ಪ.ಜಾತಿ, ಪ.ಪಂಗಡದ ಕಲಾವಿದರಿಗೆ ಪ್ರೋತ್ಸಾಹಿಸಲು ವಿಶೇಷ ಕಾರ್ಯಕ್ರಮಗಳ ಆಯೋಜನೆ: ಸಚಿವ ಶಿವರಾಜ್ ತಂಗಡಗಿ

ಪ.ಜಾತಿ, ಪ.ಪಂಗಡದ ಕಲಾವಿದರಿಗೆ ಪ್ರೋತ್ಸಾಹಿಸಲು ವಿಶೇಷ ಕಾರ್ಯಕ್ರಮಗಳ ಆಯೋಜನೆ: ಸಚಿವ ಶಿವರಾಜ್ ತಂಗಡಗಿ Special programs to encourage artists from Scheduled Caste and Scheduled Tribes said Minister Shivar

ಬೆಳಗಾವಿ ಸುವರ್ಣ ವಿಧಾನಸೌಧ ಡಿ.10: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ಎಸ್ ತಂಗಡಗಿ ಹೇಳಿದರು. 

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಅವರು ಮಾತನಾಡಿದರು. 

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ಶಾಸಕ ಡಾ. ಅಶ್ವತ್ಥ ನಾರಾಯಣ ಸಿ.ಎನ್‌. ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಶಿವರಾಜ ತಂಗಡಗಿ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಸ್ತುತ ಕಷ್ಟದ ಪರಿಸ್ಥಿತಿಯಲ್ಲಿರುವ 11,154 ಕಲಾವಿದರು, ಸಾಹಿತಿಗಳಿಗೆ ತಿಂಗಳಿಗೆ ರೂ. 2500 ರಂತೆ ಮಾಸಾಶನ ನೀಡಲಾಗುತ್ತಿದೆ.  ಅಲ್ಲದೆ 410 ಜನ ಮೃತ ಕಲಾವಿದರ ಪತ್ನಿಯರಿಗೂ ಮಾಸಿಕ 500 ರೂ. ಮಾಸಾಶನ ಪಾವತಿಸಲಾಗುತ್ತಿದೆ.  ಪ್ರಸಕ್ತ ವರ್ಷದ ನವೆಂಬರ್ ತಿಂಗಳಿನವರೆಗೂ ಮಾಸಾಶನ ಪಾವತಿಸಲಾಗಿದೆ.  ಮಾಸಾಶನ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ 1896 ಕಲಾವಿದರು, ಸಾಹಿತಿಗಳಿಗೂ ಕೂಡ ಮಾಸಾಶನ ಮಂಜೂರು ಮಾಡಲಾಗಿದೆ  ಎಂದರು.   

ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ಅವರು ಮಾತನಾಡಿ, ಈ ಹಿಂದೆ ಜಿಲ್ಲೆಗಳಲ್ಲಿ ಜಾನಪದ ಜಾತ್ರೆ ಕಾರ್ಯಕ್ರಮಗಳನ್ನು ಏರಿ​‍್ಡಸಿ, ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡಲಾಗುತ್ತಿತ್ತು, ಈ ಕಾರ್ಯಕ್ರಮವನ್ನು ಮುಂದುವರೆಸುವಂತೆ ಮನವಿ ಮಾಡಿದರು.  ಇದಕ್ಕೆ ಉತ್ತರಿಸಿದ ಸಚಿವ ಶಿವರಾಜ್ ತಂಗಡಗಿ, ಜಾನಪದ ಜಾತ್ರೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿಲ್ಲ. ಈ ವರ್ಷ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು,  ಸ್ಥಳೀಯ ಕಲೆಗಳನ್ನು, ಉಳಿಸಿ ಬೆಳೆಸುವ ಉದ್ದೇಶದಿಂದ ಚಿತ್ರದುರ್ಗ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ದೊಡ್ಡ ಮಟ್ಟದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ದಿನಾಂಕಗಳನ್ನು ಶೀಘ್ರ ನಿಗದಿಪಡಿಸಲಾಗುವುದು ಎಂದರು. ಮಂಗಳೂರಿನಲ್ಲಿಯೂ ಕಾರ್ಯಕ್ರಮ ಆಯೋಜಿಸಬೇಕು ಎಂದು ಸ್ಪೀಕರ್ ಯು.ಟಿ. ಖಾದರ್ ಮನವಿಗೆ ಸ್ಪಂದಿಸಿದ ಸಚಿವರು, ಮಂಗಳೂರಿನಲ್ಲಿಯೂ ಕಾರ್ಯಕ್ರಮ ಏರಿ​‍್ಡಸಲಾಗುವುದು ಎಂದು ಭರವಸೆ ನೀಡಿದರು.