ಗುರಿ, ಆತ್ಮವಿಶ್ವಾಸದಿಂದ ಮಾತ್ರ ಯಶಸ್ಸು ಸಾಧ್ಯ: ಸಿಪಿಐ ಮಲ್ಲಪ್ಪ ಮಡ್ಡಿ

ಗುರಿ, ಆತ್ಮವಿಶ್ವಾಸದಿಂದ ಮಾತ್ರ ಯಶಸ್ಸು ಸಾಧ್ಯ: ಸಿಪಿಐ ಮಲ್ಲಪ್ಪ ಮಡ್ಡಿ  Success is possible only with a goal and self-confidence: CPI Mallappa Maddi

ಲೋಕದರ್ಶನ ವರದಿ 

ಜಮಖಂಡಿ 31: ಕಲಿಯುವ ಮನೋಭಾವ ಇದ್ದಾಗ ಮಾತ್ರ ಶಿಕ್ಷಣದಿಂದ ಯಶಸ್ಸು ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಗುರಿ ಹೊಂದಿ ಶ್ರದ್ಧೆಯಿಂದ ಅಧ್ಯಯನ ಮಾಡಬೇಕು ಎಂದು ಸಿಪಿಐ ಮಲ್ಲಪ್ಪ ಮಡ್ಡಿ ಹೇಳಿದರು.  

ನಗರದ ಬಸವಜ್ಯೋತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ, 2025-26ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಸರಸ್ವತಿ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.  

ಒಲೆಮಠದ ಆನಂದ ದೇವರು ಶ್ರೀಗಳು ಆಶೀರ್ವಚನ ನೀಡಿ, ಗುರಿ ಮತ್ತು ಆತ್ಮವಿಶ್ವಾಸವಿಲ್ಲದವರು ನಿಜವಾದ ಸಾಧನೆ ಮಾಡಲು ಸಾಧ್ಯವಿಲ್ಲ. ಪರಿಶ್ರಮ, ಕನಸು ಮತ್ತು ಶಿಸ್ತು ಯಶಸ್ಸಿನ ಮೂಲಮಂತ್ರಗಳಾಗಿದ್ದು, ವಿದ್ಯಾರ್ಥಿಗಳ ಬದುಕಿಗೆ ದಾರಿ ತೋರಿಸುವ ಶಿಕ್ಷಕರನ್ನು ಸದಾ ಗೌರವಿಸಬೇಕು ಎಂದು ಕರೆ ನೀಡಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಪ್ರೊ. ಬಸವರಾಜ ಕಡ್ಡಿ ಮಾತನಾಡಿ, ಏಕಾಗ್ರತೆ ಯಶಸ್ಸಿನ ಪ್ರಮುಖ ಅಂಶವಾಗಿದೆ. ಉತ್ತಮ ಸಾಧನೆ ನಿರಂತರ ಪರಿಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ಹೇಳಿದರು.  

ಈ ಸಂದರ್ಭದಲ್ಲಿ ದತ್ತಿನಿಧಿ ವಿದ್ಯಾರ್ಥಿವೇತನ ಹಾಗೂ ನಗದು ಬಹುಮಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಪರವಾಗಿ ಸಿದ್ಧಾರ್ಥ ಕುಂಬಾರ, ಕಾವ್ಯ ಮುದ್ದಾಪುರ, ಜಿಯಾ ಬನಹಟ್ಟಿ ಹಾಗೂ ಸೌಮ್ಯ ಬಳಗಾರ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.  

ಶ್ರೀನಿಧಿ ಗೌಡ ಹಾಗೂ ತಂಡ ಪ್ರಾರ್ಥನಾ ಗೀತೆ ಹಾಡಿದರು. ಪ್ರಾಚಾರ್ಯ ಡಾ. ಟಿ.ಪಿ. ಗಿರಡ್ಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರದ್ಧಾ ವಾರದ ಹಾಗೂ ಪ್ರಿಯಾ ಗಡ್ಡಿಕಾರ ಕಾರ್ಯಕ್ರಮ ನಿರೂಪಿಸಿದರು. ಉಪಪ್ರಾಚಾರ್ಯ ಶ್ರೀಕಾಂತ ಬೆಳ್ಳಿಹಾಳ ವಂದಿಸಿದರು.