ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಥಶಾಸ್ತ್ರದ ಅಧ್ಯಯನ ಅಗತ್ಯ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಥಶಾಸ್ತ್ರದ ಅಧ್ಯಯನ ಅಗತ್ಯ  Studying economics is essential for competitive examinations

ಲೋಕದರ್ಶನ ವರದಿ 

  ಗದಗ, ಆ.29: ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅರ್ಥಶಾಸ್ತ್ರ ಪ್ರಮುಖ ವಿಷಯವಾಗಿದ್ದು, ದೇಶದ ಆರ್ಥಿಕ ವ್ಯವಸ್ಥೆ, ಹಣದುಬ್ಬರ, ನಿರುದ್ಯೋಗ, ಬಡತನ, ಬ್ಯಾಂಕಿಂಗ್, ಬಜೆಟ್, ತೆರಿಗೆ ವ್ಯವಸ್ಥೆ, ಕೃಷಿ, ಕೈಗಾರಿಕೆ ಹಾಗೂ ಸರ್ಕಾರದ ಆರ್ಥಿಕ ನೀತಿಗಳ ಕುರಿತು ಮೂಲಭೂತ ಜ್ಞಾನ ಹೊಂದುವುದು ಅಗತ್ಯ ಎಂದು ಮುಳಗುಂದದ ಆರ್‌.ಎನ್‌. ದೇಶಪಾಂಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಬಸವರಾಜ ಹೇಳಿದರು.  

ಹುಲಕೋಟಿಯ ಶ್ರೀ ಕೆ.ಎಚ್‌. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗವು ಐಕ್ಯುಎಸಿ ಸಹಯೋಗದಲ್ಲಿ ಆಯೋಜಿಸಿದ್ದ ‘ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅರ್ಥಶಾಸ್ತ್ರದ ಪಾತ್ರ’ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.  

ಅರ್ಥಶಾಸ್ತ್ರದ ಮೂಲ ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ಅರ್ಥೈಸಿಕೊಂಡು, ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬಹುದು ಎಂದು ಮಾರ್ಗದರ್ಶನ ನೀಡಿದರು.  

ಐಕ್ಯುಎಸಿ ಸಂಯೋಜಕ ಡಾ. ಜಿತೇಂದ್ರ ಜಹಾಗೀರದಾರ ಮಾತನಾಡಿ, ವಿಶೇಷ ಉಪನ್ಯಾಸಗಳು ವಿದ್ಯಾರ್ಥಿಗಳ ಜ್ಞಾನವನ್ನು ವಿಸ್ತರಿಸುವುದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಸೂಕ್ತ ದಿಕ್ಕು ತೋರಿಸುತ್ತವೆ. ಪಠ್ಯಕ್ರಮ ಹಾಗೂ ಪ್ರಸ್ತುತ ಆರ್ಥಿಕ ವಿದ್ಯಮಾನಗಳ ನಡುವಿನ ಸಂಬಂಧವನ್ನು ಕಲ್ಪಿಸಿಕೊಂಡು ಅಧ್ಯಯನ ಮಾಡಿದರೆ ಕಲಿಕೆ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಅಪ್ಪಣ್ಣ ಹಂಜೆ ಮಾತನಾಡಿ, ಪದವಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ಧತೆ ನಡೆಸಬೇಕು. ಪದವಿ ಅಧ್ಯಯನದ ಅವಧಿಯಲ್ಲಿಯೇ ಗುರಿ ಹೊಂದಿ, ನಿಯಮಿತ ಅಧ್ಯಯನ, ಸಮಯ ನಿರ್ವಹಣೆ ಹಾಗೂ ನಿರಂತರ ಅಭ್ಯಾಸದ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.  

ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪವಿತ್ರಾ ಬಿ.ಸಿ. ಕಾರ್ಯಕ್ರಮ ನಿರ್ವಹಿಸಿದರು. ಗೌರವ ಅತಿಥಿ ಉಪನ್ಯಾಸಕ ಆರ್‌.ಆರ್‌. ಹಟ್ಟಿಹೊಳಿ ಅವರನ್ನು ಸ್ವಾಗತಿಸಿ, ವಂದನಾರೆ​‍್ಣ ಮಾಡಿದರು. ಕಾಲೇಜಿನ ಬೋಧಕರು ಹಾಗೂ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಸಂಪನ್ಮೂಲ ಉಪನ್ಯಾಸಕರೊಂದಿಗೆ ಸಂವಾದ ನಡೆಸಿ, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಸಂಬಂಧಿಸಿದ ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡರು.