ಶಿವಾನಂದ ಬುರ್ಲಟ್ಟಿ ರಾಜ್ಯಕ್ಕೆ ದ್ವಿತೀಯ

ಶಿವಾನಂದ ಬುರ್ಲಟ್ಟಿ ರಾಜ್ಯಕ್ಕೆ ದ್ವಿತೀಯ Student at J.A. Pre-University College

ಜೆ.ಎ. ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ  

ಅಥಣಿ 10: ಜಾಧವಜಿ ಶಿಕ್ಷಣ ಸಂಸ್ಥೆಯ ಕಲಾ ವಿಭಾಗದ ಶಿವಾನಂದ ಮುರಿಗೆಪ್ಪ ಬುರ್ಲಟ್ಟಿ 600 ಕ್ಕೆ 595 ಅಂಕ ಪಡೆದು  ರಾಜ್ಯಕ್ಕೆ ದ್ವಿತೀಯ ಮತ್ತು ಅನನ್ಯ ರಮೇಶ ಪೂಜಾರಿ 600 ಕ್ಕೆ 589 ಅಂಕಗಳನ್ನು ಪಡೆದು ಜಿಲ್ಲೆಗೆ ಮೂರನೇ ಸ್ಥಾನ ಹಾಗೂ ವಿಜ್ಞಾನ ವಿಭಾಗದ ಅಭಿನವ ಕುಲಕರ್ಣಿ 600 ಕ್ಕೆ 587 ಅಂಕಗಳನ್ನು ಪಡೆಯುವ ಮೂಲಕ  ತಾಲೂಕಿಗೆ ಪ್ರಥಮ ಸ್ಥಾನ ಮತ್ತು ಪ್ರೀತಿ ಪೂಜಾರಿ 600 ಕ್ಕೆ 585 ಅಂಕ ಪಡೆದುಕೊಂಡು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಜಾಧವಜಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ರಾಮ ಕುಲಕರ್ಣಿ ತಿಳಿಸಿದರು. 

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. 2025-26 ನೇ ಸಾಲಿನಲ್ಲಿ ಪರೀಕ್ಷೆಗೆ ಹಾಜರಾದ 605 ವಿದ್ಯಾರ್ಥಿಗಳಲ್ಲಿ 566 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದ ಅವರು 40 ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ ಜೊತೆಗೆ ನೂರು ವಿದ್ಯಾರ್ಥಿಗಳು ಡಿಸ್ಟಿಂಕ್ಷನಲ್ಲಿ ಪಾಸಾಗಿದ್ದಾರೆ ಎಂದರು.  

ಪಿ.ಯು ಕಾಲೇಜ್ ಸುಧಾರಣಾ ಸಮೀತಿ ಅಧ್ಯಕ್ಷ ಮತ್ತು ಸಂಚಾಲಕ ಮಂಡಳಿ ಉಪಾಧ್ಯಕ್ಷ ಸಂದೀಪ ಸಂಗೋರಾಮ ಮಾತನಾಡಿ, ಕಲಾ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡ ನಮ್ಮ ಮಹಾ ವಿದ್ಯಾಲಯದ ವಿದ್ಯಾರ್ಥಿ ಶಿವಾನಂದ ಬುರ್ಲಟ್ಟಿ ತಾಲೂಕಿನ ಮುರಗುಂಡಿ ಗ್ರಾಮದವನಾಗಿದ್ದು, ತಂದೆ-ತಾಯಿ ಕೃಷಿ ಕೂಲಿ ಕಾರ್ಮಿಕರಾಗದ್ದು, ವಿದ್ಯಾರ್ಥಿ ಶಿವಾನಂದ ಕೂಡ ರಜಾ ದಿನಗಳಲ್ಲಿ ಕೂಲಿ ಕೆಲಸ ಮಾಡಿರುವುದು ಕೂಡ ಗಮನಿಸುವಂತಹ ವಿಷಯ ಎಂದ ಅವರು ನಮ್ಮ ಸುಮಾರು 50 ಸಾವಿರಕ್ಕೂ ಹೆಚ್ಚು ಪುಸ್ತಕಗಳಿರುವ ಮಹಾವಿದ್ಯಾಲಯದ ಡಿಜಿಟಲ್ ಲೈಬ್ರರಿಯಲ್ಲಿಯೇ ಅಧ್ಯಯನ ಮಾಡಿ ಈ ಸಾಧನೆ ಮಾಡಿರುವುದು ನಮ್ಮ ಸಂತೋಷ ಹೆಚ್ಚಿಸಿದೆ ಎಂದರು. 

ಪ್ರಾಚಾರ್ಯ ಎಮ್‌.ಪಿ.ಮೇತ್ರಿ ಮಾತನಾಡಿ, ಜಾಧವಜಿ ಶಿಕ್ಷಣ ಸಂಸ್ಥೆಯ ಪಿ.ಯು ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ  ತಜ್ಞ ರಿಂದ  ಉಚಿತವಾಗಿ ಸಿ.ಇ.ಟಿ ತರಬೇತಿ ಕೊಡುತ್ತೇವೆ ಜೊತೆಗೆ ಸಿ.ಇ.ಟಿ ಪುಸ್ತಕಗಳನ್ನೂ ಸಹ ಉಚಿತವಾಗಿ ನೀಡುವ ರಾಜ್ಯದ ಏಕೈಕ ಸಂಸ್ಥೆ ನಮ್ಮದಾಗಿದೆ ಎಂದು ಹೇಳಿದರು.  

ಇದೇ ಸಂದರ್ಭದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ ಪರವಾಗಿ ಸತ್ಕರಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ರವಿ ಕುಲಕರ್ಣಿ, ಜಂಟಿ ಕಾರ್ಯದರ್ಶಿ ಆನಂದ ಟೊಣಪಿ, ಸಂಚಾಲಕ ಮಂಡಳಿ ಸದಸ್ಯರಾದ ಅನೀಲ ದೇಶಪಾಂಡೆ (ಹಿಡಕಲ್), ಎಮ್‌.ವ್ಹಿ.ಜೋಶಿ,  ಡಾ.ಅವಿನಾಶ ನಾಯಿಕ, ಎಲ್‌.ವ್ಹಿ.ಕುಲಕರ್ಣಿ, ಹಿಮಾನಶು ಭಾಟೆ, ಅಥರ್ವ ದೇಶಪಾಂಡೆ, ಡಾ.ಶ್ರೀವತ್ಸ ಕುಲಕರ್ಣಿ, ಆಡಳಿತಾಧಿಕಾರಿ ಉದಯಕುಮಾರ ಕೋಠಿವಾಲೆ ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.