ಮಹಿಳಾ ಸ್ವಾಸ್ಥ್ಯಕ್ಕಾಗಿ ಆಗ್ರಹಿಸಿ ರಾಜ್ಯ ಮಟ್ಟದ ಆಗ್ರಹ ಸಮಾವೇಶ

State level conference for women's

ವಿಜಯಪುರ 16: - ಒಬ್ಬ ಪುರುಷನನ್ನು ಮಹಿಳಾ ಸಮಾವೇಶದ ಉದ್ಘಾಟನೆಗೆ ಕರೆದಿದ್ದೀರಾ, ಇದು ಸಾಂಕೇತಿಕವಾಗಿ ಪುರುಷರಲ್ಲಿ ಸ್ತ್ರೀಪರವಾದ ಮನಸ್ಥಿತಿ ಈ ಗಳಿಗೆಯ ಅವಶ್ಯಕತೆ ಎಂಬುದರ ಸೂಚಕ ಎಂದು ಹಿರಿಯ ಸಾಹಿತಿಗಳು ನಾಡೋಜ ಪ್ರೊ. ಬರಗೂರು ರಾಮಚಂದ್ರ​‍್ಪರವರು ಹೇಳಿದರು. 

ಅವರು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ಇಂದು ಎಲ್ಲಾ ರೀತಿಯಿಂದಲೂ ಮಹಿಳೆ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾಳೆ. ಮೂಲ ಕಾರಣ ಸಾಮಾಜಿಕ-ಆರ್ಥಿಕ ಸಂರಚನೆ, ತಳ ಸ್ಥರದ ಮಹಿಳೆಯರೇ ಇದರ ಮೊದಲ ಬಲಿಪಶು. ದೇಶದ ಅಭಿವೃದ್ದಿಯ ಮಾನದಂಡವನ್ನು ಮಹಿಳೆಯರ ಅಭಿವೃದ್ದಿ ಸೂಚಿಸುತ್ತದೆ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವ ಕಾನೂನುಗಳಿಗಿಂತ ಪ್ರಾಣಿ ಪಕ್ಷಿಗಳ ರಕ್ಷಣೆಗೆ ಹೆಚ್ಚಿನ ಕಾನೂನುಗಳಿವೆ. ಎಲ್ಲಾ ಜೀವಿಗಳಿಗೂ ಕಾನೂನು ಬೇಕು ಆದರೆ ಮಹಿಳಾ ಅಪರಾಧಗಳನ್ನು ತಡೆಗಟ್ಟಲು ಕಠಿಣವಾದ ಕಾನೂನು ಏಕೆ ಇಲ್ಲವೆನ್ನುವುದೇ ಪ್ರಶ್ನೆ? ಹೆಣ್ಣು ಮಕ್ಕಳಿಗೆ ಆರೋಗ್ಯ ಸ್ವಾಸ್ಥ್ಯವನ್ನು ಸರ್ಕಾರ ಖಾತ್ರಿಪಡಿಸಿದರೆ ಅದು ಮಾನವೀಯ ನಡೆ ಎನ್ನಬಹುದು. ಅಪರಾಧಿಗಳಿಗೆ ಜೈಲಿನಿಂದ ಸನ್ನಡತೆಯ ಆಧಾರದ ಮೇಲೆ ಹೂಮಾಲೆ ಹಾಕಿ ಸನ್ಮಾನಿಸುತ್ತಾರೆ. ಈ ಘಟನೆಯು ಸಮಾಜ ಎಷ್ಟು ವಿಕೃತವಾಗುತ್ತಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ” ಎಂದು ಕಳವಳ ವ್ಯಕ್ತಪಡಿಸಿದರು. 

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಐ.ಎಂ.ಎಸ್‌.ಎಸ್‌ನ ರಾಜ್ಯ ಕಾರ್ಯದರ್ಶಿಗಳಾದ ಶೋಭಾ.ಎಸ್ ವಹಿಸಿದ್ದರು. ಎ.ಐ.ಎಂ.ಎಸ್‌.ಎಸ್‌ನ ರಾಜ್ಯ ಉಪಾಧ್ಯಕ್ಷರಲ್ಲಿ ಒಬ್ಬರಾದ ಗುಂಡಮ್ಮ ಪ್ರಾಸ್ತಾವಿಕ ಮಾತುಗಳನ್ನಾಡಿದರು. 

‘ಮಹಿಳಾ ಘನತೆ-ಮುಂದಿರುವ ಸವಾಲುಗಳು’ ವಿಷಯದ ಮೇಲೆ ಮೊದಲ ಗೋಷ್ಠಿ ನಡೆಯಿತು. ಮನೋಚಿಕಿತ್ಸಕರು ಮತ್ತು ಆಪ್ತ ಸಲಹೆಗಾರರಾದ ಶ್ರೀ ನಡಹಳ್ಳಿ ವಸಂತ್‌ರವರು ಮಾತನಾಡಿ-“ಮನುಷ್ಯರಿಗಾಗಿ ಇರುವ ಮೆದುಳು ಕ್ರಿಯಾಶೀಲವಾಗಿ ಯೋಚನೆಯನ್ನು ಮಾಡಲು ಪ್ರಯತ್ನಿಸುತ್ತದೆ ಧರ್ಮಗಳು ಬಂಡವಾಳಶಾಹಿಗಳ ಕೈಗೊಂಬೆಗಳಾಗಿವೆ. ಮಹಿಳೆಯ ಘನತೆಯೆಂದರೆ ಒಂದು ಸಮಾಧಾನದ, ಸಮಾನತೆಯ ಗೌರವದ ಬದುಕು. ಸಮಾಜ, ಮರ್ಯಾದೆ, ಮಕ್ಕಳು ಎಂಬ ಕಾರಣಗಳಿಂದಾಗಿ ಅದೆಷ್ಟೋ ಮಹಿಳೆಯರು ದಿನನಿತ್ಯ ಎದುರಿಸುತ್ತಿರುವ ಮಾನಸಿಕ ಮತ್ತು ದೈಹಿಕ ಹಿಂಸೆಗಳಿಂದ ಹೊರಬರಲು ಹಿಂಜರಿಯುತ್ತಾರೆ ಎಂಬುವುದನ್ನು ಹಲವಾರು ಉದಾಹರಣೆ ನೀಡಿ ವಿವರಿಸಿದರು.  

ಮತ್ತೋರ್ವ ಮುಖ್ಯ ಭಾಷಣಕಾರರಾದ ಎ.ಐ.ಎಮ್‌.ಎಸ್‌.ಎಸ್ ರಾಜ್ಯಾಧ್ಯಕ್ಷರಾದ ಎಮ್ ಎನ್ ಮಂಜುಳ ರವರು ಮಾತನಾಡುತ್ತಾ ನಮ್ಮ ಸಂಘಟನೆ ಮಹಿಳೆಯರ ವಿಷಯವನ್ನು ತೆಗೆದುಕೊಂಡು ದೇಶದಾದ್ಯಂತ ಹೋರಾಟವನ್ನು ಕಟ್ಟುತ್ತಿದೆ. ಹೆಣ್ಣು ಮಕ್ಕಳ ಪರವಾಗಿ ಹಲವಾರು ಮಹನೀಯರು ಹೋರಾಟ ಮಾಡಿದ್ದಾರೆ, ಅದರಲ್ಲಿ ಬಹುಪಾಲು ಪುರುಷರೇ. ನಮ್ಮ ಹೋರಾಟ ಪುರುಷರ ವಿರುದ್ಧವಲ್ಲ, ಪುರುಷ ಪ್ರಧಾನ ಧೋರಣೆ ವಿರುದ್ದವಾಗಿದೆ. ಸಮಾಜವನ್ನು ಪ್ರಜಾತಾಂತ್ರಿಕರಣಗೊಳಿಸಲು, ನೈಜ್ಯ ಪ್ರಜಾತಾಂತ್ರಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ಮಹಿಳೆಯರು ಸಂಘಟಿತ ಹೋರಾಟಗಳನ್ನು ಕಟ್ಟಬೇಕಿದೆ ಎಂದು ಕರೆನೀಡಿದರು. ಮಾತೃಪ್ರಧಾನ ಸಮಾಜ ಖಾಸಗಿ ಆಸ್ತಿಯ ಉಗಮದಿಂದ ಪಿತೃಪ್ರಧಾನ ಸಮಾಜವಾಗಿ ಬೆಳೆದು ಬಂದ ಇತಿಹಾಸವನ್ನು ವಿವರಿಸಿದರು. 

ಎರಡನೇ ಗೋಷ್ಠಿ ‘ಮಹಿಳಾ ಸ್ವಾಸ್ಥ್ಯ- ವ್ಯವಸ್ಥೆಯ ಕರಾಳತೆ’ ಎಂಬ ವಿಷಯದ ಮೇಲೆ ಜರುಗಿತು. ನಿವೃತ್ತ ಪ್ಲಾಸ್ಟಿಕ್ ಸರ್ಜನ್, ಎ.ಐ.ಎಂ.ಎಸ್‌.ಎಸ್ ರಾಷ್ಟ್ರ ಉಪಾಧ್ಯಕ್ಷರಾದ ಡಾ.ಸುಧಾ ಕಾಮತ್‌-“ ಖಾಸಗಿಕರಣ, ಜಾಗತಿಕರಣ, ಉದಾರೀಕರಣದಿಂದಾಗಿ ಆರೋಗ್ಯ ಕ್ಷೇತ್ರವು  ಸಾರ್ವಜನಿಕ ಸೇವೆಯಾಗುವ ಬದಲು, ಒಂದು ಲಾಭದ ಉದ್ದೀಮೆಯಾಗಿದೆ. ಸರ್ಕಾರ  ಇದರ ಜವಾಬ್ದಾರಿಯನ್ನು ಕೈಬಿಟ್ಟಿದೆ. ಅದರ ಪ್ರತಿಬಿಂಬವೇ ನೂರಾರು ಬಾಣಂತಿಯರ ಸಾವುಗಳು ಇಂದು ಕರ್ನಾಟಕದಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ವರದಿಯಾಗುತ್ತಿರುವೆ. ಇದಕ್ಕೆ ಪರಿಹಾರ ಆರೋಗ್ಯ ಕ್ಷೇತ್ರದ ಸಾಮಾಜೀಕರಣ. ಸೋವಿಯತ್ ಯುನಿಯನ್‌ನಲ್ಲಿ ಸರ್ಕಾರವೇ ಗುಣಮಟ್ಟದ ಶಿಕ್ಷಣ-ಆರೋಗ್ಯವನ್ನು ಉಚಿತವಾಗಿ ನೀಡುತಿತ್ತು. ಅದೇ ಮಾದರಿಯನ್ನು ನಮ್ಮ ಸರ್ಕಾಗಳು ಅಳವಡಿಸಿಕೊಳ್ಳಬೇಕು” ಎಂದು ಆಗ್ರಹಿಸಿದರು ಎ.ಐ.ಎಂ.ಎಸ್‌.ಎಸ್ ರಾಜ್ಯ ಸೆಕ್ರೇಟರಿಯೆಟ್ ಸದಸ್ಯರಾದ  ಕೆ. ಹೇಮಾವತಿ ಈ ಗೋಷ್ಠಿಯನ್ನು ನಡೆಸಿಕೊಟ್ಟರು. 

ಕರ್ನಾಟಕದ ವಿವಿಧ ಜಿಲ್ಲೆಯಿಂದ ನೂರಕ್ಕೂ ಹೆಚ್ಚು ಮಹಿಳೆಯರು ಉತ್ಸಾಹದಿಂದ ಸಮಾವೇಶದಲ್ಲಿ ಭಾಗವಹಿಸಿದ್ದರು.