ಪ್ರಖರ ರಾಷ್ಟ್ರೀಯವಾದಿ ಶ್ಯಾಮಪ್ರಸಾದ ಮುಖರ್ಜಿ

ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಶ್ಯಾಮಪ್ರಸಾದ ಮುಖರ್ಜಿ ಜಮ್ಮೂ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿರಬೇಕೆಂದು ಕಂಡಿದ್ದ ಕನಸು, ಮಾಡಿದ ಹೋರಾಟ ಈಗ ನನಸಾಗಿದೆ, ಸಫಲವಾಗಿದೆ. ಕಾಶ್ಮೀರದಲ್ಲೇ 1953 ರಲ್ಲಿ ನಿಗೂಢ ಸಾವನ್ನಪ್ಪಿದ ಅವರ ಆತ್ಮಕ್ಕೆ ಈಗ ಶಾಂತಿ ದೊರಕಿದಂತಾಗಿದೆ.   

ಶ್ಯಾಮಪ್ರಸಾದ ಮುಖರ್ಜಿ ಮಹಾನ್ ಪ್ರತಿಭಾವಂತರು, ಪ್ರಖರ ರಾಷ್ಟ್ರೀಯವಾದಿಗಳು, ಉಜ್ವಲ ರಾಷ್ಟ್ರೇ​‍್ರಮಿಗಳು. ಭಾರತದ ರಾಜಕೀಯ ರಂಗದಲ್ಲಿ ಅವರದು ಗೌರವಾನ್ವಿತ ವ್ಯಕ್ತಿತ್ವ. ಅವರು ಜನಿಸಿದ್ದು 1901 ಜುಲೈ ಆರರಂದು ಕೊಲ್ಕತ್ತಾದಲ್ಲಿ. ಕಾನೂನು ಪದವಿ ಪಡೆದ ಅವರು 1926ರಲ್ಲಿ ಇಂಗ್ಲಂಡ್ ನಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ಮರಳಿ ಬಂದು  ವಕೀಲರಾದರೂ ಮುಂದೆ  ತಮ್ಮ 33 ನೇ ವಯಸ್ಸಿನಲ್ಲೇ ಕೊಲ್ಕತ್ತಾ ವಿಶ್ವವಿದ್ಯಾಲಯದ ಕುಲಪತಿಗಳಾಗಿ 38 ರತನಕ ಸೇವೆ ಸಲ್ಲಿಸಿದರು.  ಆ ಮೂಲಕ ಅತಿ ಕಡಿಮೆ ವಯಸ್ಸಿನಲ್ಲಿ ವಿ.ವಿ. ಕುಲಪತಿಗಳಾದವರೆನಿಸಿದರು.   

ಸಕ್ರಿಯ ರಾಜಕೀಯಕ್ಕೆ ಧುಮುಕಿದ ಅವರು ಮೊದಲು ಕೃಷಿ ಸಮಾಜ ಪಕ್ಷದಿಂದ ಆರಿಸಿಬಂದು ಬಂಗಾಲ ಸರಕಾರದಲ್ಲಿ ವಿತ್ತಮಂತ್ರಿಯಾದರು. ಮುಂದೆ ಸಂಸದರಾಗಿಆಯ್ಕೆಯಾದ ಅವರು ಗಾಂಧೀಜಿ ಮತ್ತು ಪಟೇಲರ ಆಶಯದಂತೆ ನೆಹರೂ ಮಂತ್ರಿಮಂಡಳ ಸೇರಿ ಉದ್ಯೋಗ ವಾಣಿಜ್ಯ ಖಾತೆ ಮಂತ್ರಿಯಾದರು. ಆದರೆ ನೆಹರೂ ಮತ್ತು ಅವರಲ್ಲಿ ಹೊಂದಾಣಿಕೆ ಇರಲಿಲ್ಲ. ತಮ್ಮ ಸ್ಥಾನಕ್ಕೆ ರಾಜೀನಾಮೆ ಇತ್ತು ಹೊರಬಂದ ಅವರು 1951ರಲ್ಲಿ ಭಾರತೀಯ ಜನಸಂಘವನ್ನು ಸ್ಥಾಪಿಸಿದರು. ಅದರ ಮೊದಲ ಸಂಸ್ಥಾಪಕ ಅಧ್ಯಕ್ಷರಾದರು.  ಆಗಲೇ ಅವರು ಜಮ್ಮುಕಾಶ್ಮೀರವನ್ನು ಭಾರತದೊಡನೆ ವೀಲೀನಗೊಳಿಸಲು ಸಂವಿಧಾನದ 370ನೇ ವಿಧಿಯನ್ನು ತಿದ್ದುಪಡಿ ಮಾಡಲು ಉಗ್ರ ಹೋರಾಟ ನಡೆಸಿದರು. ಅನುಮತಿ ಇಲ್ಲದೇ ಕಾಶ್ಮೀರ ಪ್ರವೇಶಿಸಿ ಬಂಧನಕ್ಜೊಳಗಾಗ ಅವರನ್ನು ಅಲ್ಲಿನ ಸರಕಾರ ಬಂಧಿಸಿತು. ಮುಖರ್ಜಿ 1951 ರ ಜೂನ್ 23 ರಂದು ಅಲ್ಲೇ ನಿಗೂಡ ಸಾವನ್ನು ಕಂಡರು. ಆಗಿನ ನೆಹರೂ ಸರಕಾರ ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.  (ಲಾಲಬಹಾದೂರ ಶಾಸ್ತ್ರಿ ತಾಷ್ಕೆಂಟ್ ನಲ್ಲಿ ನಿಗೂಢವಾಗಿ ಸತ್ತಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.) ಭಾರತ ಪಾಕ್ ವಿಭಜನೆಯ ಸಂದರ್ಭದಲ್ಲಿ ಬಂಗಾಲ ಮತ್ತು ಪಂಜಾಬ ಅರ್ಧದಷ್ಟಾದರೂ ಉಳಿದುಕೊಳ್ಳಲು ಶ್ಯಾಮಪ್ರಸಾದ ಮುಖರ್ಜಿಯವರೇ ಕಾರಣ ಎನ್ನುವದನ್ನು ನಾವು  ಮರೆಯಬಾರದು. ಅವರಲ್ಲಿ ಅಪಾರ ವಿದ್ವತ್ತು, ಕಾನೂನು ಸಂವಿಧಾನಗಳ ಜ್ಞಾನ ಇತ್ತು. ಉತ್ತಮ ವಾಗ್ಮಿತೆ ಇತ್ತು. ಸಂಸತ್ತಿನಲ್ಲಿ ಅವರು ಮಾತಾಡಿದರೆ ಇಡೀ ಸಭೆ ಸ್ತಬ್ಧ ವಾಗಿ ಅವರ ಮಾತನ್ನು ಕೇಳುತ್ತಿತ್ತು. ಕೇವಲ ಐವತ್ತನೇ ವರ್ಷದಲ್ಲಿ ಅವರು ಸಾವನ್ನಪ್ಪುವಂತಾದದ್ದು ದೇಶಕ್ಕಾದ ದೊಡ್ಡ ನಷ್ಟ.   

- * * * -