ವಿದ್ಯಾರ್ಥಿ ಜೀವನ ಮತ್ತೆ ದೊರೆಯದು; ಶ್ರದ್ಧೆಯಿಂದ ಕಲಿಯಿರಿ: ರಜನಿ ಪಾಟೀಲ

 ವಿದ್ಯಾರ್ಥಿ ಜೀವನ ಮತ್ತೆ ದೊರೆಯದು; ಶ್ರದ್ಧೆಯಿಂದ ಕಲಿಯಿರಿ: ರಜನಿ ಪಾಟೀಲ   Student life will not come again; learn with dedication: Rajani Patil

ಲೋಕದರ್ಶನ ವರದಿ 

ಗದಗ, ಆ.11: ವಿದ್ಯಾರ್ಥಿ ಜೀವನವು ಭವಿಷ್ಯ ರೂಪಿಸಿಕೊಳ್ಳುವ ಮಹತ್ವದ ಮೆಟ್ಟಿಲಾಗಿದ್ದು, ಅದನ್ನು ಕೇವಲ ತುಂಟಾಟಕ್ಕೆ ಸೀಮಿತಗೊಳಿಸದೆ, ಜೀವನವನ್ನು ಸರಿಯಾದ ಮಾರ್ಗದಲ್ಲಿ ರೂಪಿಸಿಕೊಳ್ಳಲು ಬಳಸಿಕೊಳ್ಳಬೇಕು ಎಂದು ಕೆ.ಎಲ್‌.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷೆ ಡಾ. ರಜನಿ ಪಾಟೀಲ ಹೇಳಿದರು.  

ಕೆ.ಎಲ್‌.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ 2026-27ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ ಹಾಗೂ ಎನ್‌ಎಸ್‌ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಬಹಳ ಮಹತ್ವದ್ದಾಗಿದೆ. ಕಳೆದುಹೋದ ವಿದ್ಯಾರ್ಥಿ ಜೀವನ ಮತ್ತೆ ದೊರೆಯುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.  

ವಿದ್ಯಾರ್ಥಿಗಳು ನಿರಂತರ ಅಧ್ಯಯನದ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಯಾವುದೇ ಕಷ್ಟಕ್ಕೆ ಹೆದರದೆ ಮುನ್ನುಗ್ಗಿದಾಗ ಮಾತ್ರ ಜೀವನದ ಉದ್ದೇಶ ಹಾಗೂ ಗುರಿ ಸಾಧಿಸಲು ಸಾಧ್ಯ. ವಯಸ್ಸಿಗಿಂತ ವಿದ್ಯೆಗಿಂತಲೂ ಸಾಧಿಸುವ ಛಲ ಮತ್ತು ಮನೋಭಾವ ಮುಖ್ಯ. ತಾಯಿ ಹಾಗೂ ಜನ್ಮಭೂಮಿಯನ್ನು ಗೌರವಿಸುವವರು ಜಗತ್ತಿನಲ್ಲೇ ಪ್ರಸಿದ್ಧರಾಗುತ್ತಾರೆ. ಸಾಧನೆ ಮಾಡಿದವರ ಜೀವನವನ್ನು ಮಾದರಿಯಾಗಿಸಿಕೊಂಡು ವಿದ್ಯಾರ್ಥಿಗಳು ಸ್ಫೂರ್ತಿ ಪಡೆಯಬೇಕು ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎ.ಕೆ. ಮಠದ ಮಾತನಾಡಿ, ವಿದ್ಯಾರ್ಥಿ ಜೀವನ ಶ್ರೇಷ್ಠವಾದದ್ದು. ಇಂತಹ ಸುದಿನಗಳಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಯೋಜನೆಗಳನ್ನು ವಿದ್ಯಾರ್ಥಿಗಳು ಹಾಕಿಕೊಳ್ಳಬೇಕು. ಇದರಿಂದ ಅವರಿಗೆ ಒಳಿತಾಗುವುದಲ್ಲದೆ, ದೇಶದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ. ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಈಗಿನಿಂದಲೇ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಸಮಾಜದ ಏಳಿಗೆಗೆ ಮುಂದಾಗಬೇಕು ಎಂದು ಹೇಳಿದರು.  

ಪದವಿ ಪಡೆದ ಬಳಿಕ ಕೇವಲ ಸರ್ಕಾರಿ ಉದ್ಯೋಗವನ್ನೇ ಅವಲಂಬಿಸದೆ ಸ್ವಯಂ ಉದ್ಯೋಗದತ್ತವೂ ವಿದ್ಯಾರ್ಥಿಗಳು ಗಮನ ಹರಿಸಬೇಕು. ತಮ್ಮ ಸಾಮರ್ಥ್ಯವನ್ನು ಸಮಾಜಕ್ಕೆ ಪರಿಚಯಿಸುವಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.  

ಕಾರ್ಯಕ್ರಮದ ಆರಂಭದಲ್ಲಿ ಕು. ಸ್ನೇಹಾ ತಳವಾರ ಪ್ರಾರ್ಥಿಸಿದರು. ಪ್ರಾಚಾರ್ಯೆ ಡಾ. ವೀಣಾ ಈ. ಎಲ್ಲರನ್ನು ಸ್ವಾಗತಿಸಿದರು. ಡಾ. ರಾಮಚಂದ್ರ ಪಡೇಸೂರ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಬ್ಯಾಡ್ಜ್ಗಳನ್ನು ವಿತರಿಸಲಾಯಿತು. ಕಳೆದ ಸಾಲಿನ ಬಿ.ಎ ಮತ್ತು ಬಿ.ಕಾಂ ತರಗತಿಗಳಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.  

ಸಾಂಸ್ಕೃತಿಕ ಘಟಕದ ಸಂಚಾಲಕ ಡಾ. ವಿಠ್ಠಲ ಕೋಳಿ, ಕ್ರೀಡಾ ಘಟಕದ ಸಂಚಾಲಕ ಪ್ರೊ. ಈಶ್ವರಗೌಡ ಪಾಟೀಲ, ವಿದ್ಯಾರ್ಥಿ ಪ್ರತಿನಿಧಿ ಕು. ಸಹನಾ ಡಿ. ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶಿಸಿದರು.