ಖಾಸಗಿ ಹೆಲಿಕಾಪ್ಟರ್ ಗಳ ಮೇಲಿನ 25 ವರ್ಷಗಳ ನಿಷೇಧ ತೆರವುಗೊಳಿಸಿದ ಶ್ರೀಲಂಕಾ

ಕೊಲೊಂಬೋ, ಜ 17 :     ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಉದ್ದೇಶದಿಂದ  ರಾಜಧಾನಿ ಕೊಲೊಂಬೋದಿಂದ ಖಾಸಗಿ ಹೆಲಿಕಾಪ್ಟರ್ ಗಳ ಮೇಲೆ ಕಳೆದ 25 ವರ್ಷಗಳಿಂದ ವಿಧಿಸಲಾಗಿದ್ದ ನಿರ್ಬಂಧವನ್ನು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಷ ಅವರು ತೆರವುಗೊಳಿಸಿದ್ದಾರೆ.  

ಈಗ ಕೊಲೊಂಬೋದ ಗಾಲೆ ಫೇಸ್ ನ ರಕ್ಷಣಾ ಮೈದಾನದಿಂದ ಖಾಸಗಿ ಪ್ರವಾಸಿ ಹೆಲಿಕಾಪ್ಟರ್ ಗಳು ಹಾರಾಟ ನಡೆಸಬಹುದು ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. ಹಾರಾಟ ಪುನಾರಂಭಕ್ಕೆ ಈಗಾಗಲೇ ನಾಲ್ಕು ಸ್ಥಳೀಯ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ.  

ನಾವು ಈ ಅವಕಾಶಕ್ಕಾಗಿ ಬಹಳ ಕಾಲದಿಂದ ಕಾಯುತ್ತಿದ್ದೆವು ಎಂದು ಸ್ಕೈಲಾರ್ಕ್ ಏವಿಯೇಷನ್ ಫ್ಲೈಟ್ ನ ವ್ಯವಸ್ಥಾಪಕ ಕ್ಯಾಪ್ಟನ್ ರವಿ ಧರ್ಮ ವಿಕ್ರಮ ಹೇಳಿದ್ದಾರೆ. ಇದು ಶ್ರೀಲಂಕಾ ವಿಮಾನಯಾನ ಇತಿಹಾಸದಲ್ಲಿ ಬಹುದೊಡ್ಡ ಮೈಲಿಗಲ್ಲು ಎಂದು ಅವರು ಬಣ್ಣಿಸಿದ್ದಾರೆ.       

ಇದರಿಂದ ನಾವು ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡುವ ಜೊತೆಗೆ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡಬಹುದು ಎಂದರು.  

  ಶ್ರೀಲಂಕಾಕ್ಕೆ ಆಗಮಿಸುವ ಹಲವು ಶ್ರೀಮಂತ ಪ್ರವಾಸಿಗರು ದ್ವೀಪದ ಪ್ರಮುಖ ಪ್ರವಾಸಿ ತಾಣಗಳಿಗೆ ಹೆಲಿಕಾಪ್ಟರ್ ಮೂಲಕ ಬಹುಬೇಗ ತಲುಪಿ, ಸುಂದರ ನೋಟಗಳಿಗೆ ಸಾಕ್ಷಿಯಾಗ ಬಯಸುತ್ತಾರೆ ಎಂದು ಧರ್ಮವಿಕ್ರಮ ಅಭಿಪ್ರಾಯಪಟ್ಟರು.  

2020ರಲ್ಲಿ ಕನಿಷ್ಠ 2 ಮಿಲಿಯನ್ ಪ್ರವಾಸಿಗರನ್ನು ಹಾಗೂ 2025ರ ವೇಳೆಗೆ 10 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸುವ ಗುರಿಯನ್ನು ಶ್ರೀಲಂಕಾ ಹೊಂದಿದೆ. ಕಳೆದ ವರ್ಷ 1.9 ಮಿಲಿಯನ್ ಪ್ರವಾಸಿಗರು ಲಂಕೆಗೆ ಭೇಟಿ ನೀಡಿದ್ದರು.