ರಸ್ತೆಗಳಲ್ಲಿ ನಾಯಿಗಳಿಲ್ಲದಂತೆ ನೋಡಿಕೊಳ್ಳುವ ಕ್ರಮಗಳಾಗಬೇಕಎಂದ ಸುಪ್ರೀಂ ಕೋರ್ಟ್

ರಸ್ತೆಗಳಲ್ಲಿ ನಾಯಿಗಳಿಲ್ಲದಂತೆ ನೋಡಿಕೊಳ್ಳುವ ಕ್ರಮಗಳಾಗಬೇಕಎಂದ ಸುಪ್ರೀಂ ಕೋರ್ಟ್ Supreme Court says steps should be taken to ensure that there are no dogs on the roads

ನವದೆಹಲಿ: ನಾಯಿ ಸಿಟ್ಟಿನಲ್ಲಿದ್ದಾಗ ಹೇಗೆ ವರ್ತಿಸುತ್ತದೆ ಎಂಬುದು ಗೊತ್ತಿಲ್ಲ. ಅದರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಹಾಗಾಗಿ, ರಸ್ತೆಗಳಲ್ಲಿ ನಾಯಿಗಳಿಲ್ಲದಂತೆ ನೋಡಿಕೊಳ್ಳುವ ಕ್ರಮಗಳಾಗಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸುಮೊಟೊ ಪ್ರಕರಣದ ವಿಚಾರಣೆಯನ್ನು ನ್ಯಾ. ವಿಕ್ರಮ್ ನಾಥ್, ನ್ಯಾ. ಸಂದೀಪ್ ಮೆಹ್ತಾ ಹಾಗೂ ನ್ಯಾ. ಎನ್.ವಿ. ಅಂಜರಾರಿಯಾ ಅವರಿದ್ದ ಪೀಠ ನಡೆಸಿತು.

ವೇಳೆ, 'ನಾಯಿಗಳು ಕಚ್ಚುತ್ತವೆ ಎಂಬುದಷ್ಟೇ ವಿಚಾರವಲ್ಲ. ದ್ವಿಚಕ್ರ ವಾಹನಗಳಲ್ಲಿ ಚಲಿಸುವವರನ್ನು ನಾಯಿಗಳು ಕಚ್ಚಬಹುದು ಅಥವಾ ಅಟ್ಟಾಡಿಸಿಕೊಂಡು ಹೋಗಬಹುದು. ಆಗ ಸವಾರರು ಕೆಳಗೆ ಬಿದ್ದು ಅಪಘಾತಕ್ಕೀಡಾಗುವ ಅಪಾಯವಿದೆ' ಎಂದಿದೆ.

'ಸಮಸ್ಯೆ ಆದ ನಂತರ ಸರಿಪಡಿಸಿಕೊಳ್ಳುವುದಕ್ಕಿಂತ, ಮೊದಲೇ ಎಚ್ಚರಿಕೆ ವಹಿಸುವುದು ಉತ್ತಮ. ಹಾಗಾಗಿ, ರಸ್ತೆಗಳು (ನಾಯಿಗಳಿಲ್ಲದೆ) ಮುಕ್ತವಾಗಿರಬೇಕು' ಎಂದಿರುವ ಪೀಠ, ರಸ್ತೆಗಳಲ್ಲಿ ಓಡಾಡುವ ನಾಯಿಗಳು, ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ಅದರಲ್ಲೂ ದ್ವಿಚಕ್ರ ವಾಹನಗಳು ಮತ್ತು ಸೈಕಲ್ ಸವಾರರಿಗೆ ಅಪಾಯಕಾರಿ ಎಂದು ಒತ್ತಿ ಹೇಳಿದೆ.

'ಯಾವ ನಾಯಿಯ ಮನಸ್ಥಿತಿ ಹೇಗಿರುತ್ತದೆ ಎಂಬುದು ಯಾರಿಗೆ ಗೊತ್ತಿರುತ್ತದೆ' ಎಂದು ಪೀಠ ಕೇಳಿದೆ.

ಪ್ರಾಣಿಗಳ ಹಕ್ಕು ಪ್ರತಿಪಾದಿಸುವ ಗುಂಪುಗಳ ಪರ ಹಾಜರಿದ್ದ ಸಿಬಲ್ ಎಂಬವರು, 'ನಾಯಿಗಳು ಕಾಂಪೌಂಡ್ಗಳ ಬಳಿ ಹಾಗೂ ವಿಶ್ವವಿದ್ಯಾಲಯಗಳ ಆವರಣದಲ್ಲಿಯೂ ವಾಸಿಸುತ್ತವೆ. ನಾನು ವಿಶ್ವವಿದ್ಯಾಲಯದಲ್ಲಿದ್ದಾಗ, ಅಲ್ಲಿಯೂ ನಾಯಿಗಳಿದ್ದವು. ಆದರೆ, ಅವು ಯಾರನ್ನೂ ಕಚ್ಚಿಲ್ಲ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಆವರಣದಲ್ಲಿ ಸಾಕಷ್ಟು ನಾಯಿಗಳಿವೆ' ಎಂದು ಹೇಳಿದರು.

ಇದಕ್ಕೆ ಪೀಠವು, 'ನೀವು ನೀಡುತ್ತಿರುವ ಮಾಹಿತಿ ಪ್ರಸ್ತುತವಲ್ಲ. ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ನಾಯಿ ದಾಳಿಯ ಕುರಿತು ಹಲವು ವರದಿಗಳು ಬಂದಿವೆ' ಎಂದಿದೆ.

ನಾಯಿ ಕಡಿತವನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಿ ಹೇಳಿರುವ ಪೀಠ, 'ನಾಯಿಗಳಿಗೆ ಗುಂಡಿಕ್ಕಿ ಎಂದು ಯಾರೂ ಹೇಳುತ್ತಿಲ್ಲ. ರಸ್ತೆಗಳು ನಾಯಿಗಳಿಂದ ಮುಕ್ತವಾಗಿರಬೇಕು' ಎಂದು ಪುನರುಚ್ಚರಿಸಿದೆ.

ನಾಯಿಗಳಿಗೆ ಆಶ್ರಯ ನೀಡುವುದೊಂದೇ ಪರಿಹಾರವಲ್ಲ. ಭೌತಿಕವಾಗಿ ಅದು ಸಾಧ್ಯವೂ ಇಲ್ಲ. ದುಬಾರಿಯೂ ಆಗಬಹುದು. ಇದಕ್ಕೆ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಿಬಲ್ ಮನವಿ ಮಾಡಿದ್ದಾರೆ.

ಇದಕ್ಕೆ ಪೀಠ, 'ಯಾವುದೇ ಸಂಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಅವೇನೂ ರಸ್ತೆಗಳಲ್ಲ. ನಾಯಿಗಳು ಕೋರ್ಟ್, ವಿಶ್ವವಿದ್ಯಾಲಯಗಳ ಆವರಣಗಳಲ್ಲಿ ಏಕೆ ಇರಬೇಕು' ಎಂದು ಪ್ರಶ್ನಿಸಿದೆ.

'ನಾಯಿಗಳನ್ನು ಅವುಗಳು ಇದ್ದ ಜಾಗದಲ್ಲೇ ಬಿಡಬೇಕು ಎಂದು ನಿಯಮಗಳು ಹೇಳುತ್ತವೆ. ಹಾಗಾದರೆ, ಸಂಸ್ಥೆಗಳು ನಾಯಿ ಮುಕ್ತವಾಗಿ ಇರುವುದು ಹೇಗೆ? ಅವುಗಳನ್ನು ಬೀದಿಗಳಲ್ಲಿ ಬಿಡಬೇಕೇ?' ಮರುಪ್ರಶ್ನೆ ಹಾಕಿದೆ.

ನಾಯಿಗಳನ್ನು ರಸ್ತೆಗಳಿಂದ ತೆರವು ಮಾಡುವ ಹೊಣೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಪೀಠ, ಕಳೆದ 20 ದಿನಗಳಲ್ಲಿ ಬೀದಿ ನಾಯಿಗಳ ಕಾರಣದಿಂದಾಗಿ ಇಬ್ಬರು ನ್ಯಾಯಾಧೀಶರು ಅಪಘಾತಕ್ಕೀಡಾಗಿದ್ದಾರೆ. ಇದು ಗಂಭೀರ ವಿಷಯ ಎಂದು ಚಾಟಿ ಬೀಸಿದೆ.

ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳಂತಹ ಸಾಂಸ್ಥಿಕ ಪ್ರದೇಶಗಳಲ್ಲಿ ನಾಯಿ ಕಡಿತದ ಘಟನೆಗಳು ಹೆಚ್ಚುತ್ತಿರುವುದು ಆತಂಕಕಾರಿ. ಹೀಗಾಗಿ, ಸಾರ್ವಜನಿಕರ ಸುರಕ್ಷತೆ ಹಾಗೂ ಬೀದಿ ನಾಯಿಗಳ ನಿರ್ವಹಣೆಯ ದೃಷ್ಟಿಯಿಂದ ಸರ್ಕಾರಗಳು ನಿರ್ದೇಶನಗಳನ್ನು ನೀಡುವುದು ಅತ್ಯಗತ್ಯ ಎಂದು ನ್ಯಾಯಾಲಯವು 2025 ನವೆಂಬರ್ 7ರಂದು ನಿರ್ದೇಶಿಸಿತ್ತು.