ಅಂಕಿ ಅಂಶಗಳು ಮತ್ತು ಸಂಖ್ಯಾಶಾಸ್ತ್ರ

ಅಂಕಿ ಅಂಶಗಳು ಮಾನವ ಜೀವನದ ಪ್ರತಿ ಕ್ಷೇತ್ರದಲ್ಲೂ ಬಳಸಲ್ಪಡುವ ಅತ್ಯುಪಯುಕ್ತ ಅಂಶಗಳಲ್ಲೊಂದಾಗಿವೆ ಎಂದರೆ ಉತ್ಪ್ರೇಕ್ಷೆಯೇನಲ್ಲ. ನಮ್ಮ ಸರಕಾರ ಶಿಕ್ಷಣಕ್ಕೆ ಎಷ್ಟು ಖರ್ಚು ಮಾಡುತ್ತದೆ, ಕೃಷಿಗೆ ಎಷ್ಟು ಖರ್ಚು ಮಾಡುತ್ತದೆ, ದೇಶ ರಕ್ಷಣೆಗೆಗಾಗಿ ಎಷ್ಟು ಖರ್ಚು ಮಾಡುತ್ತದೆ ಇತ್ಯಾದಿಗಳ ಬಗ್ಗೆ ತಿಳಿಯಬೇಕಾದರೆ ಅಂಕಿ ಅಂಶಗಳು ಅತ್ಯಗತ್ಯ ಎನ್ನುವುದನ್ನು ಒತ್ತಿ ಹೇಳಬೇಕಾಗಿಲ್ಲ. ಸಧ್ಯ ದೇಶದಲ್ಲಿ ಜನಸಂಖ್ಯೆಯ ಒತ್ತಡ ಹೆಚ್ಚಾಗುತ್ತಿದೆ. ಜನಸಂಖ್ಯಾ ಬೆಳವಣಿಗೆಯ ದರವನ್ನು ನಿಯಂತ್ರಿಸಲೆಂದೇ ಕುಟುಂಬ ಯೋಜನೆಯನ್ನು ಸರಕಾರ ಅನುಷ್ಠಾನಗೊಳಿಸಿತ್ತು ಹಾಗಾದರೆ ಈ ಯೋಜನೆ ಎಷ್ಟು ಫಲಕಾರಿಯಾಗಿದೆ? ಎಲ್ಲಿ ವಿಫಲವಾಯಿತು? ಇದಕ್ಕೆ ಅಂಕಿ ಅಂಶಗಳ ಸಂಗ್ರಹಣೆ, ವಿಶ್ಲೇಷಣೆ ಅತ್ಯಗತ್ಯ. ಅದರಂತೆ ಸಂಗ್ರಹಿಸಲ್ಪಡುವ ಅಂಕಿ ಅಂಶಗಳು ದೋಷರಹಿತವಾಗಿರಬೇಕೆನ್ನುವುದೂ ಅಷ್ಟೇ ಅಗತ್ಯ.  

ಸರಕಾರ ರೂಪಿಸುವ ಅಭಿವೃದ್ಧಿ ಯೋಜನೆಗಳಿಗೆ ವಿವಿಧ ಕ್ಷೇತ್ರಗಳಲ್ಲಿ ದೊರೆಯುವ ಅಂಕಿ ಅಂಶಗಳೇ ಆಧಾರವಾಗಿರುವುದರಿಂದ, ಈ ಅಂಕಿ ಅಂಶಗಳು ದೋಷಯುಕ್ತವಾಗಿದ್ದರೆ ಯೋಜನೆಗಳ ರೂಪುರೇಷೆಗೆ ಧಕ್ಕೆಯಾಗುತ್ತದೆ. ಹೀಗೆಯೇ ಭೌತಶಾಸ್ತ್ರ ಸಂಶೋಧಕರಿಗೆ, ಬಾಹ್ಯಾಕಾಶ ಸಂಶೋಧನೆಯಲ್ಲಿ ಮುಂತಾದ ಸಂಶೋಧನಾ ಕೆಲಸಗಳಲ್ಲಿ ಬೇಕಾಗುವ ಅಂಕಿ ಅಂಶಗಳು ತಪ್ಪಾಗಿದ್ದರೆ, ಸಂಶೋಧನಾ ಫಲಿತಾಂಶಗಳನ್ನು ಅಕ್ಷರಶಃ ತಿಪ್ಪೆಗೆ ಹಾಕಬೇಕಾಗುತ್ತದೆ. ಆದ್ದರಿಂದ ಅಂಕಿ ಅಂಶಗಳನ್ನು ಒದಗಿಸುವ ಅವಕಾಶ ಬಂದಾಗ ನಾವು ಎಚ್ಚರಿಕೆ ವಹಿಸುವುದು ಉತ್ತಮ. ಹೀಗಾಗಿ ಅಂಕಿಅಂಶಗಳನ್ನು ಒದಗಿಸುವಾಗ ನಾವು ಸಾಕಷ್ಟು ಶೃದ್ಧೆ ವಹಿಸುವುದು ಅತ್ಯಗತ್ಯವೆನ್ನುವುದು ಸ್ಪಷ್ಟವಾಗುತ್ತದೆ.  

ಸಂಖ್ಯಾಶಾಸ್ತ್ರಜ್ಞರು ಅನೇಕ ತಂತ್ರಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. ಅಂಕಿ ಅಂಶಗಳನ್ನು ಕೊಡುವುದು ಹೆಚ್ಚು ಶ್ರದ್ಧೆಯಿಂದ ವಿಚಾರಿಸಿ ಸಾಧ್ಯವಾದಷ್ಟು ನಿಜ ಅಂಕಿ ಅಂಶಗಳನ್ನು ಒದಗಿಸಬೇಕು. ಅಂಕಿ ಅಂಶಗಳ ಸಂಗ್ರಹಕಾರರು ಕೂಡ ಅವುಗಳನ್ನು ಅರಿತುಕೊಂಡು, ಅವುಗಳನ್ನು ಸಂಗ್ರಹಿಸುವಾಗ ಸೂಕ್ತ ರೀತಿಯಿಂದ ಕೆಲಸ ಮಾಡಿ ನೈಜ ಅಂಕಿ ಅಂಶಗಳನ್ನು ಸಂಗ್ರಹಿಸಬೇಕು. ಹೀಗಾದರೆ ಮಾತ್ರ ಅಂಕಿ ಅಂಶಗಳನ್ನು ವಿಶ್ಲೇಷಿಸುವುದರಿಂದ ಬರುವ ನಿರ್ಣಯಗಳು ರಾಷ್ಟ್ರದ ದೃಷ್ಟಿಯಿಂದ, ಹಲವು ಸಂಸ್ಥೆಗಳ ದೃಷ್ಟಿಯಿಂದ, ಉದ್ಯಮಗಳ ದೃಷ್ಟಿಯಿಂದ, ಕುಟುಂಬಗಳ ಮತ್ತು ವ್ಯಕ್ತಿಗಳ ದೃಷ್ಟಿಯಿಂದ ಅತ್ಯುಪಯುಕ್ತವಾದವುಗಳಾಗುತ್ತವೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ವಿಶ್ಲೇಷಣೆಯನ್ನು ಕೈಕೊಳ್ಳುವ ಮೊದಲು ಸಾಧ್ಯವಾದ ಮಟ್ಟಿಗೆ, ದೋಷಗಳನ್ನು ಗುರುತಿಸಿ ನಿವಾರಣೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಶುದ್ಧೀಕರಿಸಲ್ಪಟ್ಟ ಅಂಕಿಅಂಶಗಳ ವಿಶ್ಲೇಷಣೆಯಿಂದ ಯೋಗ್ಯ ನಿರ್ಣಯಗಳನ್ನು ಪಡೆಯಲು ಅನುಕೂಲವಾಗುತ್ತದೆ.  

ಹಾಗೆಯೇ ಪದವಿಪೂರ್ವ ಶಿಕ್ಷಣ ಇಲಾಖೆಯು ಪಿಯುಸಿ ಕೋರ್ಸಿನ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಸಂಖ್ಯಾಶಾಸ್ತ್ರ ವಿಷಯವನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬಹುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕೆಲವು ಕಾಲೇಜುಗಳಲ್ಲಿ ಸಂಖ್ಯಾಶಾಸ್ತ್ರ ವಿಷಯವನ್ನು ಸಂಬಂಧಪಟ್ಟ ಸ್ನಾತಕೋತ್ತರ ಪದವೀಧರರು ಮಕ್ಕಳಿಗೆ ಬೋಧನೆ ಮಾಡದೇ ಇರುವುದು, ಒಂದು ರೀತಿಯ ಅನ್ಯಾಯವೆಂದೇ ಹೇಳಬಹುದು ಯಾವುದೇ ವಿಷಯವನ್ನು ಬೋಧನೆ ಮಾಡಬೇಕಾದರೆ ಆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್ ತರಬೇತಿಯನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಇದೂ ನಿಜಕ್ಕೂ ಸರ್ಕಾರದ ಅತ್ಯುತ್ತಮ ನಿರ್ಣಯವಾಗಿದೆ. ಆದರೆ ಈ ಸುತ್ತೋಲೆ ರಾಜ್ಯದ ಎಲ್ಲ ಕಾಲೇಜಿಗಳಲ್ಲಿ ಅನುಷ್ಠಾನಗೊಂಡಿದೆಯೆ? ಸಮೀಕ್ಷೆಯ ಪ್ರಕಾರ ಇದು ಸಾಧ್ಯವಾಗಿಲ್ಲವೆಂದೇ ಹೇಳಬಹುದು. ರಾಜ್ಯದ ಹಲವಾರು ಖಾಸಗಿ ಕಾಲೇಜುಗಳಲ್ಲಿಯ ಆಡಳಿತ ಮಂಡಳಿಗಳು ಸಂಖ್ಯಾಶಾಸ್ತ್ರದ ವಿಷಯದ ತಜ್ಞರನ್ನು ಹೊರತುಪಡಿಸಿ ಎಂ.ಕಾಂ, ಎಂ.ಬಿ.ಎ ಮತ್ತು ಎಂ.ಎಸ್ಸಿ ಗಣಿತ ವಿಷಯಗಳ ಬೋಧಕರಿಂದ ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವುದು ಅನ್ಯಾಯದ ಸಂಗತಿಯೇ.  

ಅಲ್ಲದೇ ಪಿಯುಸಿ ದ್ವಿತೀಯ ಮೌಲ್ಯಮಾಪನದಲ್ಲಿ ಆಯಾ ವಿಷಯಗಳ ಪರಿಣಿತರು ಮೌಲ್ಯಮಾಪನ ಮಾಡಬೇಕಾದುದು ಅವಶ್ಯವಾಗಿದೆ. ಆದರೆ ಸಂಖ್ಯಾಶಾಸ್ತ್ರ ವಿಷಯದ ಮೌಲ್ಯಮಾಪನದಲ್ಲಿ ಅರ್ಹತೆಯಿಲ್ಲದ ಮೌಲ್ಯಮಾಪಕರು ಮೌಲ್ಯಮಾಪನ ಮಾಡುವುದು ಎಷ್ಟು ಸರಿ? ಇದನ್ನು ತಡೆಯುವರಾರು! ಕಾಟಾಚಾರಕ್ಕೆ ಮೌಲ್ಯಮಾಪನ ಕ್ರಿಯೆ ಮುಗಿಸಿದಂತಾಗುವುದಿಲ್ಲವೇ? ಇದಕ್ಕೆ ಸಂಬಂಧಪಟ್ಟಂತೆ ಕಳೆದ ಕೆಲವು ವರ್ಷಗಳಿಂದ ಸಂಶ್ಯಾಶಾಸ್ತ್ರದ ವಿಷಯದ ಅರ್ಹ ಮೌಲ್ಯಮಾಪಕರೆಲ್ಲ ಸೇರಿ ಹಲವು ಬಾರಿ ಮೆಮೊರಂಡಮ್‌ನ್ನು ಇಲಾಖೆಗೆ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾದರೇ ತಪ್ಪು ನಿರ್ಣಯಗಳನ್ನು ತೆಗೆದುಕೊಳ್ಳಲು ಇಲಾಖೆ ಸಹಕರಿಸಿದಂತಾಗುವದಿಲ್ಲವೆ? 

ನೂತನ ಸರ್ಕಾರ ಈ ದಿಸೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಗೆ ಕಠಿಣವಾಗಿ ಆದೇಶಿಸುವುದು ಅಗತ್ಯವಿದೆ. ರಾಜ್ಯದ ವಿವಿಧ ಕಾಲೇಜುಗಳಲ್ಲಿ ವಿಷಯಗಳಿಗೆ ಸಂಬಂಧಪಟ್ಟಂತೆ ಅರ್ಹ ಬೋಧಕರನ್ನೇ ಆಯ್ಕೆಮಾಡಿಕೊಂಡು, ಅವರಿಂದಲೇ ಪಾಠ ಬೋಧನೆಗೆ ಅವಕಾಶ ಒದಗಿಸಿಬೇಕು. ಅಂದಾಗ ಮಕ್ಕಳು ಸಂಬಂಧಪಟ್ಟ ವಿಷಯದ ಜ್ಞಾನ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಅಲ್ಲದೇ ಅರ್ಹ ಬೋಧಕರಿಂದ ಮಾತ್ರ ಮೌಲ್ಯಮಾಪನ ಮಾಡಿಸಿ, ನೈಜ ಫಲಿತಾಂಶವನ್ನು ನೀಡುವುದು ಅಗತ್ಯವಾಗಿದೆ. ರಾಷ್ಟ್ರದ, ರಾಜ್ಯದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸುವ ಅಂಕಿ ಅಂಶಗಳ ಬೋಧನೆಯ ಸಂಖ್ಯಾಶಾಸ್ತ್ರ ವಿಷಯಕ್ಕೆ ಈ ಪರಿಸ್ಥಿತಿ ಬರಬಾರದಿತ್ತು. ಆದ್ದರಿಂದ ಕೂಡಲೇ ಸಂಬಂಧಪಟ್ಟ ಇಲಾಖೆಯು ಪ್ರವೃತ್ತಗೊಂಡು ಕಾರ್ಯೋನ್ಮುಖವಾಗಿ ನ್ಯಾಯವನ್ನು ಒದಗಿಸುವುದು ಅಗತ್ಯವಿದೆ. 

ಸಂಖ್ಯಾಶಾಸ್ತ್ರದ ಮೂಲಭೂತ ತತ್ವಗಳ, ವಿಧಿ ವಿಧಾನಗಳ ಪರಿಚಯವೂ ಇಲ್ಲದವರು ಅಂಕಿಅಂಶಗಳನ್ನು ತಮಗಿಷ್ಟವಾದಂತೆ ಮಾಹಿತಿಗಳನ್ನು ತಿರುಚಿಕೊಳ್ಳುವುದರಿಂದ, ತಪ್ಪು ಅಭಿಪ್ರಾಯಗಳಿಗೆ ಪುಷ್ಟಿ ನೀಡಿದಂತಾಗುತ್ತದೆ. ಅಂಕಿ ಅಂಶಗಳನ್ನು ಕೊಡುವವರು ಅವುಗಳನ್ನು ನಿಷ್ಕೃಷ್ಟವಾಗಿ ಕೊಡದಿದ್ದರೆ, ಸಂಖ್ಯಾಶಾಸ್ತ್ರದ ಅತ್ಯುತ್ತಮ ವಿಧಾನಗಳನ್ನು ಬಳಸಿ ವಿಶ್ಲೀಷಿಸಿದರೂ ನಮಗೆ ಸಿಗುವ ಮಾಹಿತಿ ತಪ್ಪಾಗಿರುತ್ತೆಂದು ಬೇರೆ ಹೇಳಬೇಕಾಗಿಲ್ಲ.  

- * * * -