ಬಸ್ ವಿಳಂಬ ಖಂಡಿಸಿ ಮಳೆಯಲ್ಲೇ ವಿದ್ಯಾರ್ಥಿನಿಯರ ಪ್ರತಿಭಟನೆ

ಬಸ್ ವಿಳಂಬ ಖಂಡಿಸಿ ಮಳೆಯಲ್ಲೇ ವಿದ್ಯಾರ್ಥಿನಿಯರ ಪ್ರತಿಭಟನೆ  Student protest in the rain, condemning bus delays

ಲಕ್ಷ್ಮೇಶ್ವರ 29: ಪಟ್ಟಣದ ಬಸ್ ನಿಲ್ದಾಣದಲ್ಲಿ ಕುಂದ್ರಳ್ಳಿ ತಾಂಡಾಕ್ಕೆ ಪ್ರತಿದಿನ ಸಂಜೆ 4.30ಕ್ಕೆ ಹೊರಡಬೇಕಿದ್ದ ಬಸ್ ಸಂಜೆ 5.30 ಆದರೂ ಬಿಡದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಮಳೆಯಲ್ಲೇ ಬಸ್ ತಡೆದು ಪ್ರತಿಭಟನೆ ನಡೆಸಿದರು.  ಕಳೆದ ಒಂದು ವಾರದಿಂದ ನಿಗದಿತ ಸಮಯಕ್ಕೆ ಬಸ್ ಸಂಚರಿಸುತ್ತಿಲ್ಲ. ಇದರಿಂದ ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದ ವಿದ್ಯಾರ್ಥಿನಿಯರು ಜಿಟಿ-ಜಿಟಿ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ತಮ್ಮ ಪುಸ್ತಕದ ಬ್ಯಾಗ್ಗಳನ್ನು ರಸ್ತೆಯ ಮೇಲೆ ಇಟ್ಟು ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದರು.  

ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕ್ರೈಂ ಪಿಎಸ್‌ಐ ಟಿ.ಕೆ. ರಾಠೋಡ್ ಹಾಗೂ ಪೊಲೀಸ್ ಸಿಬ್ಬಂದಿ ವಿದ್ಯಾರ್ಥಿನಿಯರನ್ನು ಸಮಾಧಾನಪಡಿಸಿದರು. ಬಳಿಕ ಸಾರಿಗೆ ಘಟಕದ ಅಧಿಕಾರಿಗಳೊಂದಿಗೆ ಚರ್ಚಿಸಿ, ಇನ್ನು ಮುಂದೆ ನಿಗದಿತ ಸಮಯಕ್ಕೆ ಬಸ್ ಬಿಡುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.  ಅಧಿಕಾರಿಗಳ ಭರವಸೆಯ ನಂತರ ವಿದ್ಯಾರ್ಥಿನಿಯರು ಪ್ರತಿಭಟನೆ ಹಿಂತೆಗೆದುಕೊಂಡಿದ್ದು, ಬಸ್ ಅನ್ನು ಕುಂದ್ರಳ್ಳಿ ತಾಂಡಾ ಮಾರ್ಗಕ್ಕೆ ಬಿಡಲಾಯಿತು.