ವಿದ್ಯಾರ್ಥಿಗಳು ಸಮಯ ಸದುಪಯೋಗಪಡಿಸಿಕೊಳ್ಳಲಿ: ದತ್ತಣ್ಣ ವೇರ್ಣೇಕರ್

ವಿದ್ಯಾರ್ಥಿಗಳು ಸಮಯ ಸದುಪಯೋಗಪಡಿಸಿಕೊಳ್ಳಲಿ: ದತ್ತಣ್ಣ ವೇರ್ಣೇಕರ್  Students should make good use of their time: Dattanna Vernekar

ಶಿಗ್ಗಾವಿ 05: ಇಂದಿನ ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ, ತಂದೆ-ತಾಯಿ ಹಾಗೂ ಶಿಕ್ಷಣ ಸಂಸ್ಥೆಗೆ ಕೀರ್ತಿ ತರುವಂತವರಾಗಬೇಕು ಎಂದು ಶಿಕ್ಷಣ ಸಮಿತಿಯ ಉಪಾಧ್ಯಕ್ಷ ದತ್ತಣ್ಣ ವೇರ್ಣೇಕರ್ ಹೇಳಿದರು. ಪಟ್ಟಣದ ಮಾಮಲೆದೇಶಾಯಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ವಿದ್ಯಾರ್ಥಿಗಳು ಉತ್ತಮವಾಗಿ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು. ಪ್ರಾಚಾರ್ಯ ರಮಕಾಂತ್ ಭಟ್ ಮಾತನಾಡಿ, ದೀಪ ಬೆಳಗಿದಂತೆ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನವೂ ಬೆಳಗಲಿ. ಉತ್ತಮ ಆದರ್ಶಗಳನ್ನು ರೂಢಿಸಿಕೊಂಡು ಪೋಷಕರಿಗೆ, ಕಾಲೇಜಿಗೆ ಹಾಗೂ ಸಮಾಜಕ್ಕೆ ಕೀರ್ತಿ ತರಬೇಕು ಎಂದು ಹಾರೈಸಿದರು.  

ಉಪಪ್ರಾಚಾರ್ಯ ಆರ್‌. ಎಫ್‌. ಹಳ್ಯಾಳ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಸಮಯಪಾಲನೆ ಹಾಗೂ ನಿರಂತರ ಪ್ರಯತ್ನ ಅತ್ಯಂತ ಮುಖ್ಯ. ಸೋಲಿಗೆ ಅಂಜದೆ, ಸೋಲನ್ನೇ ಗೆಲುವಿನ ಮೆಟ್ಟಿಲಾಗಿ ಪರಿಗಣಿಸಿ ಯಶಸ್ಸು ಸಾಧಿಸಬೇಕು ಎಂದು ಹೇಳಿದರು.  ಹಿರಿಯ ಉಪನ್ಯಾಸಕ ಎಸ್‌. ಬಿ. ಹಳ್ಳಾಪುರ ಹಾಗೂ ಉಪನ್ಯಾಸಕಿ ಸಾವಿತ್ರಿ ಪೂಜಾರ್ ಮಾತನಾಡಿದರು. ಈ ವೇಳೆ ಕಾಲೇಜು ಸಂಸತ್ ಕುರಿತು ಮಾಹಿತಿ ನೀಡಲಾಯಿತು.

ಬಳಿಕ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.  ಕಾರ್ಯಕ್ರಮದಲ್ಲಿ ಸಮಿತಿಯ ಸದಸ್ಯ ವಿ. ಬಿ. ಮೇಟಿ, ಮುಖ್ಯೋಪಾಧ್ಯಾಯ ಎಂ. ಆರ್‌. ಬಾಗೂರ್, ಎಂ. ಡಿ. ದೇಶಪಾಂಡೆ, ಉಪನ್ಯಾಸಕರಾದ ಮಾರುತಿ ಲಮಾಣಿ, ಪ್ರದೀಪ ಮೂಡೇರ್, ಮಂಜುನಾಥ ಯಲಿಗಾರ, ನಾಗರಾಜ ದುಮ್ಮನವರ, ಮಂಜುನಾಥ ಮಡಿವಾಳರ ಸೇರಿದಂತೆ ಹಲವರು ಉಪಸ್ಥಿತರಿದ್ದರು.