ಸೆ.15ರವರೆಗೆ ವಿಶೇಷ ಜಾಗೃತಿ ಅಭಿಯಾನ

ಸೆ.15ರವರೆಗೆ ವಿಶೇಷ ಜಾಗೃತಿ ಅಭಿಯಾನ  Special awareness campaign until September 15


ಗದಗ  29: ಗ್ರಾಮೀಣ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ವಿಬಿ ಜಿ ರಾಮ್ ಜಿ ಯೋಜನೆಯಡಿ ಸೆ.15ರವರೆಗೆ ತಾಲೂಕಿನ 27 ಗ್ರಾಪಂಗಳಲ್ಲಿ ಜಾಬ್‌ಕಾರ್ಡ್‌ ಮೇಳ ಹಾಗೂ ಮನೆ-ಮನೆ ಭೇಟಿ ಮೂಲಕ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಚ್‌.ಎಸ್‌. ಜನಗಿ ತಿಳಿಸಿದ್ದಾರೆ.  

ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಅರ್ಹ ಕುಟುಂಬಗಳಿಗೆ ಯೋಜನೆಯಡಿ ಲಭ್ಯವಿರುವ ವಿವಿಧ ಕಾಮಗಾರಿಗಳ ಕುರಿತು ಮಾಹಿತಿ ನೀಡಿ, ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುವಂತೆ ಪ್ರೇರೇಪಿಸಲಾಗುತ್ತಿದೆ. ಹೊಸದಾಗಿ ಜಾಬ್‌ಕಾರ್ಡ್‌ ಪಡೆಯಲು ಅರ್ಹ ಕುಟುಂಬಗಳನ್ನು ಗುರುತಿಸುವ ಕಾರ್ಯವೂ ನಡೆಯುತ್ತಿದೆ.  

ಗ್ರಾಮ ಕಾಯಕ ಮಿತ್ರರು, ಬಿಎಫ್‌ಟಿ ಹಾಗೂ ಗ್ರಾಪಂ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಉದ್ಯೋಗ ಬೇಡಿಕೆ ಸಂಗ್ರಹಿಸುವುದು ಮತ್ತು ಯೋಜನೆಯಡಿ ಲಭ್ಯವಿರುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಲಿದ್ದಾರೆ. ಈ ಕಾರ್ಯದ ಮೇಲ್ವಿಚಾರಣೆಯನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ವಹಿಸಲಿದ್ದಾರೆ.  

ಗ್ರಾಮೀಣ ಕುಟುಂಬಗಳಿಗೆ ಹೆಚ್ಚಿನ ಉದ್ಯೋಗ ಒದಗಿಸುವುದು ಹಾಗೂ ಮಾನವ ದಿನಗಳನ್ನು ಸೃಜಿಸುವುದು ಮೇಳದ ಪ್ರಮುಖ ಉದ್ದೇಶವಾಗಿದೆ. ಜಾಬ್‌ಕಾರ್ಡ್‌ ಹೊಂದಿರುವ ಹಾಗೂ ಇ-ಕೆವೈಸಿ ಪೂರ್ಣಗೊಳಿಸಿರುವ ಪ್ರತಿಯೊಬ್ಬ ಅರ್ಹ ಕೂಲಿಕಾರ್ಮಿಕರೂ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಾ. ಜನಗಿ ತಿಳಿಸಿದ್ದಾರೆ.  

ಬರ ಪರಿಸ್ಥಿತಿಯಿಂದ ಕೃಷಿ ಕೆಲಸದ ಅವಕಾಶಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಾಬ್‌ಕಾರ್ಡ್‌ ಮೇಳ ಮಹತ್ವ ಪಡೆದಿದೆ. ಗ್ರಾಮದಲ್ಲಿಯೇ ಉದ್ಯೋಗ ದೊರೆಯುವುದರಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯಲು ಸಹಕಾರಿಯಾಗಲಿದೆ. ಈ ಕುರಿತು ಸ್ವಚ್ಛ ವಾಹಿನಿ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸಹಾಯಕ ನಿರ್ದೇಶಕ ಕುಮಾರ ಪುಜಾರ ತಿಳಿಸಿದ್ದಾರೆ.