ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮ: ಸಚಿವ ಬಸವರಾಜ ರಾಯರಡ್ಡಿ

ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮ: ಸಚಿವ ಬಸವರಾಜ ರಾಯರಡ್ಡಿ  State's economic situation is good: Minister Basavaraj Rayareddy


ಯಲಬುರ್ಗಾ, ಸೆ. 2: ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು, ಸರ್ಕಾರ ಜಾರಿಗೊಳಿಸಿರುವ ಜನಪರ ಯೋಜನೆಗಳ ಪರಿಣಾಮವಾಗಿ ಬಡವರು ಹಾಗೂ ಸಾಮಾನ್ಯ ಜನರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.  

ತಾಲೂಕಿನ ಸಂಗನಾಳ ಗ್ರಾಮದಲ್ಲಿ ಬುಧವಾರ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಜನಸಂದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ರಾಜ್ಯದ 181 ತಾಲೂಕುಗಳ ಪೈಕಿ ಹಲವು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ಅನೇಕ ಪ್ರದೇಶಗಳಲ್ಲಿ ಭೀಕರ ಬರದ ಛಾಯೆ ಆವರಿಸಿದೆ. ಸಾಮಾನ್ಯವಾಗಿ ಉತ್ತಮ ಮಳೆಯಾಗುವ ಮಲೆನಾಡು ಪ್ರದೇಶಗಳಲ್ಲಿಯೂ ಈ ಬಾರಿ ನೀರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದರು.  

ಈ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಹಾಗೂ ಜನರ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಮುಂದಿನ 15 ದಿನಗಳಲ್ಲಿ ಕಂದಾಯ ಸಚಿವರು ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರನ್ನು ತಾಲೂಕಿಗೆ ಕರೆತಂದು ಸಮಸ್ಯೆಗಳ ಕುರಿತು ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.  

ಸಂಗನಾಳಕ್ಕೆ ನೂತನ ಬಸ್ ನಿಲ್ದಾಣ  

ಗ್ರಾಮದಲ್ಲಿ ನಡೆದ ಜನಸಂದರ್ಶನ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದ ಸಚಿವರು, ಸಂಗನಾಳ ಗ್ರಾಮದ ಸಾರಿಗೆ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.  ಬಸ್ ನಿಲ್ದಾಣ ನಿರ್ಮಾಣದಿಂದ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಸೇರಿದಂತೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.