ವಿದ್ಯಾರ್ಥಿಗಳು ಉದ್ಯೋಗ ಹುಡುಕುವವರಲ್ಲ, ಉದ್ಯೋಗ ಸೃಷ್ಟಿಸುವವರಾಗಬೇಕು: ರಾಜ್ಯಪಾಲ

ವಿದ್ಯಾರ್ಥಿಗಳು ಉದ್ಯೋಗ ಹುಡುಕುವವರಲ್ಲ, ಉದ್ಯೋಗ ಸೃಷ್ಟಿಸುವವರಾಗಬೇಕು: ರಾಜ್ಯಪಾಲ  Students should become job creators, not job seekers: Governor

ಲೋಕದರ್ಶನ ವರದಿ 

ಬೆಳಗಾವಿ 26: ವಿದ್ಯಾರ್ಥಿಗಳು ದೊಡ್ಡ ಕನಸು, ಉನ್ನತ ಗುರಿ ಹೊಂದಿ ನಿರಂತರ ಪರಿಶ್ರಮದ ಮೂಲಕ ಯಶಸ್ಸು ಸಾಧಿಸಬೇಕು. ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ದೇಶದ ಅಭಿವೃದ್ಧಿಗೆ ಬಳಸಿಕೊಂಡು ಉದ್ಯೋಗ ಹುಡುಕುವವರಾಗುವ ಬದಲು ಉದ್ಯೋಗ ಸೃಷ್ಟಿಸುವವರಾಗಬೇಕು ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಕರೆ ನೀಡಿದರು.  

ಬೆಳಗಾವಿಯ ಜ್ಞಾನ ಸಂಗಮ ಆವರಣದಲ್ಲಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶನಿವಾರ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 26ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.  

ವಿದ್ಯಾರ್ಥಿಗಳು ಯಶಸ್ಸು ದೊರೆತಾಗ ವಿನಮ್ರರಾಗಿದ್ದು, ಕಷ್ಟಗಳನ್ನು ಎದುರಿಸಿದಾಗ ತಾಳ್ಮೆಯಿಂದಿದ್ದು, ವೈಫಲ್ಯ ಎದುರಾದರೆ ಮತ್ತೆ ಪ್ರಯತ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಶಿಕ್ಷಣವು ಕೇವಲ ಉದ್ಯೋಗಕ್ಕಾಗಿ ಸೀಮಿತವಾಗದೆ ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತಿರಬೇಕು ಎಂದರು.  

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಮಾತನಾಡಿ, ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ತಂತ್ರಜ್ಞಾನಗಳ ವೇಗದ ಬೆಳವಣಿಗೆಯ ಹಿನ್ನೆಲೆಯಲ್ಲಿ ಯುವ ಎಂಜಿನಿಯರ್ಗಳು ಭವಿಷ್ಯದ ತಂತ್ರಜ್ಞಾನಗಳಿಗೆ ಸಿದ್ಧರಾಗಬೇಕು. ಕಲಿಕೆ ಇನ್ನು ಆಯ್ಕೆಯಲ್ಲ, ವೃತ್ತಿಯ ಭಾಗವಾಗಿದೆ ಎಂದು ಹೇಳಿದರು.  

ತಂತ್ರಜ್ಞಾನವನ್ನು ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆಯಿಂದ ಬಳಸಬೇಕು. ಕೃಷಿ, ಆರೋಗ್ಯ, ಉತ್ಪಾದನೆ, ಸಾರ್ವಜನಿಕ ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರ ಕಂಡುಕೊಳ್ಳುವತ್ತ ಸಂಶೋಧನೆಗೆ ಆದ್ಯತೆ ನೀಡಬೇಕು ಎಂದರು.  

ರಾಜ್ಯ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ಘಟಿಕೋತ್ಸವದಲ್ಲಿ 74 ಸಾವಿರ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಪದವಿ ಪ್ರದಾನ ಮಾಡಲಾಗುತ್ತಿದೆ. ವಿಟಿಯು ದೇಶದ ಪ್ರಮುಖ ತಾಂತ್ರಿಕ ವಿಶ್ವವಿದ್ಯಾಲಯವಾಗಿ ಬೆಳೆದಿದ್ದು, ವಿದ್ಯಾರ್ಥಿಗಳಿಗೆ ಹೊಸ ಉದ್ಯೋಗಾವಕಾಶಗಳ ಸೃಷ್ಟಿಗೆ ಒತ್ತು ನೀಡಲಾಗುತ್ತಿದೆ ಎಂದರು.