ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ದೂರವಿರಬೇಕು: ಬಿ.ಕೆ. ಆರತಿ

ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ದೂರವಿರಬೇಕು: ಬಿ.ಕೆ. ಆರತಿ  Students must stay away from drug addiction: B.K. Aarathi

ಲೋಕದರ್ಶನ ವರದಿ  

ಮಾಂಜರಿ, ಆ.7: ಮಾದಕ ವಸ್ತುಗಳ ವ್ಯಸನವು ಆರೋಗ್ಯದ ಜೊತೆಗೆ ವ್ಯಕ್ತಿಯ ಜೀವನವನ್ನೇ ಹಾಳುಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸಬೇಕು ಎಂದು ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ಆರತಿ ಹೇಳಿದರು.  ಯಡೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವ್ಯಸನಮುಕ್ತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಭಾರತ ಸರ್ಕಾರ ಮತ್ತು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ದೇಶಾದ್ಯಂತ ವ್ಯಸನಮುಕ್ತ ಭಾರತ ನಿರ್ಮಾಣದ ಅಭಿಯಾನ ನಡೆಯುತ್ತಿದೆ. ಬೀಡಿ, ಸಿಗರೇಟ್, ತಂಬಾಕು, ಗುಟ್ಕಾ, ಮದ್ಯ ಸೇರಿದಂತೆ ಎಲ್ಲ ರೀತಿಯ ಮಾದಕ ವ್ಯಸನಗಳಿಂದ ದೂರವಿದ್ದಾಗ ಮಾತ್ರ ಆರೋಗ್ಯಕರ, ಸಂತೋಷದ ಜೀವನ ಸಾಧ್ಯವಾಗುತ್ತದೆ ಎಂದು ತಿಳಿಸಿದರು.  

ವಿದ್ಯಾರ್ಥಿಗಳು ತಮ್ಮ ಮನೆ ಅಥವಾ ಸುತ್ತಮುತ್ತ ಯಾರಾದರೂ ವ್ಯಸನಿಗಳಿದ್ದರೆ ಅವರಿಗೆ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಜೊತೆಗೆ ಮೊಬೈಲ್ ಬಳಕೆಯನ್ನು ಮಿತಿಗೊಳಿಸಿ ಶಿಕ್ಷಣ ಹಾಗೂ ಉತ್ತಮ ವ್ಯಕ್ತಿತ್ವ ನಿರ್ಮಾಣದತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ಕುಮಾರಿ ಭಾಗ್ಯಶ್ರೀ ಅವರು ಬ್ರಹ್ಮಕುಮಾರಿ ಸಂಸ್ಥೆಯ ಉದ್ದೇಶಗಳು ಹಾಗೂ ಸೇವಾ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಬಳಿಕ ಬಿ.ಕೆ. ಸವಿತಾ ವಿದ್ಯಾರ್ಥಿಗಳಿಗೆ ವ್ಯಸನಮುಕ್ತ ಜೀವನದ ಪ್ರತಿಜ್ಞಾ ವಿಧಿ ಬೋಧಿಸಿದರು.  

ಕಾರ್ಯಕ್ರಮದಲ್ಲಿ ಮನೋಹರ ತೋರಸೆ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಆರ್‌.ಜೆ. ಕಾಂಬಳೆ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ನಿರ್ಮಲಾ ಗುರವ್, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.