ಬೆಂಗಳೂರು, ಜ .25, ಶಾಸಕರ ಸ್ಥಳೀಯ ಪ್ರದೇಶಾಭಿವೃದ‍್ಧಿ ನಿಧಿಗೂ ಕಾಸಿಲ್ಲದ ದುಸ್ಥಿತಿ ಕರ್ನಾಟಕ ಸರ್ಕಾರದ್ದಾಗಿದೆ. ಅಡ್ಡಕಸುಬಿಗಳ ಕೈಗೆ ಅಧಿಕಾರ ಕೊಟ್ಟರೆ ಇದೇ ಗತಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.ರಾಜ್ಯದಲ್ಲಿ ತೆರಿಗೆ ಸಂಗ್ರಹ ಇಳಿಯುತ್ತಿದೆ, ಸಾಲದ ಹೊರೆ ಹೆಚ್ಚಾಗುತ್ತಿದೆ, ಕೇಂದ್ರದ ಅನುದಾನದ ಬಾಕಿ ಏರುತ್ತಿದೆ. ಶೀಘ್ರದಲ್ಲಿ ನೌಕರರ ಸಂಬಳಕ್ಕೂ ತತ್ವಾರ ಬರಲಿದೆ ಎಂದು ಟ್ವೀಟ್‌ನಲ್ಲಿ ಭವಿಷ್ಯ ನುಡಿದಿದ್ದಾರೆ.ರಾಜ್ಯದ ಖಜಾನೆ ಖಾಲಿಯಾಗುತ್ತಿದ್ದು ಅಧಿಕಾರಿಗಳು ಬಜೆಟ್ ಹೇಗೆ ಮಾಡುವುದು ಎಂದು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.
ತಮ್ಮ ವೈಫಲ್ಯದಿಂದಾಗಿ ದೇಶವನ್ನು ಕಬರ್‌ಸ್ತಾನ ಮಾಡಲು ಹೊರಟಿರುವ ನರೇಂದ್ರ ಮೋದಿ ಅವರು ತಮ್ಮ ಅಸಾಮರ್ಥ್ಯವನ್ನು ಮುಚ್ಚಿಕೊಳ್ಳಲು ಪಾಕಿಸ್ತಾನದ ಜಪ ಮಾಡುತ್ತಿದ್ದಾರೆ. ತಮ್ಮ ನಾಯಕನ ಮೇಲ್ಪಂಕ್ತಿಯನ್ನು ಅನುಸರಿಸುತ್ತಿರುವ ರಾಜ್ಯದ ನಾಯಕರು ತಲೆಕೆಟ್ಟವರಂತೆ ಕೋಮುದ್ವೇಷಕ್ಕೆ ಪ್ರಚೋದನೆ ನೀಡತೊಡಗಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಯಡಿಯೂರಪ್ಪರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಾಗದೇ ಇದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಮುಳುಗುತ್ತಿದ್ದಾರೆ, ಜೊತೆಗೆ ರಾಜ್ಯವನ್ನೂ ಮುಳುಗಿಸಲು ಹೊರಟಿದ್ದಾರೆ. ಹಣ ಇಲ್ಲದೆ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡಿವೆ, ಗುತ್ತಿಗೆದಾರರು ಕಾಮಗಾರಿಗಳನ್ನು ಅರ್ಧಕ್ಕೆ ಬಿಟ್ಟು ಓಡಿಹೋಗುತ್ತಿದ್ದಾರೆ, ಖಾಲಿ ಖಜಾನೆ ತುಂಬಲು ರೈತರಿಂದ ಬಲತ್ಕಾರವಾಗಿ ಸಾಲ ವಸೂಲಿ ಮಾಡಲು ಪೀಡಿಸುತ್ತಿದ್ದಾರೆ. ಸುಭೀಕ್ಷೆಯಿಂದ ಇದ್ದ ರಾಜ್ಯ ಅರಾಜಕತೆಯತ್ತ ಭರದಿಂದ ಸಾಗಿದೆ ಎಂದು ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಅಭಿವೃದ್ಧಿಗೆ ಹಣಕೊಡದೇ ಕೇಂದ್ರ ಸರ್ಕಾರ ಯಡಿಯೂರಪ್ಪ ಅವರನ್ನು ಹತಾಶರನ್ನಾಗಿಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಮೋದಿ-ಶಾ ಜೋಡಿ ಅವರನ್ನು ದಂಡಿಸುತ್ತಿದೆಯೇ? ಬಿಜೆಪಿಯ ಆಂತರಿಕ ಕಲಹಕ್ಕೆ ರಾಜ್ಯದ ಜನ ಬಲಿಪಶುಗಳಾಗುತ್ತಿದ್ದಾರೆ. ಸಂಪುಟ ವಿಸ್ತರಣೆ, ಅತೃಪ್ತರ ಓಲೈಕೆ, ಹೈಕಮಾಂಡ್‌ಗೆ ಮೊರೆ, ಭಿನ್ನಮತೀಯರನ್ನು ಸಮಾಧಾನಗೊಳಿಸುವಲ್ಲಿಯೇ ಯಡಿಯೂರಪ್ಪಆರು ತಿಂಗಳು ಕಳೆದಿದ್ದಾರೆ. ಆಡಳಿತ ಕೈಗೆ ಸಿಗುತ್ತಿಲ್ಲ, ವರಿಷ್ಠರು ಕ್ಯಾರೆ ಎನ್ನುತ್ತಿಲ್ಲ ಎಂದು ಕುಟುಕಿದರು.