ಬೆಂಗಳೂರು, ಏ 11,ರಾಜ್ಯದಲ್ಲಿ ಒಂದು ತಿಂಗಳಲ್ಲಿ ಅತಿ ಹೆಚ್ಚು ಕೋವಿಡ್ -19 ಪ್ರಕರಣಗಳು ವರದಿಯಾಗಲಿದ್ದು, ಅದನ್ನು ಎದುರಿಸಲು ಸಿದ್ಧರಿದ್ದೇವೆ ಎಂಬ ವದಂತಿಗಳು ಸತ್ಯಕ್ಕೆ ದೂರ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಶುಕ್ರವಾರ ಹೈಕೋರ್ಟ್ ಗೆ ರಾಜ್ಯ ಸರ್ಕಾರ ನೀಡಿದ ಹೇಳಿಕೆ ಕುರಿತು ಮಾಧ್ಯಮಗಳಲ್ಲಿ ತಪ್ಪಾಗಿ ವರದಿಯಾಗಿದೆ. ಈ ತಿಂಗಳಲ್ಲಿ ವರದಿಯಾಗುವ ಪ್ರಕರಣಗಳ ಕುರಿತು ಇಲಾಖೆ ಯಾವುದೇ ಅಂಕಿ ಅಂಶಗಳ ಪಟ್ಟಿ ಮಾಡಿಲ್ಲ. ಎಷ್ಟೇ ಪ್ರಕರಣ ದಾಖಲಾದರೂ ಎದುರಿಸಲು ಸಿದ್ಧ ಎಂದಷ್ಟೇ ಹೇಳಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆಯ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.ಮೊದಲು ದೇಶದ ಕೋವಿಡ್-19 ಪ್ರಕರಣಗಳ ಪಟ್ಟಿಯಲ್ಲಿ 3ನೇ ಶ್ರೇಣಿಯಲ್ಲಿದ್ದ ಕರ್ನಾಟಕ ಈಗ 11ನೇ ಸ್ಥಾನಕ್ಕಿಳಿದಿದೆ. ರಾಜ್ಯ ಸರ್ಕಾರ ಮತ್ತು ಇಲಾಖೆಯ ಅಧಿಕಾರಿಗಳು ಸೋಂಕು ತಡೆಯಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ತಪ್ಪು ಮಾಹಿತಿಗಳಿಂದ ಜನರು ಆತಂಕಕ್ಕೊಳಗಾಗಬಾರದು ಎಂದು ಅವರು ಮನವಿ ಮಾಡಿದ್ದಾರೆ.