ಸೂರ್ಯಕಾಂತಿ ಬೆಳೆಗೆ ವೈರಸ್ ರೋಗದ ಕಾಟ: ಪರಿಹಾರಕ್ಕೆ ರೈತರ ಒತ್ತಾಯ

ಸೂರ್ಯಕಾಂತಿ ಬೆಳೆಗೆ ವೈರಸ್ ರೋಗದ ಕಾಟ: ಪರಿಹಾರಕ್ಕೆ ರೈತರ ಒತ್ತಾಯ  Sunflower crop plagued by viral disease: Farmers urge for a solution

ಹೂವಿನಹಡಗಲಿ 29: ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಸೂರ್ಯಕಾಂತಿ ಬೆಳೆಗೆ ವೈರಸ್ ಹಾಗೂ ವಿವಿಧ ರೋಗಗಳು ವ್ಯಾಪಕವಾಗಿ ಹರಡುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಪ ಮಳೆಯ ನಡುವೆಯೂ ಉತ್ತಮ ಬೆಳೆಯ ನೀರೀಕ್ಷೆಯಲ್ಲಿದ್ದ ರೈತರಿಗೆ ಇದೀಗ ರೋಗಬಾಧೆ ಮತ್ತೊಂದು ಆಘಾತ ತಂದಿದೆ.  

ಗ್ರಾಮದ ಹಲವು ರೈತರು ಈ ಬಾರಿ ಕಡಿಮೆ ವೆಚ್ಚದಲ್ಲಿ ಉತ್ತಮ ಆದಾಯದ ನೀರೀಕ್ಷೆಯಿಂದ ಸೂರ್ಯಕಾಂತಿ ಬೆಳೆದಿದ್ದರು. ಆದರೆ ಹೂ ಬಿಡುವ ಹಂತದಲ್ಲೇ ವೈರಸ್, ನಂಜಾಣು ಹಾಗೂ ಇತರ ರೋಗಗಳು ಕಾಣಿಸಿಕೊಂಡ ಪರಿಣಾಮ ಬೆಳೆ ಹಾನಿಗೊಳಗಾಗಿದ್ದು, ಇಳುವರಿ ಕುಸಿಯುವ ಆತಂಕ ಎದುರಾಗಿದೆ.  

ರೈತ ಪೂಜಾರ ಕಾಶಿನಾಥ ಅವರು 10 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸೂರ್ಯಕಾಂತಿ ಬೆಳೆ ರೋಗಕ್ಕೆ ತುತ್ತಾಗಿದ್ದು, ಸರ್ಕಾರ ತಕ್ಷಣ ಬೆಳೆ ಹಾನಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.  

ಈಗಾಗಲೇ ಮಳೆಯ ಕೊರತೆ, ಹೆಚ್ಚುತ್ತಿರುವ ಕೃಷಿ ವೆಚ್ಚ ಹಾಗೂ ಮಾರುಕಟ್ಟೆಯಲ್ಲಿ ಬೆಳೆಗಳಿಗೆ ಸಮರ​‍್ಕ ಬೆಲೆ ಸಿಗದ ಸಮಸ್ಯೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇದರ ನಡುವೆಯೇ ಬೆಳೆಗಳಿಗೆ ವೈರಸ್ ಮತ್ತು ಇತರ ರೋಗಗಳು ಕಾಣಿಸಿಕೊಳ್ಳುತ್ತಿರುವುದು ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.  

ಕೃಷಿ ಇಲಾಖೆ ಅಧಿಕಾರಿಗಳು ತಕ್ಷಣ ಹೊಲಗಳಿಗೆ ಭೇಟಿ ನೀಡಿ ರೋಗದ ಕಾರಣವನ್ನು ಪತ್ತೆಹಚ್ಚಿ, ಅಗತ್ಯ ತಾಂತ್ರಿಕ ಸಲಹೆ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.