ಮಹಿಳೆಯರ ಕಾನೂನು ರಕ್ಷಣೆ ಬಲಪಡಿಸುವತ್ತ ವಿಶೇಷ ಕಾರ್ಯಕ್ರಮ

ಮಹಿಳೆಯರ ಕಾನೂನು ರಕ್ಷಣೆ ಬಲಪಡಿಸುವತ್ತ ವಿಶೇಷ ಕಾರ್ಯಕ್ರಮ  Special program to strengthen legal protection for women

ಬೆಳಗಾವಿ 09: ಮಹಿಳೆಯರನ್ನು ಸಬಲಗೊಳಿಸುವುದು ಮತ್ತು ಅವರಲ್ಲಿ ಕಾನೂನು ಜಾಗೃತಿ ಹೆಚ್ಚಿಸುವ ಮಹತ್ವದ ಕ್ರಮವಾಗಿ ವಿ.ಎಸ್‌. ಮಲ್ಹಾರ್ ಕಾನೂನು ನೆರವು ಸ್ಪರ್ಧೆಯ 4ನೇ ಆವೃತ್ತಿ ಆರಂಭವಾಯಿತು.  

ಈ ಕಾರ್ಯಕ್ರಮವು ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆಯ ಮಾಜಿ ಕಾನೂನು ಪ್ರಾಧ್ಯಾಪಕ ಪ್ರೊ. ವಿ.ಎಸ್‌. ಮಲ್ಹಾರ್ ಅವರ ಕೊಡುಗೆಗಳನ್ನು ಸ್ಮರಿಸುವುದಾಗಿದೆ. ಈ ಸ್ಪರ್ಧೆಯನ್ನು ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆ, ಮೈಸೂರು ಜೆಎಸ್‌ಎಸ್ ಕಾನೂನು ಕಾಲೇಜು ಮತ್ತು ಭಾರತ ಸರ್ಕಾರದ ಕಾನೂನು ಹಾಗೂ ನ್ಯಾಯ ಸಚಿವಾಲಯದ ಸಂಯುಕ್ತ ಸಹಯೋಗದಲ್ಲಿ ಆಯೋಜಿಸಲಾಯಿತು. ಬೆಳಗಾವಿ ಜಿಲ್ಲೆಯ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಂದ ನೇರವಾಗಿ ದೂರುಗಳನ್ನು ಸಂಗ್ರಹಿಸಲಾಯಿತು. ತಳಮಟ್ಟದ ಆಡಳಿತದಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಉದ್ದೇಶಿಸಲಾಗಿದೆ. ಕಾರ್ಯಕ್ರಮದ ವಿಶೇಷ ಅಂಶವೆಂದರೆ ‘ಸ್ಪೀಡ್ ಮೆಂಟರಿಂಗ್ ಸೆಶನ್‌’, ಇದರಲ್ಲಿ ಆರ್‌.ಎಲ್‌. ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಮಹಿಳಾ ಕಾನೂನುಗಳ ಬಗ್ಗೆ ಮಹತ್ವದ ಕಾನೂನು ಜಾಗೃತಿ ನೀಡಿದರು. ಮಹಿಳೆಯರಲ್ಲಿ ತಮ್ಮ ಕಾನೂನು ಹಕ್ಕುಗಳು ಮತ್ತು ರಕ್ಷಣೆಯ ಬಗ್ಗೆ ಸಬಲಗೊಳಿಸುವುದನ್ನು ಉದ್ದೇಶ ಹೊಂದಿದೆ.  

ಈ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಬೆಳಗಾವಿ ಇವರ ಆಶ್ರಯದಲ್ಲಿ, ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜಿನ ಕಾನೂನು ನೆರವು ಘಟಕದ ಸಹಯೋಗದಲ್ಲಿ ನಡೆಸಲಾಯಿತು.  

ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಚೇತನ, ಸ್ಪಂದನ ಸಂಸ್ಥೆಯ ವಿ. ಸುಶೀಲಾ, ಮಕ್ಕಳ ಅಭಿವೃದ್ಧಿ ಮತ್ತು ರಕ್ಷಣಾ ಅಧಿಕಾರಿ ರಾಮಮೂರ್ತಿ, ವಕೀಲ ಅಮೇಯ ಕುಲಕರ್ಣಿ, ಪ್ರೊ. ಚೇತನ್ ಕುಮಾರ್ ಟಿ.ಎಂ., ಆರ್‌.ಎಲ್‌. ಕಾನೂನು ಕಾಲೇಜಿನ ಕಾನೂನು ನೆರವು ಘಟಕ ಸಂಯೋಜಕ ಪ್ರೊ. ಪ್ರಥಮ್ ರೇವಣ್ಕರ್, ಪಂಚಾಯತ್ ರಾಜ್ ಸಂಸ್ಥೆಯ ಸದಸ್ಯರು, ಆಶಾ ಕಾರ್ಯಕರ್ತೆಯರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.  

ಕಾರ್ಯಕ್ರಮವು ಮಹಿಳೆಯರ ಕಾನೂನು ರಕ್ಷಣೆಯನ್ನು ಬಲಪಡಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದ್ದು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಕಾರದ ಮೂಲಕ ಮಹಿಳೆಯರ ಮೇಲಿನ ಹಿಂಸೆ ಮತ್ತು ಭೇದಭಾವವನ್ನು ತಡೆಯುವ ಮಹತ್ವದ ಪ್ರಯತ್ನವಾಗಿದೆ.