ಕೈಗಾರಿಕಾ ವಲಯದಲ್ಲಿನ ಇ ಸ್ವತು ಸಮಸ್ಯೆ ಪರಿಹಾರಕ್ಕೆ ಕ್ರಮ

ಕೈಗಾರಿಕಾ ವಲಯದಲ್ಲಿನ ಇ ಸ್ವತು ಸಮಸ್ಯೆ ಪರಿಹಾರಕ್ಕೆ ಕ್ರಮ Steps to solve the e-asset problem in the industrial sector

ಹುಬ್ಬಳ್ಳಿ 26: ಗೋಕುಲ ಕೈಗಾರಿಕಾ ವಲಯದ ಕೈಗಾರಿಕೋದ್ಯಮಿಗಳಿಗೆ ಮೇಳವನ್ನು ಆಯೋಜನೆ ಮಾಡಲಾಗುವುದು. ಇ ಸ್ವತು ಎಲ್ಲಾ ಕೈಗಾರಿಕೋದ್ಯಮಿಗಳು ಅನುಭವಿಸುತ್ತಿರುವ ಸಮಸ್ಯೆಯಾಗಿದೆ. ಇ ಸ್ವತು ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸಲಾಗುವುದು ಎಂದು ಶಾಸಕರಾದ ಮಹೇಶ ಟೆಂಗಿನಕಾಯಿ ಹೇಳಿದರು.  

ಇಂದು ರವಿನಗರದ ಹೊಟೇಲ್ ಕ್ಲಾಸಿಕ್ ರೆಸಿಡೆನ್ಸಿಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಬೆಂಗಳೂರು ಇವುಗಳ ಸಹಯೋಗದಲ್ಲಿ ಎಂ.ಎಸ್‌.ಎಂ.ಇಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು ಯೋಜನೆಯಡಿಯಲ್ಲಿ ಟಿಆರ್‌ಇಡಿಎಸ್ ಯೋಜನೆಯ ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಸಣ್ಣ ಕೈಗಾರಿಕಾ ಉದ್ಯಮಿಗಳಿಂದ ಹಿಡಿದು ದೊಡ್ಡ ಕೈಗಾರಿಕಾ ಉದ್ಯಮಿಗಳವರೆಗೂ ವಾಣಿಜ್ಯ ತೆರಿಗೆ, ವಿವಿಧ ರೀತಿಯ ತೊಂದರೆಗಳನ್ನು ಬಗೆಹರಿಸಲಾಗುವುದು. 2014 ರಿಂದ 2025 ರವರೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಯೋಜಿಸಲಾಗಿರುವ ಎಂ.ಎಸ್‌.ಎಂ.ಇ ಯೋಜನೆ ಮತ್ತು ಕೈಗಾರಿಕೋದ್ಯಮ ಅಭಿವೃದ್ಧಿಯಲ್ಲಿ ಬಹುದೊಡ್ಡ ಸಾಧನೆ ಮಾಡಲಾಗಿದೆ. ಎಂ.ಎಸ್‌.ಎಂ.ಇ ಮತ್ತು ಹಲವು ರೀತಿಯ ಯೋಜನೆಗಳಿಂದ ದೇಶದ ಜಿ.ಡಿ.ಪಿ ಯು ಏರಿಕೆಯಾಗಿ ದೇಶ ಅಭಿವೃದ್ಧಿಯಾಗುವುದು. ಇತ್ತೀಚಿನ ದಿನಗಳಲ್ಲಿ ಆಧುನಿಕ ವ್ಯವಹಾರ ಪಾವತಿ ಉಪಕರಣಗಳಿಂದ ಸಮಯ ಉಳಿತಾಯ, ಯಾವುದೇ ರೀತಿಯ ಸಮಸ್ಯೆಗಳಿಲ್ಲದೆ ವ್ಯವಹಾರಗಳು ಸುಗಮವಾಗಿದೆ ಎಂದರು.  

ಪ್ರತಿಯೊಬ್ಬ ಸಣ್ಣ ಕೈಗಾರಿಕೋದ್ಯಮದಿಂದ ಹಿಡಿದು ದೊಡ್ಡ ಕೈಗಾರಿಕಾ ಉದ್ಯಮಗಳು ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ವಿವಿಧ ರೀತಿಯ ಯೋಜನೆಗಳನ್ನು ಉಪಯೋಗಿಸಿಕೊಳ್ಳಬೇಕು. ಕೈಗಾರಿಕಾ ಕ್ಷೇತ್ರದಲ್ಲಿ ಆಗುವ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ನಡೆಯುವ ಸದನದಲ್ಲಿ ಹಾಜರಾಗಿ ಕೈಗಾರಿಕೋದ್ಯಮ ಕ್ಷೇತ್ರ ಬೆಳವಣಿಗೆಗಾಗಿ ಸರ್ಕಾರದ ಗಮನಕ್ಕೆ ತಂದು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ. ಮುಂದಿನ ದಿನಮಾನಗಳಲ್ಲಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಈ ರೀತಿಯ ಕಾರ್ಯಗಾರಗಳು  

ಹಮ್ಮಿಕೊಂಡು ಜಾಗೃತಿ ಮೂಡಿಸಬೇಕು. ಇದರಿಂದ ದೇಶವು ಅಭಿವೃದ್ಧಿ ಪಥದತ್ತ ಸಾಗುವುದು ಎಂದು ತಿಳಿಸಿದರು. ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಉಪಾಧ್ಯಕ್ಷರಾದ ನಿಂಗಣ್ಣ ಎಸ್‌.ಬಿರಾದರ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲ್ಲಿವರೆಗೂ ಬೇರೆ ಬೇರೆ ಜಿಲ್ಲೆಗಳಲ್ಲಿ 17 ಕಾರ್ಯಕ್ರಮಗಳನ್ನು ಮಾಡಿದ್ದು, ಇದು 18ನೇ ಕಾರ್ಯಕ್ರಮವಾಗಿದೆ. ಇಲ್ಲಿಯವರೆಗೂ ಹುಬ್ಬಳ್ಳಿಯಲ್ಲಿ ನಾಲ್ಕು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಈ ಕಾರ್ಯಕ್ರಮದ ಪ್ರಯೋಜನಗಳನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು. ರಾಜ್ಯದಲ್ಲಿ ಕೈಗಾರಿಕೆಯ ಉದ್ಯಮಗಳಿಗೆ ಇ ಸ್ವತ್ತು ಬಹಳ ದೊಡ್ಡ ಸಮಸ್ಯೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. 

ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾದ ಜಿ.ಕೆ.ಆದಪ್ಪಗೌಡರ್, ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ರಮೇಶ ಪಾಟೀಲ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಶಿವಪುತ್ರ​‍್ಪ ಆರ್‌.ಹೆಚ್, ಗ್ರಾಮೀಣ ಜಂಟಿ ಕಾರ್ಯದರ್ಶಿಗಳಾದ ದಿನೇಶ್ ಕುಮಾರ್, ಪ್ಯಾನಲ್ ಮತ್ತು ಕಾಶಿಯಾ ಜಿಲ್ಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಲ್ಲೇಶ್ ಜಾಡರ್ ಸೇರಿದಂತೆ ಅಧಿಕಾರಿಗಳು ಕೈಗಾರಿಕೋದ್ಯಮಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.