ರೌಡಿಗಳ ವಿರುದ್ಧ ಕಠಿಣ ಕ್ರಮ: ಎಸ್‌ಪಿ ಮಿಥುನ್

ರೌಡಿಗಳ ವಿರುದ್ಧ ಕಠಿಣ ಕ್ರಮ: ಎಸ್‌ಪಿ ಮಿಥುನ್  Strict action against rowdies: SP Mithun


ಗದಗ, ಆ.30: ಗದಗ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‌ಪಿ) ಐಪಿಎಸ್ ಅಧಿಕಾರಿ ಮಿಥುನ್ ಎಚ್‌.ಎನ್‌. ಅವರು ಭಾನುವಾರ ಅಧಿಕಾರ ಸ್ವೀಕರಿಸಿದರು.  ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ತಮ್ಮ ಪ್ರಮುಖ ಆದ್ಯತೆಯಾಗಿದ್ದು, ಸಂಘಟಿತ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.  

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರಾದ ಮಿಥುನ್ ಎಚ್‌.ಎನ್‌. ಅವರು ದಾವಣಗೆರೆಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಸೇವೆ ಆರಂಭಿಸಿದ್ದರು. ಬಳಿಕ ಮಂಗಳೂರಿನಲ್ಲಿ ಸುಮಾರು ಒಂದೂವರೆ ವರ್ಷ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸಿದ್ದರು.  

ಜಿಲ್ಲೆಯ ಪೊಲೀಸ್ ವ್ಯವಸ್ಥೆ ಹಾಗೂ ಸ್ಥಳೀಯ ಸಮಸ್ಯೆಗಳನ್ನು ಅರಿಯಲು ವಾರದೊಳಗೆ ಎಲ್ಲ ತಾಲ್ಲೂಕುಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಲಾಗುವುದು. ಆಯಾ ಪ್ರದೇಶಗಳ ಸಮಸ್ಯೆಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.  

ಮುಂದಿನ ದಿನಗಳಲ್ಲಿ ಸಾಲು ಸಾಲಾಗಿ ಹಬ್ಬಗಳು ನಡೆಯಲಿರುವ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗುವುದು. ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುವುದು ಎಂದರು.  

ಜಿಲ್ಲೆಯಲ್ಲಿ ಸುಮಾರು 500 ರೌಡಿ ಶೀಟರ್‌ಗಳಿರುವ ಮಾಹಿತಿ ಇದ್ದು, ಸಮಾಜದ ಶಾಂತಿ ಕದಡುವ ಹಾಗೂ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವವರ ಮೇಲೆ ನಿಗಾ ವಹಿಸಲಾಗುವುದು. ಅಗತ್ಯವಿದ್ದಲ್ಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.