ವಿದ್ಯಾರ್ಥಿಗಳಿಗೆ ಇಷ್ಟಲಿಂಗ ಪೂಜೆಯ ಮಹತ್ವ ತಿಳಿಸಿಕೊಡಬೇಕು: ಶ್ರೀಗಳು

ವಿದ್ಯಾರ್ಥಿಗಳಿಗೆ ಇಷ್ಟಲಿಂಗ ಪೂಜೆಯ ಮಹತ್ವ ತಿಳಿಸಿಕೊಡಬೇಕು: ಶ್ರೀಗಳು Students should be taught the importance of Ishtalinga Puja: Sri

ಚಿತ್ರದುರ್ಗ: ದಿನಾಂಕ 21, ಸೆಪ್ಟಂಬರ್ 2025, ಶರಣ ಸಂಸ್ಕೃತಿ ಉತ್ಸವ 2025ರ ನಿಮಿತ್ತ ಶ್ರೀಮುರುಘರಾಜೇಂದ್ರ ಬೃಹನ್ಮಠದ ಮುರುಗಿಯ ಶ್ರೀ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ಎರಡನೇ ದಿನದ ಸಹಜ ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಡುತ್ತಾ ಶಿರಸಂಗಿಯ ಶ್ರೀ.ಬಸವಮಹಾಂತ ಸ್ವಾಮೀಜಿಯವರು ಮಾತನಾಡಿ, ಅತಿಯಾದರೆ ಅಮೃತವು ವಿಷವಾಗುತ್ತದೆ ಎಂಬ ಅನುಭವದ ಮಾತಿದೆ. ಯಾವುದೇ ಸಂಗತಿ ಅತಿಯಾದರೆ ವಿಷವಾಗುತ್ತದೆ. ಆದ್ದರಿಂದ ಪ್ರತಿಯೊಂದರಲ್ಲೂ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಒಳ್ಳೆಯ ಹವ್ಯಾಸಗಳನ್ನು ಬೆಳಸಿಕೊಳ್ಳಬೇಕು. ನಮ್ಮ ಒಳ್ಳೆಯ ಹವ್ಯಾಸಗಳು ನಮ್ಮನ್ನು ತಿದ್ದಲಿಕ್ಕೆ ಸಹಕಾರಿಯಾಗುತ್ತವೆ. ಹನ್ನೆರಡನೇ ಶತಮಾನದ ಈ ನಾಡು ಕಂಡಂತಹ ಅಪ್ರತಿಮ  ಮೇಧಾವಿ ಅನುಭವಮಂಟಪದ ಅಧ್ಯಕ್ಷರಾಗಿದ್ದ ಅಲ್ಲಮಪ್ರಭುಗಳು ಇಷ್ಟಲಿಂಗ ಶಿವಯೋಗ ಪೂಜೆಯನ್ನು ಈ ಜಗತ್ತಿಗೆ ಸಾರಿದರು. ಮಾನವನ ಬದುಕಿನಲ್ಲಿ ಯಾವುದು ಶಾಶ್ವತ, ಯಾವುದು ಅಶಾಶ್ವತ ಎಂಬುದನ್ನು ವಚನಗಳ ಮೂಲಕ ಇಷ್ಟಲಿಂಗ ಪೂಜೆಯ ಮಹತ್ವವನ್ನು ತಿಳಿಸಿದರು. ಮನುಷ್ಯ ಎಷ್ಟೇ ಸಂಪಾದಿಸಿದ್ದರೂ ಅದನ್ನು ಅನುಭವಿಸಲಿಕ್ಕೆ ಒಳ್ಳೆಯತನವಿರಬೇಕು. ಜಗತ್ತನ್ನು ಅನುಭವಿಸಲಿಕ್ಕೆ ಒಳ್ಳೆಯ ವಿಚಾರಗಳು, ಒಳ್ಳೆಯ ಚಿಂತನೆಗಳು, ಒಳ್ಳೆಯ ಮನಸ್ಸಿರಬೇಕು ಎಂದು ಶಿವಶರಣರು ಹೇಳಿದ್ದಾರೆ. 

ನಮ್ಮ ಬದುಕಿನಲ್ಲಿ ಇಷ್ಟಲಿಂಗ ಪೂಜೆ, ಲಿಂಗದೀಕ್ಷೆಯು ಬಹಳ ಮಹತ್ವವಾದವು. ಇಷ್ಟಲಿಂಗ ಪೂಜೆಯಿಂದ ಮನಸ್ಸಿಗೆ ಅಹ್ಲಾದ, ಏಕಾಗ್ರತೆ, ಶಾಂತಿ, ಪ್ರಶಾಂತತೆ ದೊರೆಯುತ್ತದೆ. ಮಕ್ಕಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಇಷ್ಟಲಿಂಗ ಪೂಜೆಯ ಮಹತ್ವವನ್ನು  ತಿಳಿಸಿಕೊಡಬೇಕು. ಮಕ್ಕಳಿಗೆ ಇಷ್ಟಲಿಂಗ ಪೂಜೆಯಿಂದ ಏಕಾಗ್ರತೆ, ಗ್ರಹಿಕೆ ಶಕ್ತಿ, ನೆನಪಿನ ಶಕ್ತಿ ವೃದ್ಧಿಯಾಗುತ್ತದೆ ಎಂದು ನುಡಿದರು.     

ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳು ವಹಿಸಿದ್ದರು. ಈ ಸಂದರ್ಭದಲ್ಲಿ ಹರಗುರು ಚರಮೂರ್ತಿಗಳು, ರುದ್ರಮೂರ್ತಿ, ಸದ್ಭಕ್ತರು ಉಪಸ್ಥಿತರಿದ್ದರು.