ಕ್ರೀಡೆಗಳು ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸುತ್ತವೆ: ಡಿಗ್ರಜ್

ಕ್ರೀಡೆಗಳು ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸುತ್ತವೆ: ಡಿಗ್ರಜ್ Sports instill a competitive spirit in children: DeGraz

ಕ್ರೀಡೆಗಳು ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸುತ್ತವೆ: ಡಿಗ್ರಜ್ 

ಹಾರೂಗೇರಿ 05: ಕ್ರೀಡೆಗಳಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಶಕ್ತಿ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ. ತಮ್ಮ ಪ್ರತಿಭೆಗೆ ತಕ್ಕಂತೆ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ನಿವೃತ್ತ ತಾಲೂಕು ದೈಹಿಕ ಪರೀವೀಕ್ಷಕ ಡಿ.ಎಸ್‌.ಡಿಗ್ರಜ್ ಹೇಳಿದರು. 

  ಪಟ್ಟಣದ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಕೇಂದ್ರ ಶಾಲಾ ಆವರಣದಲ್ಲಿ ಮಂಗಳವಾರ ನಡೆದ ಕೇಂದ್ರಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆಯಲ್ಲೂ ಉನ್ನತ ಸಾಧನೆ ಮಾಡಿ ಅನೇಕ ಜನರು ಬದುಕು ಕಟ್ಟಿಕೊಂಡಿದ್ದಾರೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸ್ಪರ್ಧಾ ಮನೋಭಾವ ಹೆಚ್ಚುತ್ತದೆ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಯುತ್ತದೆ. ಮಕ್ಕಳಲ್ಲಿ ಶಿಸ್ತು, ಸಮಯಪಾಲನೆ ಹಾಗೂ ಜ್ಞಾನವನ್ನು ರೂಢಿಸಿಕೊಳ್ಳಲು ಕ್ರೀಡೆಗಳು ಪ್ರೇರೆಪಿಸುತ್ತವೆ ಎಂದು ಹೇಳಿದರು. 

  ಸರಕಾರಿ ಪ್ರೌಢಶಾಲೆ ಮುಖ್ಯಾಧ್ಯಾಪಕಿ ರತ್ನಾ ಖೇಮಲಾಪೂರೆ ಅವರು ಭಾವಚಿತ್ರ ಪೂಜೆ ನೇರವೇರಿಸಿ ಮಾತನಾಡುತ್ತ ಇಂದಿನ ವಿದ್ಯಾರ್ಥಿನಿಯರು ಮತ್ತು ಮಹಿಳೆಯರಲ್ಲಿ ಸ್ಥೂಲಕಾಯ, ಬೊಜ್ಜು ಹೆಚ್ಚಾಗಿ ಕಂಡು ಬರುತ್ತಿದ್ದು, ವಿದ್ಯಾರ್ಥಿನಿಯರು ದೈಹಿಕ ಚಟುವಟಿಕೆಗಳ ಜತೆಗೆ, ವ್ಯಾಯಾಮ, ಧ್ಯಾನ, ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ತೀವ್ರ ಅಗತ್ಯವಿದೆ ಎಂದರು. 

   ಹಿರಿಯ ದೈಹಿಕ ಶಿಕ್ಷಕ, ಮುಖ್ಯೋಪಾಧ್ಯಾಯರಾದ ಎಸ್‌.ಎಮ್‌.ಚೌಗುಲೆ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಕ್ರೀಡಾ ನಿಯಮಗಳು, ಕ್ರೀಡೆಯ ಮಹತ್ವದ ಬಗ್ಗೆ ಹೇಳಿದರು. ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸರದಾರ ಜಮಾದಾರ ಬದಲಾದ ಎಸ್‌ಜಿಎಫ್‌ಐ ಕ್ರೀಡಾಕೂಟದ ನಿಯಮಗಳನ್ನು ತಿಳಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಸಿ.ಬಿ.ಮುಂಡರಗಿ, ಕೆ.ಆರ್‌.ಶಿಂಗೆ, ಜಗದೀಶ ಗಡಾದ, ಗೀರೀಶ ಗಲಗಲಿ, ಸದಾಶಿವ ಬಡಿಗೇರ, ಪ್ರತಾಪ ನಾಗರಾಳೆ ಹಾಗೂ ಕೇಂದ್ರಮಟ್ಟದ ಶಾಲೆಗಳ ದೈಹಿಕ ಶಿಕ್ಷಕರು ಮತ್ತು ಕ್ರೀಡಾಪಟುಗಳು ಉಪಸ್ಥಿತರಿದ್ದರು. 

 ಕೇಂದ್ರ ಸಮೂಹ ಸಂಪನ್ಮೂಲ ಅಧಿಕಾರಿ ಮಹಾಂತೇಶ ಮುಗಳಖೋಡ ಸ್ವಾಗತಿಸಿದರು. ಎಂ.ಡಿ. ನಾಯಿಕ ಕಾರ್ಯಕ್ರಮ ನಿರೂಪಿಸಿದರು. ಕೆ.ಜಿ.ಲುಡಬುಡೆ ವಂದಿಸಿದರು.