ಬೆಳಗಾವಿ 30: ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು ಪೋಷಿಸಿ, ಆಚರಿಸಿ ಬೆಳೆಸಬೇಕು. ಸಾಂಸ್ಕೃತಿಕ ಹೆಮ್ಮೆ ಮತ್ತು ಏಕತೆಯನ್ನು ಬೆಳೆಸುವಲ್ಲಿ ಕನ್ನಡ ಹಬ್ಬದಂತಹ ಕಾರ್ಯಕ್ರಮಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಬೆಳಗಾವಿಯ ಪ್ರತಿಷ್ಟಿತ ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾಣದ ಕಾರ್ಯಾಧ್ಯಕ್ಷೆ ಹಾಗೂ ಮಾಜಿ ಸಂಸದೆ ಮಂಗಲ ಅಂಗಡಿ ಹೇಳಿದರು.
ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಬುಧವಾರ, ದಿನಾಂಕ 27 ರಂದು ನಡೆದ ಕನ್ನಡ ಹಬ್ಬ ಕಾರ್ಯಕ್ರಮವನ್ನು ಉಧ್ಘಾಟಿಸಿ, ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕನ್ನಡವನ್ನು ಗರಿಷ್ಠ ಮಟ್ಟದಲ್ಲಿ ಬಳಸುವ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡದ ಕಂಪು ಪಸರಿಸುವಂತೆ ಮಾಡಬೇಕು ಮತ್ತು ಕನ್ನಡ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು. ಕರ್ನಾಟಕ ರಾಜ್ಯವು ಸಂಸ್ಕೃತಿ, ಕಲೆ ಮತ್ತು ಕೌಶಲ್ಯಗಳ ನಾಡಾಗಿದ್ದು, ಉನ್ನತ ಶಿಕ್ಷಣಕ್ಕೆ ಬೇರೆ ರಾಜ್ಯಗಳಿಗಿಂತ ಪ್ರಾಮುಖ್ಯತೆಯನ್ನು ಕೊಟ್ಟಿದೆ. ರಾಜ್ಯವು ಉನ್ನತ ತಾಂತ್ರಿಕ ಶಿಕ್ಷಣವನ್ನು ಒದಗಿಸುವಲ್ಲಿ ಯಶಸ್ಸನ್ನು ಪಡೆದಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಸ್ಥಾನವನ್ನು ಶ್ರದ್ಧೆಯಿಂದ ಕೆಲಸ ಮಾಡುವುದರಿಂದ ಉಳಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಅನೇಕ ಸಾಂಸೃತಿಕ ಕಾರ್ಯಕ್ರಮಗಳಾದ ಜಾನಪದ ನೃತ್ಯ, ಡೋಳ್ಳು ಕುಣಿತ, ಕನ್ನಡ ಹಾಡು, ಸಂಗೀತ, ಭಾಷಣ ಹಾಗೂ ನೃತ್ಯಗಳು ನಡೆದವು. ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ವಿವಿಧ ಪ್ರದರ್ಶನಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮದ ಚೈತನ್ಯಕ್ಕೆ ಕೊಡುಗೆ ನೀಡಿದರು. ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ತಮ್ಮ ಪ್ರತಿಭೆ ಮತ್ತು ಉತ್ಸಾಹವನ್ನು ಪ್ರದರ್ಶಿಸಿದರು.
ಅಂಗಡಿ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ. ಸ್ಪೂರ್ತಿ ಅಂಗಡಿ ಪಾಟೀಲ, ಆಡಳಿತಾಧಿಕಾರಿ ರಾಜು ಜೋಶಿ, ಪ್ರಾಚಾರ್ಯ ಡಾ. ಆನಂದ ಭೀ. ದೇಶಪಾಂಡೆ, ಡಾ. ಕಿರಣ ಪೋತದಾರ, ಕಾರ್ಯಕ್ರಮದ ಸಾಂಸೃತಿಕ ಸಂಯೋಜಕ ಪ್ರೊ. ಗೌತಮ ದೆಮಟ್ಟಿ ಸೇರಿದಂತೆ ಎಲ್ಲ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹರ್ಷೋಲ್ಲಾಸದಿಂದ ಪಾಲ್ಗೊಂಡರು.
ದೀಪಾ ಬೆಣ್ಣಿ ನಿರೂಪಿಸಿ ವಂದಿಸಿದರು.