ಶಿಕ್ಷಣ, ಉದ್ಯೋಗಕ್ಕಾಗಿ ವಿದ್ಯಾರ್ಥಿ-ಯುವಜನರು ಐಕ್ಯ ಹೋರಾಟಕ್ಕೆ ಮುಂದಾಗಬೇಕು: ಬಸವರಾಜ ಪೂಜಾರ

ಶಿಕ್ಷಣ, ಉದ್ಯೋಗಕ್ಕಾಗಿ ವಿದ್ಯಾರ್ಥಿ-ಯುವಜನರು ಐಕ್ಯ ಹೋರಾಟಕ್ಕೆ ಮುಂದಾಗಬೇಕು: ಬಸವರಾಜ ಪೂಜಾರ Students and youth must unite and struggle for education and employment: Basavaraja Pujara

 ಹಾವೇರಿ, ಆ. 26: ಶಿಕ್ಷಣ, ಉದ್ಯೋಗ, ಆರೋಗ್ಯ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳಿಗಾಗಿ ಹಾಗೂ ಅನ್ಯಾಯ, ಭ್ರಷ್ಟಾಚಾರ ಮತ್ತು ಕೋಮುವಾದದ ವಿರುದ್ಧ ವಿದ್ಯಾರ್ಥಿ-ಯುವಜನರು ಐಕ್ಯ ಹೋರಾಟಕ್ಕೆ ಮುಂದಾಗಬೇಕು ಎಂದು ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಕರೆ ನೀಡಿದರು.  

ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆದ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ವಿದ್ಯಾರ್ಥಿಗಳ 9ನೇ ಜಿಲ್ಲಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.  

ದೇಶವು ಸ್ವಾತಂತ್ರ್ಯ ಪಡೆದು 80 ವರ್ಷಗಳಾದರೂ ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯಕ್ಕಾಗಿ ವಿದ್ಯಾರ್ಥಿ-ಯುವಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರುದ್ಯೋಗ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿವೆ. ಸರ್ಕಾರಿ ಇಲಾಖೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ಯುವಜನರ ಭವಿಷ್ಯಕ್ಕೆ ಸರ್ಕಾರಗಳು ಸಹಕಾರಿಯಾಗುತ್ತಿಲ್ಲ ಎಂದು ಅವರು ಆರೋಪಿಸಿದರು.  

ಶಿಕ್ಷಣ ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಗಳು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ-ಯುವಜನರು ಬಲಿಷ್ಠ ಚಳವಳಿ ರೂಪಿಸಬೇಕು ಎಂದು ಹೇಳಿದರು.  

ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್‌. ಮಾತನಾಡಿ, ಎಸ್‌ಎಫ್‌ಐ ದೇಶದ ಅತಿದೊಡ್ಡ ವಿದ್ಯಾರ್ಥಿ ಚಳವಳಿಗಳಲ್ಲಿ ಒಂದಾಗಿದೆ. ಹಾವೇರಿ ಜಿಲ್ಲೆಯಲ್ಲಿ ಸಂಘಟನೆ ಆರಂಭವಾದ ದಿನದಿಂದಲೂ ಸರ್ಕಾರಿ ವಿದ್ಯಾರ್ಥಿ-ಯುವಜನರು, ಹಾಸ್ಟೆಲ್ಗಳ ಸ್ಥಾಪನೆ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರ ಹೋರಾಟ ನಡೆಸಿಕೊಂಡು ಬಂದಿದೆ ಎಂದರು.  

ಕೇಂದ್ರ ಸರ್ಕಾರದ ವಿದ್ಯಾರ್ಥಿ, ಯುವಜನ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಯಾವುದೇ ವಿರೋಧ ಪಕ್ಷಗಳಿಂದಲೂ ತಡೆಯಲು ಸಾಧ್ಯವಿಲ್ಲ. ಶಿಕ್ಷಣದ ಹಕ್ಕು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಎಸ್‌ಎಫ್‌ಐ ಕಾರ್ಯಕರ್ತರ ವಿದ್ಯಾರ್ಥಿ-ಯುವಜನರು ಹೋರಾಟದ ಪರಂಪರೆಯನ್ನು ಮುಂದುವರಿಸಬೇಕು. ಸಮ್ಮೇಳನದಲ್ಲಿ ಕೈಗೊಂಡ ಶಿಕ್ಷಣ ಸಂಬಂಧಿತ ನಿರ್ಣಯಗಳ ಜಾರಿಗೆ ಬಲಿಷ್ಠ ಹೋರಾಟ ರೂಪಿಸಬೇಕು ಎಂದು ಕರೆ ನೀಡಿದರು.  

ಈ ಸಂದರ್ಭದಲ್ಲಿ ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಶಿವಪ್ಪ ಅಂಬಿಗೇರ, ನೂತನ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ನಗವತ್ ಸೇರಿದಂತೆ ಶಂಭುಲಿಂಗ ಸವದತ್ತಿ, ಶೋಭಾ ದೇವರಮನೆ, ಸಿಂಧು ತಳವಾರ, ಪರಶುರಾಮ ಎಸ್‌., ವೀರನಗೌಡ, ದೀಪಾ, ಶರಣು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಚೈತ್ರಾ ಕೊರವರ ನಿರೂಪಿಸಿದರು.