ಶ್ರೀ ಆತ್ಮಾನಂದ ಜಾನಪದ ಮಹಿಳಾ ಕಲಾ ಸಂಘ ಸಾಂಸ್ಕೃತಿಕ ಕಾರ್ಯಕ್ರಮ

ಶ್ರೀ ಆತ್ಮಾನಂದ ಜಾನಪದ ಮಹಿಳಾ ಕಲಾ ಸಂಘ ಸಾಂಸ್ಕೃತಿಕ ಕಾರ್ಯಕ್ರಮ Sri Atmananda Folk Mahila Kala Sangh Cultural Program

ಧಾರವಾಡ 24 : ಜಾನಪದ ಬದುಕು, ನಮ್ಮ ಪಿತ್ರಾರ್ಜಿತರ ಅಸ್ತಿ. ಅದು ನಮ್ಮ ಜನಪದರ ಜೀವನಾನುಭವದ ರಸಘಟ್ಟಿ. ಅಂತಹ ಶ್ರೀಮಂತ ಜಾನಪದ ಕಲೆ, ಸಾಹಿತ್ಯ ಭಂಡಾರವನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸಬೇಕಿದೆ ಎಂದು ಕ.ವಿ.ವ.ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಹೇಳಿದರು.

ಅವರು ನಗರದ ಕಸಾಪ ಸಭಾಭವನದಲ್ಲಿ ಪುಡಕಲ ಶ್ರೀ ಆತ್ಮಾನಂದ ಜಾನಪದ ಮಹಿಳಾ ಕಲಾ ಸಂಘವು ಎರಡನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನಪದರು ಅವಿದ್ಯಾವಂತರಾಗಿದ್ದರೂ ಜನಪದ ಕಾವ್ಯಕಟ್ಟುವ ಕಲೆಯನ್ನು ತಿಳಿದವರಾಗಿದ್ದರು. ಅವರು ತಮ್ಮ ಬದುಕಿನ ಸುಖ-ದುಃಖಗಳನ್ನು ಹಾಡಿನ ಮೂಲಕ ಅಭಿವ್ಯಕ್ತಿಗೊಳಿಸಿ, ಹಾಡಿ ತಮ್ಮ ಹೃದಯದ ಭಾರವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದರು. ಜಾನಪದ ಸಾಹಿತ್ಯದಲ್ಲಿ ನಮ್ಮ ಬದುಕನ್ನು ತಿದ್ದಿ ಸಂಸ್ಕಾರಗೊಳಿಸುವ ದಿವ್ಯ ಶಕ್ತಿ ಇದೆ. ಅಂತಹ ಸಾಹಿತ್ಯವನ್ನು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಅಧ್ಯಯನ ಮಾಡುವ ಅಗತ್ಯವಿದೆ ಎಂದು ಹೇಳಿದರು.ಕ.ವಿ.ಸ.ಸಂಘದ ಕೋಶಾಧ್ಯಕ್ಷರಾದ ಸತೀಶ ತುರಮರಿ ಮಾತನಾಡಿ, ಜಾನಪದ ಕಲಾವಿದರು ಬಡವರಿರಬಹುದು. ಆದರೆ ಅವರಲ್ಲಿ ಜಾನಪದ ಕಲಾ ಶ್ರೀಮಂತಿಕೆ ಇದೆ. ಸರ್ಕಾರ ಅಂತಹ ಕಲಾವಿದರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಬೇಕು. ಅಂದಾಗ ಕಲಾವಿದರ ಬದುಕು ಹಸನಾಗುತ್ತದೆ. ಪಾಶ್ಚಾತ್ಯ ಶೈಲಿಯ ಸಂಗೀತದಿಂದ ಮೂಲ ಜಾನಪದಕ್ಕೆ ಧಕ್ಕೆಯಾಗಬಾರದೆಂದು ಹೇಳಿದರು.ಪುಡಕಲಕಟ್ಟಿ ಗ್ರಾಮಪಂಚಾಯತ ಅಧ್ಯಕ್ಷೆ ನೇತ್ರಾವತಿ ಬುಡರಕಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಪುಡಕಲಕಟ್ಟಿಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಹಾಬಳೇಶ್ವರ ಕೋರಕೊಪ್ಪ ಮಾತನಾಡಿ, ಜಾನಪದ ಕಲಾವಿದರು ನಮ್ಮ ಸಂಸ್ಕೃತಿಯ ಆಸ್ತಿ ಇದ್ದಂತೆ ಅವರಿಗೆ ನಮ್ಮ ಸಹಕಾರವಿದೆ ಎಂದು ಹೇಳಿದರು.ಹಿರಿಯ ಜಾನಪದ ಕಲಾವಿದರಾದ ಎಸ್‌. ಎನ್‌. ಬಿದರಳ್ಳಿ, ಮಡಿವಾಳಪ್ಪ ಸಿಂದೋಗಿ, ಗೀರೀಶ ರಡ್ಡೇರ, ಸಾವಕ್ಕ ಲೋಕೊರ, ಶಿಲ್ಪಾ ಚಂದರಗಿ, ಚನ್ನವ್ವ ಹಡಪದ, ಮಂಜುಳಾ ಗಾಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.ಜಿಲ್ಲೆಯ ವಿವಿಧ ತಾಲೂಕುಗಳ ಜಾನಪದ ಕಲಾ ತಂಡಗಳು ಸೊಗಸಾಗಿ ಪ್ರದರ್ಶನ ನೀಡಿ ಮನತಣಿಸಿದವು. ಯಕ್ಕೇರ​‍್ಪ ನಡುವಿನಮನಿ (ಶಾನವಾಡ ಮಾಸ್ತರ) ಸ್ವಾಗತಿಸಿ, ನಿರೂಪಿಸಿದರು.