಿಸುವವನೇ ಮನೆಯ ಒಡೆಯ ಎಂದು ಹಕ್ಕುಪತ್ರಗಳನ್ನು ವಿತರಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈಗಾಗಲೇ ತಾಲೂಕಿನ ಅನೇಕ ಗ್ರಾಮಗಳಲ್ಲಿಯ ವಸತಿ ರಹಿತ ಫಲಾನುಭವಿಗಳಿಗೆ ಭೂ ಗ್ಯಾರಂಟಿ ಯೋಜನೆಯಡಿ 1500 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದೆ.

ಇಂದು 400 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದೆ.ನಮ್ಮ ಗ್ಯಾರಂಟಿ ಯೋಜನೆಗಳು ಎಲ್ಲಾ ಸಮುದಾಯಗಳನ್ನು ತಾರತಮ್ಯವಿಲ್ಲದೆ ಉನ್ನತೀಕರಿಸುತ್ತವೆ ಮತ್ತು ಸಾಮಾಜಿಕ ಮತ್ತು ಆರ್ಥಿಕವಾಗಿ ಅವರನ್ನು ಬಲಪಡಿಸುತ್ತವೆ ಎಂದು ಹೇಳಿದರು.ತಾಲೂಕಾ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ದಾನಪ್ಪ ಚೂರಿ ಮಾತನಾಡಿ ನಮ್ಮ ಸರಕಾರಚುನಾವಣೆ ವೇಳೆ ನಾವು ಕೊಟ್ಟಿದ್ದ ಭರವಸೆಗಳಲ್ಲಿ ಐದು ಗ್ಯಾರಂಟಿಗಳ ಜೊತೆಗೆ ಆರನೇ ಗ್ಯಾರಂಟಿ ಯೋಜನೆಯಾದ ಭೂ ಗ್ಯಾರಂಟಿ ಯೋಜನೆಯ ಜೊತೆಗೆ 142 ಭರವಸೆಗಳನ್ನು ಮೂರು ವರ್ಷಗಳಲ್ಲಿ ಪೂರೈಸಿದ್ದೇವೆ.

ತಾಲೂಕಿನಲ್ಲಿ ಶಾಸಕರು ಹೆಚ್ಚಿನ ಅಭಿವೃದ್ಧಿ ಮಾಡಿದ್ದಾರೆಂದರು.ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣ್ಯರಾದ ವಿ.ವಿ.ಹಿರೇಮಠ, ನಾಗಣ್ಣ ಆನ್ವೇರಿ, ನ್ಯಾಯವಾದಿ ಬಿ.ಎಂ.ಗೌರಾಪುರ ಮಾತನಾಡಿದರು. ವೇದಿಕೆಯಲ್ಲಿ ತಾಲೂಕಾ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಶಂಭನಗೌಡ ಪಾಟೀಲ, ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಲಕ್ಷ್ಮಿ ಜಿಂಗಾಡೆ, ತಹಶೀಲ್ದಾರ ಚಂದ್ರಶೇಖರ ನಾಯ್ಕ,ಧುರೀಣರಾದ ಚನ್ನಬಸಪ್ಪ ಹುಲ್ಲತ್ತಿ, ರಮೇಶ ಕೋಟಿಯವರ, ಸುರೇಶ ಯಮನಕ್ಕನವರ,ಬಸವರಾಜ ಬೆಳಕೇರಿ ಸೇರಿದಂತೆ ಇತರರಿದ್ದರು.