ಚೆನ್ನೈ, ಫೆ 5 ಪೌರತ್ವ ತಿದ್ದುಪಡಿ ಕಾಯ್ದೆ- ಸಿಎಎ ವಿರುದ್ದ ಕೆಲ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ಹಿತಾಸಕ್ತಿಗಳಿಂದಾಗಿ ದೇಶಾದ್ಯಂತ ಪ್ರತಿಭಟನೆಗಳಿಗೆ ಪ್ರಚೋದನೆ ನೀಡುತ್ತಿವೆ ಎಂದು ಆರೋಪಿಸಿರುವ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್, ಕಾಯ್ದೆಯಿಂದ ದೇಶದ ಯಾವುದೇ ಮುಸ್ಲಿಮ್ ವ್ಯಕ್ತಿಗೆ ತೊಂದರೆ ಉಂಟಾದರೆ ಅದನ್ನು ಮೊದಲು ವಿರೋಧಿಸುವವ ನಾನು ಎಂದು ಹೇಳಿದ್ದಾರೆ.ತಮ್ಮ ಪೋಯಿಸ್ ಗಾರ್ಡನ್ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸಿಎಎ ಕಾಯ್ದೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿ, ಕಾಯ್ದೆಯಿಂದ ಯಾವುದೇ ಭಾರತೀಯ ಮುಸ್ಲಿಮರಿಗೆ ತೊಂದರೆಯಾಗುವುದಿಲ್ಲ ಕೇಂದ್ರ ಸರ್ಕಾರ ಪದೇ ಪದೇ ಸ್ಪಷ್ಟವಾಗಿ ಹೇಳುತ್ತಿದೆ ಎಂದರು.ಆದರೆ, ಕೆಲ ರಾಜಕೀಯ ಪಕ್ಷಗಳು ಕಾಯ್ದೆ ಮುಸ್ಲಿಮರಿಗೆ ಹಾನಿ ಉಂಟುಮಾಡಲಿದೆ ಎಂದು ಹೆದರಿಸಿ, ವದಂತಿಗಳನ್ನು ಹರಡಿ, ಅವರಲ್ಲಿ ಭೀತಿ ಸೃಷ್ಟಿಸುವ ಮೂಲಕ ಸ್ವಾರ್ಥ ಸಾಧನೆಗಾಗಿ ದೇಶಾದ್ಯಂತ ಪ್ರತಿಭಟನೆಗಳನ್ನು ಪ್ರಚೋದಿಸುತ್ತಿವೆ ಎಂದು ಆರೋಪಿಸಿದರು.
ಸಿಎಎ ಕಾಯ್ದೆ ಯಾವುದೇ ಮುಸ್ಲಿಂ ವ್ಯಕ್ತಿಗೆ ತೊಂದರೆ ಉಂಟುಮಾಡಿದ್ದೇ ಆದರೆ, ಅದನ್ನು ವಿರೋಧಿಸುವುದರಲ್ಲಿ ತಾವು ಮೊದಲಿಗರಾಗುವುದಾಗಿ ಹೇಳಿರುವ ಅವರು, ಕಾಯ್ದೆ ಯಾವೊಬ್ಬ ಭಾರತೀಯ ಮುಸ್ಲಿಮ ವ್ಯಕ್ತಿಯ ಹಿತಾಸಕ್ತಿಗೆ ದಕ್ಕೆ ತರುವುದಿಲ್ಲ ಎಂದು ಕೇಂದ್ರ ಸರ್ಕಾರ ನಿರಂತರವಾಗಿ ಸ್ಪಷ್ಟಪಡಿಸುತ್ತಿದೆ ಎಂದು ಹೇಳಿದರು.ತಮಿಳು ನಾಡಿನಲ್ಲಿ ಸುಮಾರು 30 ವರ್ಷಗಳಿಂದ ಹಲವು ಶಿಬಿರಗಳಲ್ಲಿ ನೆಲೆಸಿರುವ ಶ್ರೀಲಂಕಾ ನಿರಾಶ್ರಿತರಿಗೆ ದ್ವಿಪೌರತ್ವ ಮಂಜೂರು ಮಾಡಬೇಕು ಎಂದು ಒತ್ತಾಯಿಸಿರುವ ಅವರು, ಈ ಅಂಶವನ್ನು ಪ್ರತಿಪಕ್ಷಗಳೂ ಒತ್ತಿ ಹೇಳುತ್ತವೆ. ತಮಿಳುನಾಡಿನಲ್ಲಿರುವ ಶ್ರೀಲಂಕಾ ನಿರಾಶ್ರಿತರಿಗೆ ದ್ವಿ ಪೌರತ್ವ ಕಲ್ಪಿಸಬೇಕೆಂದು ಆಡಳಿತಾರೂಢ ಎಐಎಡಿಎಂಕೆ ಸಹ ಪ್ರತಿಪಾದಿಸುತ್ತಿದೆ ಎಂದರು.ಅನ್ಯ ದೇಶಗಳಿಂದ ಬಂದಿರುವ ವಲಸಿಗರ ಸಂಖ್ಯೆಯನ್ನು ದಾಖಲಿಸಲು ಪ್ರತಿಯೊಂದು ದೇಶಕ್ಕೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ( ಎನ್ ಪಿ ಆರ್ ) ಅತ್ಯಂತ ಆಗತ್ಯ ಎಂದು ರಜನಿ ಕಾಂತ್ ಸಮರ್ಥಿಸಿಕೊಂಡರು.ದೇಶಾದ್ಯಂತ ಸಿಎಎ, ಎನ್ ಆರ್ ಸಿ ಹಾಗೂ ಎನ್ ಪಿ ಆರ್ ವಿರುದ್ದ ಮುಂದುವರಿದಿರುವ ಪ್ರತಿಭಟನೆ ಕುರಿತು ಮಾತನಾಡಿದ ಅವರು, ವಿದ್ಯಾರ್ಥಿಗಳು ಹಾಗೂ ಯುವಜನಾಂಗ ಪ್ರತಿಭಟನೆ ನಡೆಸುವ ಮುನ್ನ ವಿಷಯದ ಬಗ್ಗೆ ಆಮೂಲಾಗ್ರ ಆಧ್ಯಯನ ನಡೆಸಿ ನಂತರ ಪ್ರತಿಭಟನೆ ನೆಡೆಸಬೇಕು ಎಂದು ಸಲಹೆ ನೀಡಿದರು.ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮುನ್ನ, ವಾಸ್ತವಾಂಶಗಳನ್ನು ಪರಿಶೀಲಿಸಿಕೊಳ್ಳಿ, ತಂದೆ ತಾಯಿ, ಹಿರಿಯರು ಹಾಗೂ ಪ್ರಾಧ್ಯಾಪಕರ ಸಲಹೆ ಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಯಾವುದೇ ಪೊಲೀಸ್ ದೂರುದಾಖಲಾಗಿ, ತಮ್ಮ ಭವಿಷ್ಯದ ಮೇಲೆ ಪರಿಣಾಮ ಉಂಟಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ, ಕೆಲ ರಾಜಕಾರಣಿಗಳು ರಾಜಕೀಯ ಲಾಭಗಳಿಗೆ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ರಜನಿ ಬುದ್ದಿಮಾತು ಹೇಳಿದ್ದಾರೆ.
2018ರ ಮೇ28 ರಂದು ತೂತ್ತುಕುಡಿಯಲ್ಲಿ ಸ್ಟರ್ಲೈಟ್ ವಿರೋಧಿ ಪ್ರತಿಭಟನಾಕಾರರ ಮೇಲೆ ಪೊಲೀಸರು ನೆಡೆಸಿದ್ದ ಗೋಲಿಬಾರ್ ನಲ್ಲಿ 13 ಮಂದಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಏಕ ಸದಸ್ಯ ಆಯೋಗದ ಸಮೆನ್ಸ್ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು. ಈವರೆಗೆ ತಾವು ಸಮೆನ್ಸ್ ಸ್ವೀಕರಿಸಿಲ್ಲ. ಸಮನ್ಸ್ ಬಂದರೆ ಖಂಡಿತವಾಗಿ ಆಯೋಗದ ಮುಂದೆ ಹಾಜರಾಗುವುದಾಗಿ ಹೇಳಿದರುಗೋಲಿಬಾರ್ ನಡೆದ ಎರಡು ದಿನಗಳ ನಂತರ ಅಲ್ಲಿಗೆ ತೆರಳಿ ಸಂತ್ರಸ್ಥರನ್ನು ಭೇಟಿಯಾಗಿದ್ದ ರಜನಿಕಾಂತ್, ಗೋಲಿಬಾರ್ ನಡೆಸಲು ಸಮಾಜ ವಿರೋಧಿ ಶಕ್ತಿಗಳು ನಡೆಸಿದ ಹಿಂಸಾಚಾರವೇ ಕಾರಣ ಎಂದು ಹೇಳಿಕೆ ನೀಡಿದ್ದಕ್ಕಾಗಿ, ಆಯೋಗ ರಜನಿಕಾಂತ್ ಅವರಿಗೆ ಸಮೆನ್ಸ್ ಜಾರಿ ಮಾಡಿದೆ ವಾಹನಗಳಿಗೆ ಆಗ್ನಿ ಸ್ಪರ್ಶಮಾಡಿ, ಜಿಲ್ಲಾಧಿಕಾರಿಯ ಮೇಲೆ ದಾಳಿ ನಡೆಸಿರುವುದು ಸಮಾಜ ವಿರೋಧಿ ಶಕ್ತಿಗಳು ಹಾಗೂ ದುಷ್ಕರ್ಮಿಗಳ ಕೃತ್ಯವಾಗಿದ್ದು. ಇಂತಹ ಶಕ್ತಿಗಳನ್ನು ಸರ್ಕಾರ ಕಠಿಣವಾಗಿ ಒಸಗಿಹಾಕಬೇಕು. ಈ ರೀತಿಯ ಪ್ರತಿಭಟನೆ ಮುಂದುವರೆದರೆ, ರಾಜ್ಯ ಸ್ಮಶಾನವಾಗಲಿದೆ ಎಂದು ಹೇಳುವ ಮೂಲಕ ರಜನಿಕಾಂತ್ ಅಂದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ತೆರಿಗೆ ವಂಚನೆ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ರಜನಿಕಾಂತ್, ತಾವು ಪ್ರಾಮಾಣಿಕವಾಗಿ ಆದಾಯ ತೆರಿಗೆ ಪಾವತಿಸುವುದಾಗಿ, ಈ ವಿಷಯ ಆದಾಯ ತೆರಿಗೆ ಇಲಾಖೆಗೂ ತಿಳಿದಿದೆ ಎಂದು ಉತ್ತರಿಸಿದರು.