ಮಾದಕ ವಸ್ತು ಸೇವನೆ ತಡೆಗೆ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು

ಮಾದಕ ವಸ್ತು ಸೇವನೆ ತಡೆಗೆ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು Students play a crucial role in preventing drug abuse.

ಲೋಕದರ್ಶನ ವರದಿ

ಧಾರವಾಡ  ೨೪: ಮಾದಕ ವಸ್ತುಗಳ ಸೇವನೆ ಮನುಷ್ಯನನ್ನು ಭ್ರಮಾಲೋಕದಲ್ಲಿ ಬದುಕುವಂತೆ ಮಾಡಿ, ದೇಹ ಹಾಗೂ ಮನಸ್ಸಿನ ಸಮತೋಲನವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು ಧಾರವಾಡ ರಿಮ್ಯಾಂಡ್ಸ್ ಮನೋವೈದ್ಯಕೀಯ ಸಮಾಜ ಕಾರ್ಯಕರ್ತ ಪ್ರಶಾಂತ ಪಾಟೀಲ ಅಭಿಪ್ರಾಯಪಟ್ಟರು. 

ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಡಳಿಯ ವತಿಯಿಂದ ಹುಬ್ಬಳ್ಳಿಯ ಪತ್ರಕರ್ತನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ‘ಮಾದಕ ವಸ್ತುಗಳ ದುರ್ವ್ಯಸನ ತಡೆಗಟ್ಟುವಲ್ಲಿ ಯುವ ವಿದ್ಯಾರ್ಥಿಗಳ ಪಾತ್ರ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಭಾರತದಲ್ಲಿ ಸುಮಾರು ೬ ಕೋಟಿ ಜನರು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಿದ್ದಾರೆ. ಪಂಜಾಬ್ ಹಾಗೂ ಮಣಿಪುರದಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ. ಆರಂಭದಲ್ಲಿ ಖುಷಿ ನೀಡುವಂತೆ ಕಂಡರೂ, ಕ್ರಮೇಣ ಮೆದುಳು, ಜೀರ್ಣಕ್ರಿಯೆ ಹಾಗೂ ನರಮಂಡಲದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ಅಪರಾಧ ಕೃತ್ಯಗಳು ಹಾಗೂ ಅಪಘಾತಗಳೂ ಸಂಭವಿಸುತ್ತವೆ. ಯುವಕರು ಕೆಟ್ಟ ಸಹವಾಸದಿಂದ ದೂರವಿದ್ದು, ಉತ್ತಮ ಸ್ನೇಹಿತರೊಂದಿಗೆ ಬೆರೆಯಬೇಕು ಎಂದು ಸಲಹೆ ನೀಡಿದರು. 

ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ವಿದ್ಯಾರ್ಥಿಗಳು ದೇಶದ ಜೀವಂತ ಆಸ್ತಿ. ಓದುವ ಸಮಯದಲ್ಲಿ ಕೆಟ್ಟ ಹವ್ಯಾಸಗಳಿಗೆ ಬಲಿಯಾಗಬಾರದು. ತಮ್ಮ ಭವಿಷ್ಯಕ್ಕಾಗಿ ತಂದೆ-ತಾಯಿ ಅನುಭವಿಸುತ್ತಿರುವ ಕಷ್ಟಗಳನ್ನು ಅರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು. 

ಕಾಲೇಜಿನ ಪ್ರಾಚಾರ್ಯ ಡಾ. ರಮೇಶ ರಟಗೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಈ ಪ್ರಯತ್ನ ಶ್ಲಾಘನೀಯವಾಗಿದೆ. ಮಾದಕ ವಸ್ತುಗಳ ಸೇವನೆಯಿಂದ ಕುಟುಂಬ, ಸಮಾಜ ಹಾಗೂ ದೇಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು. 

ಡಾ. ಶ್ರೀಪಾಲ ಕುರಕುರೆ ಸ್ವಾಗತಿಸಿದರು. ಡಾ. ವಿದ್ಯಾ ಹಡಗಲಿ ಪರಿಚಯಿಸಿದರು. ಶಿಕ್ಷಣ ಮಂಡಳಿಯ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಮಂಜುನಾಥ ಕುರಿ ನಿರೂಪಿಸಿದರು. ಕಿರಣ ರೇವಣಕರ್ ವಂದಿಸಿದರು. ಡಾ. ಶಾರದಾ ಭಟ್, ಡಾ. ಬಸವರಾಜೇಶ್ವರಿ ಪಾಟೀಲ, ಎಂ.ಸಿ. ಹಂಚಿನಮನಿ ಸೇರಿದಂತೆ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.