ಸನ್ನಿ ಲಿಯೋನ್ ಗೆ 1 ಕೋಟಿ ರೂ. ಸಂಭಾವನೆ ನೀಡಿದ್ದ ನೀಲಣ್ಣವರ: ಸ್ಪೋಟಕ ಮಾಹಿತಿ ಬಹಿರಂಗ

ಸನ್ನಿ ಲಿಯೋನ್ ಗೆ 1 ಕೋಟಿ ರೂ. ಸಂಭಾವನೆ ನೀಡಿದ್ದ ನೀಲಣ್ಣವರ: ಸ್ಪೋಟಕ ಮಾಹಿತಿ ಬಹಿರಂಗ Sunny Leone was paid Rs 1 crore by Neelannavara: Explosive information revealed

ಲೋಕದರ್ಶನ ವರದಿ 

ಬೆಳಗಾವಿ 21: ಬಹುಕೋಟಿ ವಂಚನೆ ಪ್ರಕರಣ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್‌ನ ಎಂ.ಡಿ. ಶಿವಾನಂದ್ ನೀಲಣ್ಣವರ ವಿರುದ್ಧದ ತನಿಖೆ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು, ಈಗ ಮತ್ತೊಂದು ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ಚಿತ್ರರಂಗದ ತಾರೆ ಸನ್ನಿ ಲಿಯೋನ್ ಅವರಿಗೆ ಕೋಟಿ ಸಂಭಾವನೆ ನೀಡಿದ್ದಾರೆನ್ನುವ ಸಂಗತಿಯೊಂದು ತಿಳಿದು ಬಂದಿದೆ. ಸುಮಾರು 4,500 ಕೋಟಿ ರೂಪಾಯಿ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶಿವಾನಂದ್ ನಿಲಣ್ಣವರ ಅವರು ಸಾರ್ವಜನಿಕರಿಂದ ಸಂಗ್ರಹಿಸಿದ್ದ ಹಣವನ್ನು ಕೇವಲ ಬಡ್ಡಿ ವ್ಯವಹಾರಕ್ಕೆ ಮಾತ್ರವಲ್ಲದೆ, ಸಿನಿಮಾ ಮತ್ತು ಫ್ಯಾಷನ್ ಲೋಕದ ವ್ಯಾಮೋಹಕ್ಕೂ ಬಳಸಿದ್ದ ಎಂಬ ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ಸುಮಾರು 35 ಸಾವಿರಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿ ಕೋಟ್ಯಂತರ ರೂಪಾಯಿ ವಂಚನೆ ಎಸಗಿರುವ ಆರೋಪ ಎದುರಿಸುತ್ತಿರುವ ಶಿವಾನಂದ್‌ಗೆ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಬೇಕೆಂಬ ಮಹತ್ವಾಕಾಂಕ್ಷೆ ಇತ್ತು ಎನ್ನಲಾಗಿದೆ.

ಇದೇ ಹುಚ್ಚು ಕನಸಿನ ಭಾಗವಾಗಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತರಲು ಆತ ಭಾರೀ ಮಟ್ಟದಲ್ಲಿ ಸಿದ್ಧತೆ ನಡೆಸಿದ್ದ ಎಂದು ತನಿಖಾ ಮೂಲಗಳು ತಿಳಿಸಿವೆ. 2023ರಲ್ಲಿ ನಿರ್ಮಾಣಗೊಂಡಿದ್ದ ‘ಚಾಂಪಿಯನ್‌’ ಸಿನಿಮಾದ ಮೂಲಕ ಶಿವಾನಂದ್ ತನ್ನ ನಿರ್ಮಾಪಕ ಕನಸನ್ನು ನನಸು ಮಾಡಿಕೊಳ್ಳಲು ಮುಂದಾಗಿದ್ದನು ಎನ್ನುವ ಮಾಹಿತಿ ಹೊರಬಿದ್ದಿದೆ.     ಚಿತ್ರದ ವಿಶೇಷ ಐಟಂ ಸಾಂಗ್‌ಗೆ ಸನ್ನಿ ಲಿಯೋನ್ ಅವರನ್ನು ಕರೆತರಲು ಕೋಟಿ ಕೋಟಿ ಹಣ ಸುರಿದಿದ್ದಾನೆ ಎನ್ನಲಾಗಿದೆ. “ಡಿಗ್ರಿ ಬಿಲ್ಲಿ ನಾನು” ಎಂಬ ಹಾಡಿನಲ್ಲಿ ಹೆಜ್ಜೆ ಹಾಕಲು ನಟಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿತ್ತು ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.  ಸನ್ನಿ ಲಿಯೋನ್ ಭಾಗವಹಿಸಿದ್ದ ಆ ಹಾಡು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರೂ, ಸಿನಿಮಾ ಮಾತ್ರ ಬಾಕ್ಸ್‌ ಆಫೀಸ್‌ನಲ್ಲಿ ಭಾರೀ ಸೋಲು ಕಂಡಿತ್ತು. ಸ್ಯಾಂಡಲ್ ವುಡ್‌ನಲ್ಲಿ ದೊಡ್ಡ ನಿರ್ಮಾಪಕರಾಗಿ ಗುರುತಿಸಿಕೊಳ್ಳುವ ಕನಸು ಕಂಡಿದ್ದ ಶಿವಾನಂದ್ ನೀಲಣ್ಣವರ ಈಗ ಸಾವಿರಾರು ಜನರಿಗೆ ಮೋಸ ಮಾಡಿದ ಆರೋಪದಲ್ಲಿ ಜೈಲು ಸೇರಿರುವುದು ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮೂಡಿಸಿದೆ.